ಬೆಂಗಳೂರು: ತಂದೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ, ಯಾರೂ ಆತಂಕಕ್ಕೊಳಗಾಗಬೇಕಿಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಧೈರ್ಯ ತುಂಬಿರುವ ಅವರು, ಮುಂಜಾಗ್ರತೆ ದೃಷ್ಟಿಯಿಂದ ಪೂಜ್ಯ ತಂದೆಯವರು ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದು, ಅವರಲ್ಲಿ ಯಾವುದೇ ರೋಗಲಕ್ಷಣಗಳಿಲ್ಲ. ಆರೋಗ್ಯ ಸ್ಥಿತಿ ಎಂದಿನಂತೆ ಸಹಜವಾಗಿದೆ. ತಜ್ಞ ವೈದ್ಯರು ನಿರಂತರ ನಿಗಾ ವಹಿಸಿದ್ದಾರೆ. ಅಭಿಮಾನಿಗಳು, ಕಾರ್ಯಕರ್ತರು ಆತಂಕಗೊಳ್ಳಬೇಡಿ, ನೀವಿದ್ದಲ್ಲಿಂದಲೇ ಹಾರೈಸಿ. ನಾನು ಗೃಹ ಕ್ವಾರಂಟೈನ್ ನಲ್ಲಿ ಇರಲಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಮುಂಜಾಗರೂಕತೆ ದೃಷ್ಟಿಯಿಂದ ಪೂಜ್ಯ ತಂದೆಯವರು ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದು, ಅವರಲ್ಲಿ ಯಾವುದೇ ರೋಗಲಕ್ಷಣಗಳಿಲ್ಲ. ಆರೋಗ್ಯಸ್ಥಿತಿ ಎಂದಿನಂತೆ ಸಹಜವಾಗಿದೆ. ತಜ್ಞ ವೈದ್ಯರುಗಳು ನಿರಂತರ ನಿಗಾ ವಹಿಸಿದ್ದಾರೆ. ಅಭಿಮಾನಿಗಳು, ಕಾರ್ಯಕರ್ತರು ಆತಂಕಗೊಳ್ಳಬೇಡಿ, ನೀವಿದ್ದಲ್ಲಿಂದಲೇ ಹಾರೈಸಿ. ನಾನು ಗೃಹ ಕ್ವಾರಂಟೈನ್ ನಲ್ಲಿ ಇರಲಿದ್ದೇನೆ.
— Vijayendra Yeddyurappa (@BYVijayendra) August 3, 2020
ಭಾನುವಾರ ರಾತ್ರಿ ಸಿಎಂ ಯಡಿಯೂರಪ್ಪನವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಈ ಕುರಿತು ಸಿಎಂ ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದರು. ಅವರಿಗೆ ಸೋಂಕು ತಗುಲಿದ ಬೆನ್ನಲ್ಲೇ ಸಿಎಂ ಪುತ್ರಿ ಪದ್ಮಾವತಿಯವರಿಗೂ ಕೊರೊನಾ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಸಿಎಂ ಹಾಗೂ ಪುತ್ರಿ ಇಬ್ಬರನ್ನೂ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಣಿಪಾಲ್ ಆಸ್ಪತ್ರೆಯ 5ನೇ ಮಹಡಿಯ ವಿಶೇಷ ವಾರ್ಡ್ ನಲ್ಲಿ ಸಿಎಂ ಯಡಿಯೂರಪ್ಪ ದಾಖಲಾಗಿದ್ದು, ಪಕ್ಕದ ವಿಶೇಷ ವಾರ್ಡ್ ನಲ್ಲಿ ಪುತ್ರಿ ಪದ್ಮಾವತಿ ಅವರು ದಾಖಲಾಗಿದ್ದಾರೆ. ಪುತ್ರಿ ಪದ್ಮಾವತಿ ಅವರೇ ತಂದೆಯ ಆರೋಗ್ಯದ ಬಗ್ಗೆ ನಿಗಾ ವಹಿಸುತ್ತಿದ್ದಾರೆ. ಅಲ್ಲದೆ ಪದ್ಮಾವತಿ ಅವರು ಫೋನ್ ಮೂಲಕ ಕುಟುಂಬದವರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.
ಸಿಎಂ ಪುತ್ರ ವಿಜಯೇಂದ್ರ ಅವರಿಗೂ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, ಅವರ ವರದಿ ನೆಗೆಟಿವ್ ಬಂದಿದೆ. ಆದರೆ ಪುತ್ರಿ ಪದ್ಮಾವತಿ ಅವರಿಗೆ ಪಾಸಿಟಿವ್ ಬಂದಿದೆ. ಸಿಎಂಗೆ ಹಾಗೂ ಪುತ್ರಿಗೆ ಸೋಂಕು ತಗುಲಿದ ಹಿನ್ನೆಲೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಕಾರಣ ವಿಜಯೇಂದ್ರ ಅವರು 1 ವಾರಗಳ ಕಾಲ ಕ್ವಾರಂಟೈನ್ ಆಗುತ್ತಿದ್ದಾರೆ.