– ಮುಂಬೈನಲ್ಲಿ ಏನು ಆಗಿದೆಯೋ ಗೊತ್ತಿಲ್ಲ
– ಸಿಡಿ ಪ್ರಕರಣದಲ್ಲಿ ಸಂತ್ರಸ್ತರು ಯಾರು?
ಬೆಂಗಳೂರು: 6 ಮಂದಿ ಸಚಿವರು ಕೋರ್ಟ್‍ಗೆ ಹೋಗಿದ್ದಾರೆ. ತಮ್ಮ ಬಗ್ಗೆ ನಮಗೆ ಆತ್ಮವಿಶ್ವಾಸ ಇದ್ದರೆ ಇವರು ಯಾಕೆ ಕೋರ್ಟ್‍ಗೆ ಹೋಗಿದ್ದಾರೆ. ಸಾರ್ವಜನಿಕವಾಗಿ ಜನ ಏನು ಮಾತನಾಡಿಕೊಳ್ಳುತ್ತಾರೆ ಎನ್ನುವುದು ತಿಳಿಯುವುದಿಲ್ಲವೇ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
12 ಜನ ಮುಂಬೈಗೆ ಹೋಗಿದ್ದರು. ಏನು ಆಗಿದೆಯೋ? ಯಾರ್ಯಾರ ಪಾತ್ರ ಏನು ಇದೆಯೋ ನನಗೆ ಗೊತ್ತಿಲ್ಲ. ಈ ರೀತಿಯ ಸಿಡಿ ಮಾಡಿಕೊಂಡು ನಮ್ಮ ಮುಖಕ್ಕೆ ನಾವೇ ಮಸಿ ಬಳಿದುಕೊಳ್ಳುವುದು ಬೇಕಿತ್ತಾ ಎಂದು ಪ್ರಶ್ನಿಸಿದರು.
ನಾನು ಯಾಕೆ ಇಷ್ಟು ಈ ವಿಚಾರವಾಗಿ ಓಪನ್ ಆಗಿ ಮಾತನಾಡುತ್ತಿದ್ದೇನೆ. ನನ್ನನ್ನು ಯಾರು ಎಷ್ಟು ತೇಜೋವಧೆ ಮಾಡಿದ್ದಾರೆ ಎನ್ನುವುದು ಗೊತ್ತು. ನಾನು ಜೀವನದಲ್ಲಿ ಒಮ್ಮೆ ತಪ್ಪು ಮಾಡಿದ್ದೆ. ಆದರೆ ಆ ವಿಚಾರವನ್ನು ನಾನು ನೇರವಾಗಿ ವಿಧನಾಸಭಾ ಕಲಾಪದಲ್ಲೇ ಹೇಳಿದ್ದೇನೆ. ತಪ್ಪನ್ನು ಸರಿ ಪಡಿಸಿಕೊಳ್ಳುವುದು ಮನುಷ್ಯನ ಧರ್ಮವಾಗಿದೆ. ಅಧಿಕಾರ ಗಿಟ್ಟಿಸಿಕೊಳ್ಳುಲು ಈ ಮಟ್ಟಿಗೆ ಇಳಿದು ರಾಜಕಾರಣ ಮಾಡಬಾರದು ಎಂದರು.
ಸಮಾಜದಲ್ಲಿ ವ್ಯವಸ್ಥೆಯ ಬಗ್ಗೆ ಜನರಿಗೆ ಅಸಹ್ಯ ಬರುವಂತಹ ವಾತಾವರಣ ನಿರ್ಮಾಣವಾಗುತ್ತಿದೆ. ಆ ಹೆಣ್ಣುಮಗಳು ಸಂತ್ರಸ್ತೆ ಆಗಿದ್ರೆ ಇಷ್ಟು ದಿನದ ಒಳಗಾಗಿ ಆಕೆ ಸಾರ್ವಜನಿಕವಾಗಿ ಬಂದು ಹೇಳಿಕೊಳ್ಳಬೇಕಿತ್ತು ಆದರೆ ಬಂದಿಲ್ಲ. ಹೆಣ್ಣು ಮಗಳ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಬಂದು ಆಗಿದೆ. ಆಕೆ ಸಂತ್ರಸ್ತೆಯೋ ಅಥವಾ ಈ ಪ್ರಕರಣದಲ್ಲಿರುವ ಸಚಿವರು ಹಾಗೂ ಅವರ ಕುಟುಂಬದವರು ಸಂತ್ರಸ್ತರಾಗಿದ್ದಾರಾ ಎಂದು ಪ್ರಶ್ನೆ ಮಾಡಿದರು.
ಬಜೆಟ್‍ನಲ್ಲಿ ಯಾವುದೇ ಸ್ಪಷ್ಟತೆಗಳಿಲ್ಲ. 6 ವಲಯಗಳನ್ನು ಮಾಡಿಕೊಂಡು ಹೊಸ ರೀತಿಯ ಬಜೆಟ್ ಮಂಡನೆ ಮಾಡುವ ಸಂಪ್ರದಾಯವನ್ನು ಆರಂಭಿಸಿದ್ದಾರೆ. ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗೆ ಆದ್ಯತೆ ನೀಡಿದ್ದೇನೆ ಎಂದು ಹೇಳುತ್ತಾರೆ. ಆದರೆ ಬಜೆಟ್‍ನಲ್ಲಿ ಇದು ಎಲ್ಲಿದೆ? ಯಾವುದೋ ಕಾರ್ಯಕ್ರಮದ ಮೂಲಕವಾಗಿ 6 ಸಾವಿರ ಮಹಿಳೆಯರಿಗೆ ಉದ್ಯೋಗ ನೀಡಿದ್ದೇವೆ ಎಂದು ಹೇಳಿದ್ದಾರೆ. ಆದರೆ ಈ ಕುರಿತಾಗಿ ನನಗೆ ಮಾಹಿತಿ ಇಲ್ಲ ಹುಡುಕುತ್ತಿದ್ದೇನೆ ಎಂದರು.
ಬಿಜೆಪಿ ಶಾಸಕರು ಇದೀಗ ಅವರ ಕ್ಷೇತ್ರಗಳಲ್ಲಿ ಗುದ್ದಲಿ ಪೂಜೆ ಮಾಡಿದ್ದಾರೆ. ಕೆರೆ ತುಂಬಿಸಿದ್ದಾರೆ ಅದಲ್ಲಾ ನನ್ನ ಆಡಳಿತಾವಧಿಯಲ್ಲಿ ಕೊಟ್ಟಿರುವ ಅಭಿವೃದ್ಧಿ ಕಾರ್ಯಗಳಾಗಿವೆ. ನೀವು ಹೊಸತಾಗಿ ಏನು ಕೊಟ್ಟಿಲ್ಲ. ನಾನು ಈ ಎಲ್ಲ ವಿಚಾರಗಳ ಕುರಿತಾಗಿ ಮಾತನಾಡಿರಲಿಲ್ಲ. ಕೊರೊನಾ, ನೆರೆಹಾವಳಿ ಅಂತ ಎಲ್ಲಾ ಇತ್ತು ಹೀಗಾಗಿ ಈ ವಿಚಾರವಾಗಿ ನಾನು ಮಾತನಾಡಿರಲಿಲ್ಲ. ಇದೀಗ ಇವರ ಬಜೆಟ್ ಯಾವ ಪುರುಷಾರ್ಥ ಎಂದು ನನಗೆ ತಿಳಿಯುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.