ಮಡಿಕೇರಿ: ಪದೇ ಪದೇ ಮೊಬೈಲ್‍ಗೆ ಅಶ್ಲೀಲ ಸಂದೇಶ ಕಳುಹಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಯುವಕನಿಗೆ ಮಹಿಳೆಯೊಬ್ಬರು ಚಪ್ಪಲಿಯಿಂದ ಥಳಿಸಿ ಪೊಲೀಸರಿಗೊಪ್ಪಿಸಿದ ಘಟನೆ ಗುರುವಾರ ಸಂಜೆ ಮಡಿಕೇರಿ ಹೆದ್ದಾರಿಯಲ್ಲಿ ನಡೆದಿದೆ.
ನಗರದ ವಿವಾಹಿತ ಮಹಿಳೆಗೆ ಯುವಕ ತನ್ನ ಮೊಬೈಲ್‍ನಿಂದ ಸಂದೇಶ ಕಳುಹಿಸುತ್ತಿದ್ದ. ಮಡಿಕೇರಿ ನಗರದಲ್ಲಿ ಮೊಬೈಲ್ ಅಂಗಡಿ ಹಾಗೂ ಕರೆನ್ಸಿ ಅಂಗಡಿಯೊಂದನ್ನು ಇಟ್ಟುಕೊಂಡಿದ್ದ ಮುದಾಸಿರ್ ಮಹಿಳೆಗೆ ಕಿರುಕುಳ ನೀಡುತ್ತಿದ್ದವ ಎಂದು ಗುರುತಿಸಲಾಗಿದೆ.
ಅಂಗಡಿಯಲ್ಲಿ ಮೊಬೈಲ್‍ಗೆ ಕರೆನ್ಸಿ ಹಾಕಿಸುವ ಯುವತಿಯರ ಹಾಗೂ ಹೆಣ್ಣು ಮಕ್ಕಳ ಮೊಬೈಲ್ ನಂಬರ್ ಗಳನ್ನು ಪಡೆದುಕೊಳ್ಳುತ್ತಿದ್ದ ಆರೋಪಿ, ಅವರಿಗೆ ಖಾಲಿ ಪೋಲಿ ಸಂದೇಶಗಳನ್ನು ಕಳುಹಿಸುತ್ತಿದ್ದ. ಆ ಮೂಲಕ ಮಾನಸಿಕವಾಗಿ ಹಾಗೂ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಆರೋಪಿ ಕಳೆದ ಎರಡು ದಿನಗಳಿಂದ ರಾತ್ರಿ-ಹಗಲು ನಿರಂತರವಾಗಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ ಎಂದು ಮಹಿಳೆ ದೂರಿದ್ದಾರೆ. ಈತನನ್ನು ಖೆಡ್ಡಾಕ್ಕೆ ಬೀಳಿಸಲು ಪ್ಲಾನ್ ಮಾಡಿದ್ದ ಮಹಿಳೆ, ಸಾಮಾಜಿಕ ಕಾಳಜಿ ಉಳ್ಳ ಕೊಡಗು ರಕ್ಷಣಾ ವೇದಿಕೆ ಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ರಕ್ಷಣಾ ವೇದಿಕೆಯವರು ಆತನಿಗೆ ಕರೆ ಮಾಡಿ ಬರುವಂತೆ ತಿಳಿಸಲು ಮಹಿಳೆಗೆ ಹೇಳಿದ್ದರು. ರಕ್ಷಣಾ ವೇದಿಕೆ ಸಲಹೆಯಂತೆ ಮಹಿಳೆ ಆರೋಪಿಯನ್ನು ಹಳೆ ಆರ್‌ಟಿಓ ಕಚೇರಿ ಬಳಿ ಬಾ ಮಾತನಾಡೋಣ ಎಂದು ಸಂದೇಶ ಕಳುಹಿಸಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಆರೋಪಿಯನ್ನು ಹಿಡಿದುಕೊಂಡ ರಕ್ಷಣಾ ವೇದಿಕೆಯರು ಹಾಗೂ ಯುವತಿ ಹಿಗ್ಗಾ ಮುಗ್ಗಾ ಥಳಿಸಿ ಕೊನೆಗೆ ಮಡಿಕೇರಿ ನಗರದ ಪೋಲಿಸರಿಗೆ ಒಪ್ಪಿಸಿದ್ದಾರೆ.