ಅಪಮಾನ ಸಹಿಸಲಾಗದೆ ಆತ್ಮಹತ್ಯೆಗೆ ಯತ್ನಿಸಿದ್ದೆ: ಜಗ್ಗೇಶ್

Public TV
2 Min Read
jaggesh1

ಬೆಂಗಳೂರು: ಸ್ಯಾಂಡಲ್‍ವುಡ್ ನಟ ನವರಸ ನಾಯಕ ಜಗ್ಗೇಶ್ ತಮ್ಮ ಎಸ್‍ಎಸ್‍ಎಲ್‍ಸಿ ಮಾರ್ಕ್ಸ್ ಕಾರ್ಡ್ ನನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Jaggesh

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಸೆಕೆಂಡ್ ಕ್ಲಾಸ್ ಪಡೆದಿದ್ದ ನಟ ಜಗ್ಗೇಶ್ ಅಂಕ ನೋಡಿ ಅವರ ತಂದೆ ಬೂಟಿನಿಂದ ಹೊಡೆದಿದ್ದರಂತೆ, ಇದರಿಂದ ಬೇಸರಗೊಂಡು ಅವಮಾನ ಸಹಿಸಲಾಗದೇ ಜಗ್ಗೇಶ್ ಆತ್ಮಹತ್ಯೆಗೆ ಮುಂದಾಗಿದ್ದ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಆದರೆ ಅದೃಷ್ಟವಶಾತ್ ಹೇಗೋ ಪ್ರಾಣಾಪಾಯದಿಂದ ಪಾರಾದ ಜಗ್ಗೇಶ್, ಅಂದು ಅನಾಹುತ ಸಂಭವಿಸಿದ್ದರೆ ಇಂದು ಈಶ್ವರ ಇರುತ್ತಿರಲಿಲ್ಲ ಎಂಬ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

JAGGESH 11

ಜಗ್ಗೇಶ್ ಅವರು ತಮ್ಮ ಎಸ್‍ಎಸ್‍ಎಲ್‍ಸಿ ಮಾರ್ಕ್ಸ್ ಕಾರ್ಡ್‍ನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಂದು ಅವರು ಅನುಭವಿಸಿದ ಕಷ್ಟವನ್ನು ಅಕ್ಷರಗಳ ಮೂಲಕ ತೋಡಿಕೊಂಡಿದ್ದಾರೆ.

jaggesh 2

ಅಂದು ಈ ಜಗ್ಗೇಶ ಶಾಲೆಯಲ್ಲಿ ಈಶ್ವರ. ತಾತ ರಾಜಣ್ಣನಂತೆ ನಟನಾಗು ಎಂದು ತಲೆಯಲ್ಲಿ ಹುಳಬಿಟ್ಟ. ಅದು ನನ್ನ ಚಿಂತನೆಯ ಚಿತೆಯಾಯಿತು. ಪರೀಕ್ಷೆ ಅರ್ಧಮನಸ್ಸಿನಲ್ಲಿಯೇ ಓದಿಬರೆದೆ. ಯಾಕೋ ಕನ್ನಡ ಮಾತ್ರ ನನ್ನ ಅಚ್ಚುಮೆಚ್ಚಿನ ವಿಷಯವಾಯಿತು. ಕನ್ನಡ ವ್ಯಾಕರಣ ಸಿಹಿ ತಿನಿಸಂತೆ ಪ್ರೀತಿ. ಬಾಲ್ಯದಿಂದ ಕನ್ನಡ ಭಾಷಾ ಪ್ರೀತಿ ಹುಟ್ಟಿದರೆ ಸಾಯುವವರೆಗೂ ಅದು ಅವನ ಹೃದಯದ ನಾಡಿ ಬಡಿತದಂತೆ ಜೊತೆ ಉಳಿಯುತ್ತದೆ. ಸ್ವಾರ್ಥಕ್ಕೆ ಬಳಕೆಯಾದರೆ ಆತ್ಮ ದ್ರೋಹವಾಗುತ್ತದೆ. ಈ ಅಂಕ ನೋಡಿದ ಅಪ್ಪ ನಡು ರೋಡಿನಲ್ಲಿ ಜನನೋಡುವಂತೆ ಬೂಟಿನಲ್ಲಿ ಹೊಡೆದು ಬಿಟ್ಟರು. ಅಪಮಾನ ಸಹಿಸಲಾಗದೆ ಆತ್ಮಹತ್ಯೆಗೆ ಯತ್ನಿಸಿದ್ದೆ. ಆಗ ದಿವಂಗತ ಶ್ರೀರಾಮಪುರದ ಕಿಟ್ಟಿ (ಆ ದಿನಗಳು ಕುಖ್ಯಾತಿ)ನನ್ನ ಬಾಚಿ ಎಳೆದು ರೈಲಿನ ಅನಾಹುತ ತಪ್ಪಿಸಿದ. ಆ ವಿಷಯ ತಿಳಿದು ಅಪ್ಪನಿಗೆ ದುಃಖವಾಗಿ ಮನನೊಂದು ಬಂಧುಮಿತ್ರರ ಮುಂದೆ ಕಣ್ಣೀರು ಇಟ್ಟು ಪಶ್ಚಾತಾಪಪಟ್ಟರು. ಅಂದು ಅನಾಹುತ ಸಂಭವಿಸಿದ್ದರೆ ಇಂದು ಈಶ್ವರ ಜಗ್ಗೇಶನಾಗಿ ಇರುತ್ತಿರಲಿಲ್ಲಾ. ಬದಲಾಗಿ ಸತ್ತ ಕೋಟಿ ಜನರಲ್ಲಿ ಒಬ್ಬನಾಗುತ್ತಿದ್ದೆ.

ತಂದೆ-ತಾಯಿ-ಮಕ್ಕಳನ್ನು ಬರೀ ಓದಿನ ಯಂತ್ರವಾಗಿ ಬೆಳೆಸದೇ ಜಗದ ಪಾಠ ಕಲಿಸುವ ಯತ್ನ ಮಾಡಿ. ಓದಿದ ಮಕ್ಕಳು ಸರ್ಕಸ್ ಸಿಂಹದಂತೆ ಓದಿನ ಜೊತೆಗೆ ಜಗದ ಪಾಠ ಕಲಿತವರು ಬೇಟೆಯಾಡುವ ಕಾಡಿನ ಸಿಂಹದಂತೆ. ಇಂದಿನ ಜಗತ್ತಿಗೆ ಮಕ್ಕಳು ಬೇಟೆಯಾಡುವ ಸಿಂಹದಂತೆ ಬಾಳಬೇಕು ಕಾರಣ ಜಗ ಕಾಡಿನಂತೆ ಆಗಿದೆ, ಮನುಷ್ಯ ಬೇಟೆಯಾಡುವ ಪ್ರಾಣಿಯಂತೆ. ಇಂತಹ ಸಮಯದಲ್ಲಿ ಮಕ್ಕಳು ಕಾಡು ಸಿಂಹವಾದರೆ, ಕೆಣಕುವವರು ದೂರ ಉಳಿಯುತ್ತಾರೆ. ಎಸ್‍ಎಸ್‍ಎಲ್‍ಸಿ ಫಲಿತಾಂಶ ಏನೇ ಬರಲಿ ನಿಮ್ಮ ಮಕ್ಕಳನ್ನು ಸಿಂಹದಂತೆ ಸಾಕಿ. ಮಿಕ್ಕಂತೆ ಜಗತ್ತೆ ಮನುಜನಿಗೆ ಜೀವನಪಾಠ ಕಲಿಸುತ್ತದೆ. ಅಮರ ಹಳೆ ನೆನಪು, ಶುಭದಿನ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನೀವು ಕೆಟ್ಟವರಲ್ಲ, ಸಮಾಜ ಕೆಟ್ಟದ್ದು : ಜಾಕ್ವೆಲಿನ್ ಫರ್ನಾಂಡಿಸ್

Share This Article
Leave a Comment

Leave a Reply

Your email address will not be published. Required fields are marked *