ಭುವನೇಶ್ವರ: ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಮತ್ತೆ ಬಿಜೆಪಿ ಗೆದ್ದಿದೆ. ಸಿಎಂ ಸರ್ಬಾನಂದ ಸೋನಾವಾಲ್ ಆಡಳಿತಕ್ಕೆ ಅಸ್ಸಾಂ ಜನತೆ ಜೈ ಎಂದಿದ್ದಾರೆ. ಕಾಂಗ್ರೆಸ್ ನೀಡಿದ ಬಿಗ್‍ಫೈಟ್ ಹೊರತಾಗಿಯೂ ಬಿಜೆಪಿ ಅಧಿಕಾರ ಉಳಿಸಿಕೊಂಡಿದೆ.
ಬಿಜೆಪಿಯೇತರ ಪಕ್ಷಗಳಿಗೆ ಮತ ಹಾಕಿ ಎಂದು ಅಖಿಲ್ ಗೋಗಯ್ ಜೈಲಿನಿಂದ ನೀಡಿದ ಕರೆಗೆ ಜನ ಓಗೊಟ್ಟಿಲ್ಲ. ಸಿಎಎ, ಎನ್‍ಆರ್‍ಸಿಗೆ ಭಾರೀ ವಿರೋಧ ವ್ಯಕ್ತವಾದ ಹೊರತಾಗಿಯೂ ಕಮಲ ಅರಳಿದೆ. ಅಸ್ಸಾಂನಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸಾಲು ಸಾಲು ಬೃಹತ್ ಸಮಾವೇಶಗಳನ್ನು ನಡೆಸಿದ್ದರು. ಇತ್ತ ಬಿಜೆಪಿಯೂ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬೃಹತ್ ಕ್ಯಾಂಪೇನ್ ಗಳನ್ನ ನಡೆಸಿದ್ದರು.
ಒಟ್ಟು 126 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 78, ಕಾಂಗ್ರೆಸ್ 46 ಮತ್ತು ಇತರರು ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. 2016ರಲ್ಲಿ ಬಿಜೆಪಿ 60, ಕಾಂಗ್ರೆಸ್ 26, ಅಸ್ಸಾಂ ಗಣ್ ಪರಿಷದ್ 14 ಮತ್ತು ಬೊಡೊಲ್ಯೆಂಡ್ ಪೀಪಲ್ಸ್ ಫ್ರಂಟ್ 12ರಲ್ಲಿ ಗೆಲುವು ಕಂಡಿದ್ದವು.
ಅಸ್ಸಾಂನಲ್ಲಿ ಬಿಜೆಪಿ ಗೆಲುವಿಗೆ ಕಾರಣವೇನು?
ಸಿಎಂ ಸರ್ಬಾನಂದ ಸೋನೊವಾಲ್ ಜನಪ್ರಿಯತೆ ಮತ್ತು ಹಿಮಂತ್ ಬಿಸ್ವಾಸ್ ಶರ್ಮಾ ಸಂಘಟನಾ ಚತುರತೆ ಗೆಲುವಿಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಸಿಎಎ ವಿಚಾರದಲ್ಲಿ ಅಮಿತ್ ಶಾ ನೀಡಿದ ಭರವಸೆ ವರ್ಕೌಟ್ ಆಗಿದೆ. ಇತ್ತು ಬದ್ರುದ್ದಿನ್ ಅಜ್ಮಲ್ ಪಕ್ಷದ ಜೊತೆಗೆ ಮೈತ್ರಿ ಕಾಂಗ್ರೆಸ್‍ಗೆ ಮೈನಸ್ ಆಗಿದ್ದು, ಪ್ರಚಾರಕ್ಕೆ ತೆರಳಲು ರಾಹುಲ್ ಗಾಂಧಿ ನಿರಾಸಕ್ತಿ ತೋರಿದ್ದರು ಎನ್ನಲಾಗುತ್ತಿದೆ.