– ರಾತ್ರಿಯವರೆಗೆ ಶವದ ಜೊತೆ ಇದ್ದ ಆರೋಪಿ
– ವ್ಯಾನಿನಲ್ಲಿ ಮಹಿಳೆಯ ಮೃತದೇಹ ಪತ್ತೆ
ಮುಂಬೈ: ಅಂಗಡಿ ಮಾಲೀಕನೊಬ್ಬ ಮಹಿಳಾ ಗ್ರಾಹಕಳನ್ನು ಕೊಲೆ ಮಾಡಿದ್ದಲ್ಲದೇ ಆಕೆಯ ಶವದೊಂದಿಗೆ ಸೆಕ್ಸ್ ಮಾಡಿರುವ ಘಟನೆ ಮುಂಬೈನ ನಲಸೋಪರಾದಲ್ಲಿ ನಡೆದಿದೆ.
ಈ ಘಟನೆ ಜೂನ್ 26 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜೂನ್ 26 ರಂದು 32 ವರ್ಷದ ಮಹಿಳೆ ದಿನಸಿ ಖರೀದಿಸಲು ಮನೆಯಿಂದ ಹೊರ ಬಂದಿದ್ದರು. ಈ ವೇಳೆ ಮಹಿಳೆ ತನ್ನ ಮಕ್ಕಳಿಗೆ ಆಟಿಕೆಗಳನ್ನು ಖರೀದಿಸಲು ಆರೋಪಿಯ ಅಂಗಡಿಗೆ ಹೋಗಿದ್ದಾರೆ. ಅಂದಿನಿಂದ ಮೃತ ಮಹಿಳೆ ನಾಪತ್ತೆಯಾಗಿದ್ದಾರೆ.
ದಿನಸಿ ಖರೀದಿಸಲು ಹೋಗಿದ್ದ ಪತ್ನಿ ನಾಪತ್ತೆಯಾಗಿದ್ದರಿಂದ ಪತಿ ನಲಸೋಪರಾದಲ್ಲಿ ಟ್ಯೂಲಿಂಗ್ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾದ ದೂರು ದಾಖಲಿಸಿದ್ದರು. ಜೂನ್ 28 ರಂದು ನಲಸೋಪರಾದ ಚಂದನ್ ನಾಕಾದಲ್ಲಿ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಪಿಕ್ ಅಪ್ ವ್ಯಾನ್ ಒಳಗೆ ಮಹಿಳೆಯ ಶವ ಪತ್ತೆಯಾಗಿದೆ. ಶವವನ್ನು ಕಾಣೆಯಾದ ಮಹಿಳೆಯ ದೇಹ ಎಂದು ಗುರುತಿಸಲಾಗಿದೆ. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಪೊಲೀಸರು ಆಸ್ಪತ್ರೆಗೆ ರವಾನಿಸಿದ್ದರು.
ಮರಣೋತ್ತರ ವರದಿಯಲ್ಲಿ ಮಹಿಳೆಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಮತ್ತು ಶವದ ಜೊತೆ ಸೆಕ್ಸ್ ಸಹ ಮಾಡಲಾಗಿದೆ ಎಂದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ, ಪಾಲ್ಘರ್ ಅಪರಾಧ ವಿಭಾಗದ ತಂಡ ತನಿಖೆಯನ್ನು ಪ್ರಾರಂಭಿಸಿದೆ. ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗಿದ್ದು, ಈ ವೇಳೆ ಪಿಕ್‍ಅಪ್ ವ್ಯಾನ್ ಮಾಲೀಕರು ಈ ಪ್ರಕರಣಕ್ಕೂ ನಮಗೂ ಸಂಬಂಧ ಇಲ್ಲ ಎಂದು ನಿರಾಕರಿಸಿದ್ದಾರೆ. ಯಾಕೆಂದರೆ ಹಲವಾರು ದಿನಗಳಿಂದ ವಾಹನವನ್ನು ನಾಕಾದಲ್ಲಿ ರಸ್ತೆಯ ಪಕ್ಕದಲ್ಲಿ ನಿಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ತನಿಖೆಯಿಂದ ಅಂಗಡಿ ಮಾಲೀಕ ಕೊಲೆ ಮಾಡಿರುವುದು ತಿಳಿದುಬಂದಿದೆ. ಜೂನ್ 26 ರಂದು ಆಟಿಕೆಗಳ ಬೆಲೆಗೆ ಸಂಬಂಧಿಸಿದಂತೆ ಮಹಿಳೆ ಮತ್ತು ಅಂಗಡಿ ಮಾಲೀಕನ ಮಧ್ಯೆ ವಾಗ್ವಾದ ನಡೆದಿದೆ. ವಾದದ ನಂತರ ಆರೋಪಿ ಮಹಿಳೆಯನ್ನು ಅಂಗಡಿಯ ಹಿಂದೆ ಇರುವ ಕೋಣೆಗೆ ಎಳೆದುಕೊಂಡು ಹೋಗಿದ್ದಾನೆ. ಅಲ್ಲಿ ಆರೋಪಿ ಮಹಿಳೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಮಹಿಳೆಯ ಮೃತದೇಹದ ಜೊತೆ ಸೆಕ್ಸ್ ಮಾಡಿದ್ದಾನೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.
ಆರೋಪಿ ಅಂಗಡಿ ಮಾಲೀಕ ರಾತ್ರಿಯವರೆಗೆ ಮಹಿಳೆಯ ಶವದ ಜೊತೆ ಇದ್ದನು. ನಂತರ ಮಹಿಳೆಯ ಮೃತದೇಹವನ್ನು ನಿಲ್ಲಿಸಿದ್ದ ವ್ಯಾನ್‍ನಲ್ಲಿ ಎಸೆದಿದ್ದಾನೆ. ಅದಕ್ಕೂ ಮೊದಲು ಮಹಿಳೆ ಮೃತದೇಹವನ್ನು ಪ್ಲಾಸ್ಟಿಕ್ ಕವರಿನಲ್ಲಿ ಸುತ್ತಿ ಎಸೆದಿದ್ದಾನೆ. ಸದ್ಯಕ್ಕೆ ಪೊಲೀಸರು ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.