ಬೆಂಗಳೂರು: ಕಲಾಪ ನಡೆಸೋದು ಬೇಡ ನಡೀರಿ, ಎಲ್ಲರೂ ಪಿಕ್‍ನಿಕ್‍ಗೆ ಹೋಗೋಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ವಿಧಾನಸಭಾ ಕಲಾಪದ ಸಂದರ್ಭದಲ್ಲಿ ಸಚಿವರು ಹಾಗೂ ಅಧಿಕಾರಿಗಳು ಗೈರಾಗಿದ್ದರು. ಇದರಿಂದ ಗರಂ ಆದ ಸಿದ್ದರಾಮಯ್ಯ, ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೀತಿದೆ. ಇಂತಹ ಸಂದರ್ಭದಲ್ಲಿ ಸಚಿವರು, ಅಧಿಕಾರಿಗಳು ಇರಬೇಕು. ಇವರು ಇಲ್ಲದೆ ಚರ್ಚೆ ಮಾಡಿ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
Advertisement
Advertisement
ಸಿದ್ದರಾಮಯ್ಯ ಹೀಗಂದ ಕೂಡಲೇ ಡಿಸಿಎಂ ಗೋವಿಂದ ಕಾರಜೋಳ ಎದ್ದು ನಿಂತು ನಾನಿದ್ದೀನಿ ಅಂದ್ರು. ಆಗ ಸಿದ್ದರಾಮಯ್ಯ ಅವರು, ಕಾರಜೋಳ ನೀವು ಒಬ್ಬರೇ ಇದ್ದೀರಲ್ಲ, ಏನು ಎಲ್ಲದಕ್ಕೂ ನಿಮ್ಮಿಂದ ಉತ್ತರ ಕೊಡೋಕೆ ಆಗುತ್ತಾ..?, ಏನು ಸಚಿವರಾಗೋ ತನಕ ಲಾಬಿ ಏನೂ..? ಓಡಾಡೋದು ಏನು..? ಏನ್ರೀ ಯತ್ನಾಳ್ರೇ ಎಂದು ಮಾಜಿ ಸಿಎಂ ಪ್ರಶ್ನಿಸಿದರು.
Advertisement
Advertisement
ಈ ವೇಳೆ ಮಧ್ಯಪ್ರವೇಶ ಮಾಡಿದ ಸ್ಪೀಕರ್ ಕಾಗೇರಿ, ಸಿದ್ದರಾಮಯ್ಯನವರೇ, ನೀವು ಹೇಳೋದಲ್ಲದೇ ಯತ್ನಾಳ್ ರನ್ನು ಕರೀತೀರಾ ಎಂದರು. ಈ ವೇಳೆ ಹೌದು ಸರಿಯಾಗಿ ಮಾತಾಡೋರು ಯತ್ನಾಳ್ ಒಬ್ಬರೇ ಎಂದು ಸಿದ್ದರಾಮಯ್ಯ ಹೇಳಿದರು. ಅಲ್ಲದೇ ಸಚಿವರು, ಅಧಿಕಾರಿಗಳು ಇಲ್ಲದೇ ನಾವು ನೀವು ಏನ್ ಮಾಡೋದು? ನಡೀರಿ ಎಲ್ಲರೂ ಪಿಕ್ ನಿಕ್ ಗೆ ಹೋಗೋಣ ಎಂದು ಸಿದ್ದರಾಮಯ್ಯ ಅವರು ಸ್ಪೀಕರ್ ಗೆ ಹೇಳಿದರು. ನಂತರ ಸಿದ್ದರಾಮಯ್ಯ ಮಾತಿನಂತೆ ಹೌದು ಸಚಿವರು ಇರಬೇಕು. ನಾನು ಎಲ್ಲ ಸಚಿವರು ಇರುವಂತೆ ನೋಡಿಕೊಳ್ಳುತ್ತೇನೆ ಎಂದು ಡಿಸಿಎಂ ಗೋವಿಂದ ಕಾರಜೋಳ ಅವರು ಸಿದ್ದರಾಮಯ್ಯಗೆ ಉತ್ತರಿಸಿದರು.
ಇನ್ನು ಸಚಿವರ ಗೈರು ವಿಚಾರ ಸಂಬಂಧ ಸ್ಪೀಕರ್ ಪರಿಸ್ಥಿತಿಗೆ ಕಾಂಗ್ರೆಸ್ ಸದಸ್ಯ ರಮೇಶ್ ಕುಮಾರ್ ಅವರು ಮರುಕ ವ್ಯಕ್ತಪಡಿಸಿದರು. ನೀವು ಬಂದ ಆರಂಭದಲ್ಲಿ ಪೂರ್ಣ ಚಂದ್ರನಂತಿದ್ರಿ. ಈಗ ಅಮಾವಾಸ್ಯೆ ಹತ್ತಿರ ಬಂದ ಚಂದ್ರನಂತೆ ಆಗಿದ್ದೀರಿ ಎಂದರು. ಸಂಪುಟ ದರ್ಜೆಯ ಸಚಿವರಿಗೆ ಅನುಭವ ಇರಬೇಕು. ಆದರೆ ನಮ್ಮಲ್ಲಿ ಎಲ್ರೂ ಸಂಪುಟ ಸಚಿವರೇ. ಈ ಸಂಪುಟ ದರ್ಜೆ ಸಚಿವರು ಲೈಬ್ರರಿಗೂ ಹೋಗಲ್ಲ, ಇಲಾಖಾ ಮಾಹಿತಿಯೂ ಹೊಂದಿಲ್ಲ. ಸಂವಿಧಾನ, ನಿಯಮಾವಳಿಗಳ ಅರಿವೂ ಇಲ್ಲ ಎಂದು ರಮೇಶ್ ಕುಮಾರ್ ಕೂಡ ಗರಂ ಸಿಡಿಮಿಡಿಗೊಂಡರು.