– ನಂಗೆ ಹೆಣ್ಣು ಅಂದ್ರೆ ಇಷ್ಟವಿಲ್ಲ ಎಂದ ಪತಿ
– ಗೆಳೆಯನೊಂದಿಗೆ ಸಂಸಾರ ಮಾಡು ಎಂದ ಗಂಡ
ಹೈದರಾಬಾದ್: ಮದುವೆಯಾದ ಕೆಲವೇ ದಿನಗಳಲ್ಲಿ ಪತಿಯೊಬ್ಬ ಸಲಿಂಗಕಾಮಿ ಎಂದು ತಿಳಿದಿದ್ದು, ಇದೀಗ ಯುವತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.
ಗುಂಟೂರು ಜಿಲ್ಲೆಯ ಎಟಿ ಅಗ್ರಹಾರದ ಯುವತಿಯನ್ನು ಸಾಫ್ಟ್‌ವೇರ್ ಎಂಜಿನಿಯರ್ ಜೊತೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಅರ್ಧ ಕೋಟಿ ವರದಕ್ಷಿಣೆ ನೀಡಿ ವಿವಾಹ ಮಾಡಿದ್ದರೂ ಪತಿ ಮೋಸ ಮಾಡಿದ್ದಾನೆ. ಈಗ ಯುವತಿ ನ್ಯಾಯ ಕೊಡಿಸುವಂತೆ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾಳೆ.
ಏನಿದು ಪ್ರಕರಣ?
ಯುವತಿ ಕಳೆದ ಮಾರ್ಚ್‍ನಲ್ಲಿ ಅಮೆರಿಕದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಆರ್‌ಟಿಸಿ ಕಾಲೋನಿಯ ಯುವಕನನ್ನು ಮದುವೆಯಾಗಿದ್ದಳು. ಮದುವೆ ಸಂದರ್ಭದಲ್ಲಿ ಯುವತಿಯ ಪೋಷಕರು ಆಸ್ತಿ ಮತ್ತು ಹೊಲ ಮಾರಿ 50 ಲಕ್ಷ ರೂ. ನಗದು ಮತ್ತು 55 ಗ್ರಾಂ ಚಿನ್ನವನ್ನು ವರದಕ್ಷಿಣೆ ರೂಪದಲ್ಲಿ ನೀಡಿದ್ದಾರೆ. ಅಲ್ಲದೇ ಮದುವೆ ಮಾಡಲು 15 ಲಕ್ಷ ರೂ. ಖರ್ಚು ಕೂಡ ಮಾಡಿದ್ದರು ಎಂದು ತಿಳಿದುಬಂದಿದೆ.
ಮೊದಲ ರಾತ್ರಿಯಂದು ವರ ತನಗೆ ಆರೋಗ್ಯ ಸರಿಯಿಲ್ಲ ಎಂದು ಹೇಳಿ ಪತ್ನಿಯಿಂದ ದೂರ ಉಳಿದಿದ್ದನು. ದಿನ ಕಳೆದಂತೆ ಪತ್ನಿಯ ಜೊತೆ ಇರಲು ನಿರಾಕರಿಸಿದ್ದಾನೆ. ಇದರಿಂದ ಗಾಬರಿಯಾದ ಪತ್ನಿ, ಪತಿಯ ಬಳಿ ಕಾರಣ ಕೇಳಿದ್ದಾಳೆ.
ಆಗ ಪತಿ, ನನಗೆ ಹೆಣ್ಣು ಅಂದರೆ ಇಷ್ಟವಿಲ್ಲ. ಅಮೆರಿಕದಲ್ಲಿ ನನಗೊಬ್ಬ ಗೆಳೆಯನಿದ್ದಾನೆ. ಆತನಿಗಾಗಿಯೇ ನಾನು ಮದುವೆ ಮಾಡಿಕೊಂಡಿದ್ದೇನೆ. ನಾನು ಮತ್ತು ನೀನು ಅಮೆರಿಕಕ್ಕೆ ಹೋಗೋಣ ಅಲ್ಲಿ ನಿನ್ನನ್ನು ಆತನಿಗೆ ನಿನ್ನನ್ನು ಒಪ್ಪಿಸುವೆ. ನೀನು ಆತನೊಂದಿಗೆ ಸಂಸಾರ ಮಾಡಬೇಕು. ಮೂವರು ಸೇರಿ ಎಂಜಾಯ್ ಮಾಡೋಣ ಎಂದು ಹೇಳಿದ್ದಾನೆ. ಇದನ್ನು ಕೇಳಿದ ಪತ್ನಿ ಆತಂಕಗೊಳಗಾಗಿದ್ದಾಳೆ.
ಅಷ್ಟೇ ಅಲ್ಲದೇ ತನ್ನನ್ನು ಯಾಕೆ ಮದುವೆಯಾದೆ ಎಂದು ಪತ್ನಿ ಪ್ರಶ್ನೆ ಮಾಡಿದ್ದಾಳೆ. ಆಗ ಪತಿ, ನಮ್ಮ ಪೋಷಕರು ವರದಕ್ಷಿಣೆಗಾಗಿ ಮದುವೆ ಮಾಡಿಕೊಳ್ಳುವಂತೆ ಬಲವಂತ ಮಾಡಿದರು. ಅದಕ್ಕೆ ನಾನು ವಿವಾಹವಾಗಿದ್ದೇನೆ ಎಂದು ಹೇಳಿದ್ದಾನೆ. ಕೊನೆಗೆ ಪತ್ನಿ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾಳೆ.
ಈ ವಿಷಯವನ್ನು ಅತ್ತೆ-ಮಾವನಿಗೆ ಹೇಳಿದೆ. ಆದರೆ ಅವರು ಅಸಭ್ಯವಾಗಿ ಮಾತನಾಡಿದರು. ಅಷ್ಟರಲ್ಲಿ ನನ್ನ ಪತಿ ಅಮೆರಿಕಕ್ಕೆ ಹೋಗಿದ್ದನು. ನಾನು ಫೋನ್ ಮಾಡಿದರೂ ರಿಸೀವ್ ಮಾಡುತ್ತಿಲ್ಲ. ಇತ್ತ ಅತ್ತೆ ಮತ್ತು ಮಾವ ಮತ್ತೆ 10 ಲಕ್ಷ ಹೆಚ್ಚುವರಿ ವರದಕ್ಷಿಣೆ ತೆಗೆದುಕೊಂಡು ಬರುವಂತೆ ಮನೆಯಿಂದ ಹೊರ ಹಾಕಿದ್ದಾರೆ ಎಂದು ನೋಂದ ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೇ ಈ ವಿಚಾರವನ್ನು ನಮ್ಮ ಪೋಷಕರಿಗೂ ಹೇಳಿಲ್ಲ. ಈಗ ನ್ಯಾಯ ಒದಗಿಸುವಂತೆ ಯುವತಿ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾಳೆ. ಸದ್ಯಕ್ಕೆ ಪೊಲೀಸರು ಯುವತಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ಯುವತಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.