– ಪರೀಕ್ಷೆ ಬರೆದು ವಾಪಸ್ ಹೋಗುವಾಗ ಘಟನೆ
– ಬೇರೆ ಯುವಕನ ಜೊತೆ ಇದ್ದುದ್ದೆ ತಪ್ಪಾಯ್ತು
ಜೈಪುರ: ಯುವಕನೊಬ್ಬ ಅಸೂಯೆಯಿಂದ ತನ್ನ ಪ್ರಿಯತಮೆಗೆ ಚಾಕುವಿನಿಂದ ಇರಿದು ನಂತರ ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಜೈಪುರದ ಯುವಕ ತನ್ನ ಗೆಳತಿಯನ್ನೇ ಕೊಲೆ ಮಾಡಿದ್ದಾನೆ. ತನ್ನ ಪ್ರೇಯಸಿ ಇನ್ನೊಬ್ಬ ಯುವಕನ ಜೊತೆ ಇದ್ದ ವಿಚಾರವನ್ನು ತಿಳಿದು ಕೋಪಗೊಂಡ ಆರೋಪಿ ಗೆಳತಿಯ ಮೇಲೆ ಹಲ್ಲೆ ನಡೆಸಿದ್ದಾನೆ.
ಮೃತ ಯುವತಿ ಪರೀಕ್ಷೆಗೆ ಹಾಜರಾಗಿ ಮನೆಗೆ ವಾಪಸ್ ಹಿಂದಿರುಗುತಿದ್ದಾಗ ಈ ಘಟನೆ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಯುವತಿಯನ್ನು ಕರೆದುಕೊಂಡು ಹೋಗುತ್ತಿರುವ ವಿಡಿಯೋ ಹರಿದಾಡುತ್ತಿದೆ. ದ್ವಿಚಕ್ರ ವಾಹನದಲ್ಲಿ ಇಬ್ಬರು ಹುಡುಗರ ಮಧ್ಯದಲ್ಲಿ ಹುಡುಗಿ ಕುಳಿತಿರುವುದನ್ನು ಕಾಣಬಹುದಾಗಿದೆ. ಆದರೆ ಈ ವೇಳೆ ಹುಡುಗಿ ಪ್ರಜ್ಞಾಹೀನಳಾಗಿ ಬಿದ್ದಿರುವುದನ್ನು ವಿಡಿಯೋದಲ್ಲಿ ಕಾಣಹುದಾಗಿದೆ.
ಆರೋಪಿ ಮೊದಲು ಯುವತಿಗೆ ಚಾಕುವಿನಿಂದ ಇರಿದಿದ್ದಾನೆ. ನಂತರ ಹತ್ತಿರದಿಂದ ಆಕೆಯ ತಲೆಗೆ ಗುಂಡು ಹಾರಿಸಿದ್ದಾನೆ. ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಗೆಳತಿ ಬೇರೆ ಯುವಕನ ಜೊತೆ ಇದ್ದುದ್ದನ್ನು ನೋಡಿ ಅಸೂಯೆಯಿಂದ ಆರೋಪಿ ಈ ಕೃತ್ಯ ಎಸಗಿದ್ದಾನೆ.
ಸದ್ಯಕ್ಕೆ ಪೊಲೀಸರು ವಿಡಿಯೋ ಆಧಾರದ ಮೇರೆಗೆ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಯಾರೂ ಕೂಡ ಇದುವರೆಗೂ ಕೊಲೆ ಪ್ರಕರಣವನ್ನು ದಾಖಲಿಸಿಲ್ಲ ಎಂದು ವರದಿಯಾಗಿದೆ.