ಮಂಡ್ಯ: 2 ವರ್ಷ 8 ತಿಂಗಳಿನ ತೊದಲು ಮಾತನಾಡುವ ಪೋರಿಯೊಬ್ಬಳು ತನ್ನ ಅಸಾಧಾರಣ ನೆನಪಿನ ಶಕ್ತಿಯ ಪ್ರತಿಭೆಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ತನ್ನ ಹೆಸರು ಬರೆಸಿಕೊಂಡಿದ್ದಾಳೆ. ಅಲ್ಲದೇ ತನ್ನ ಅಸಾಧಾರಣ ಪ್ರತಿಭೆಯಿಂದ ಇದೀಗ ಗಿನ್ನಿಸ್ ದಾಖಲೆ ಬರೆಯಲು ಹೊರಟಿದ್ದಾಳೆ.
ಮಂಡ್ಯ ತಾಲೂಕಿನ ಬಸರಾಳು ಗ್ರಾಮದ ತೊಂಟೇಶ್‌ರವರ ಮೊಮ್ಮಗಳು ಮೌಲ್ಯ 32 ವಿಭಾಗದ ಸಾವಿರಾರು ಹೆಸರುಗಳನ್ನು ಹೇಳುವುದರ ಜೊತೆಗೆ ಪದ್ಯ, ಶ್ಲೋಕ, ಕಥೆಗಳನ್ನು ಹೇಳುತ್ತಾಳೆ. 32 ರಾಷ್ಟ್ರದ ಹೆಸರು, ರಾಜಧಾನಿ, ಅಲ್ಲಿನ ಪ್ರಸಿದ್ಧತೆಯ ಬಗ್ಗೆ, ಸೌರವ್ಯೂಹದ ಗ್ರಹಗಳು, ಕನ್ನಡ, ಇಂಗ್ಲಿಷ್ ವರ್ಣಮಾಲೆ, ಪದಗಳ ರಚನೆ, ಹಣ್ಣುಗಳು, ಪುಷ್ಪಗಳು, ಸಂಖ್ಯೆ, ಪ್ರಕೃತಿಯ ವಸ್ತುಗಳ ಹೆಸರು, ಋತುಗಳು, ವಿಜ್ಞಾನಿಗಳ ಹೆಸರು, ಅವರ ಅನ್ವೇಷಣೆ, ರಾಷ್ಟ್ರಗಳ ಪ್ರಾಣಿ, ಪುಷ್ಪ, ಲಾಂಛನ ಯಾವುದನ್ನೇ ಕೇಳಿದ್ರು ಥಟ್ ಅಂತಾ ಉತ್ತರ ಹೇಳ್ತಾಳೆ ಈ ಪುಟಾಣಿ ಪೋರಿ.
ಈ ಪೋರಿಯ ನೆನಪಿನ ಶಕ್ತಿ ಇದೀಗ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿದೆ. ಮಗಳ ಪ್ರತಿಭೆ ಗಿನ್ನಿಸ್ ರೆಕಾರ್ಡ್‌ನಲ್ಲಿ ಕೂಡ ದಾಖಲಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಾಯಿ.
ಮೌಲ್ಯಳ ವಿಸ್ಮಯ ಪ್ರತಿಭೆ ಕಂಡು ಅವರ ಕುಟುಂಬದವರು ಸಂತಸ ವ್ಯಕ್ತಪಡಿಸಿದರೆ ಊರಿನವರು ಈ ಬಾಲಕಿಯ ಪ್ರತಿಭೆ ಕಂಡು ಮೂಗಿನ ಮೇಲೆ ಬೆರಳಿಡುತ್ತಿದ್ದಾರೆ. ಸದಾ ಒಂದಲ್ಲ ಒಂದು ವಸ್ತುಗಳನ್ನು ಹಿಡಿದು ಪರಿಶೀಲಿಸುವ ಈ ಪೋರಿ ಸದಾ ಕ್ರಿಯಾಶೀಲವಾಗಿದ್ದು ಎಲ್ಲವನ್ನು ಉತ್ಸಾಹದಿಂದ ಕಲಿಯುತ್ತಿದ್ದಾಳೆ. ಈ ಪುಟಾಣಿಯ ಪ್ರಯತ್ನ ಇದೀಗ ಮನೆಯವರ ಸಂತಸಕ್ಕೆ ಕಾರಣವಾಗಿದ್ದು, ಮತ್ತಷ್ಟು ತರಬೇತಿಯ ಮೂಲಕ ಈ ಪುಟಾಣಿ ಬಾಲಕಿಯನ್ನು ಮತ್ತಷ್ಟು ಚುರುಕುಗೊಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ.