ಉಡುಪಿ: ಬಂಗಾಳ ಕೊಲ್ಲಿಯಲ್ಲಿ ಎದ್ದ ಚಂಡಮಾರುತಕ್ಕೆ ಅರಬ್ಬಿ ಸಮುದ್ರ ನಡುಗಿ ಹೋಗಿದೆ. ಕಳೆದ ನಾಲ್ಕು ದಿನಗಳಿಂದ ಗಾಳಿ ಸಹಿತ ಮಳೆಯಾಗುತ್ತಿದ್ದು ಸಾಗರ ಪ್ರಕ್ಷುಬ್ಧವಾಗಿದೆ.
ಉಡುಪಿ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆಯಾಗುತ್ತಿದೆ. ಮುಂಗಾರಿನ ಅಬ್ಬರ ಕಡಿಮೆಯಾಗುತ್ತಿದ್ದಂತೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದೆ. ಹೀಗಾಗಿ ಪೂರ್ವ ಕರಾವಳಿಯ ರಾಜ್ಯಗಳಲ್ಲಿ ಕಳೆದ ಐದು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಉತ್ತರ ಕರ್ನಾಟಕದ 8 ಜಿಲ್ಲೆಗಳು ನೆರೆಗೆ ನಲುಗಿಹೋಗಿದೆ. ಪೂರ್ವ ಕರಾವಳಿಯ ಮಳೆಯ ಎಫೆಕ್ಟ್ ಪಶ್ಚಿಮ ಕರಾವಳಿಗೂ ಬಿಟ್ಟಿದೆ.
ಉಡುಪಿ ಜಿಲ್ಲೆಯಲ್ಲಿ ಮೂರು ದಿನ ರೆಡ್ ಅಲರ್ಟ್ ಘೋಷಣೆ ಮಾಡಲಾಗಿತ್ತು. ಇದೀಗ ಮುಂದಿನ 24 ತಾಸುಗಳ ಕಾಲ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹವಾಮಾನ ಇಲಾಖೆ ಕೊಟ್ಟ ಮುನ್ಸೂಚನೆಯ ಪ್ರಕಾರ ಅರಬ್ಬಿ ಸಮುದ್ರದಲ್ಲಿ 45ರಿಂದ 50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ನಾಡದೋಣಿ ಮತ್ತು ಆಳಸಮುದ್ರ ಮೀನುಗಾರರು ಕಸುಬಿಗೆ ಇಳಿದಿಲ್ಲ. ಶುಕ್ರವಾರ ಬೆಳಗ್ಗಿನವರೆಗೆ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ವಿಸ್ತರಣೆಯಾಗಿದೆ.
ಪ್ರಕ್ಷುಬ್ಧ ಕಡಲಿನ ನಡುವೆಯೇ ಒಂದೆರಡು ನಾಡದೋಣಿಗಳು ಕಡಲಿಗೆ ಇಳಿದು ಮೀನುಗಾರಿಕೆಯನ್ನು ನಡೆಸಿವೆ. ನಾಲ್ಕೈದು ದಿನಗಳ ಕಾಲ ಕಸುಬು ಇಲ್ಲದೆ ಇದರಿಂದ ಪ್ರಾಣವನ್ನು ಪಣಕ್ಕಿಟ್ಟು ಮೊಗವೀರರು ಮೀನುಗಾರಿಕೆಯನ್ನು ನಡೆಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಗಾಳಿಯ ಅಬ್ಬರ ಕೊಂಚ ಕಡಿಮೆಯಾಗಿದ್ದು ಉಡುಪಿಯಲ್ಲೂ ಗಾಳಿ ಪ್ರಮಾಣ ಕಡಿಮೆಯಾಗಬಹುದು. ಗುರುವಾರ ಸಂಜೆಯ ವೇಳೆಗೆ ಆಳ ಸಮುದ್ರ ಮೀನುಗಾರಿಕೆಗೆ ತೆರಳಬಹುದು ಎಂದು ಕಡೆಕಾರು ಗ್ರಾಮದ ಮೀನುಗಾರ ಅಶೋಕ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.