ಬೆಂಗಳೂರು: ಲಾಕ್‍ಡೌನ್ ವೇಳೆಯೂ ಅನಾವಶ್ಯಕ ವಾಹನಗಳ ಓಡಾಡ ಹೆಚ್ಚಳವಾಗಿದ್ದು, ಕಡ್ಡಾಯವಾಗಿ ಎಲ್ಲ ವಾಹನಗಳ ಪರಿಶೀಲನೆ ನಡೆಸಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ತಿಳಿಸಿದ್ದಾರೆ.
ಈ ಸಂಬಂಧ ಹಿರಿಯ ಅಧಿಕಾರಿಗಳ ಜೊತೆಗೆ ನಗರದ ಪೊಲೀಸ್ ಆಯುಕ್ತ ಕಮಲ್ ಪಂಥ್ ಸಭೆ ನಡೆಸಿದ್ದು, ವಾಹನಗಳ ಅನಾವಶ್ಯಕ ಓಡಾಟಕ್ಕೆ ಬ್ರೇಕ್ ಹಾಕುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಬೆಳಗ್ಗೆ 10 ಗಂಟೆ ನಂತರವೂ ವಾಹನಗಳ ಓಡಾಡ ಹೆಚ್ಚಾಗುತ್ತಿದೆ. ಪೊಲೀಸರು ಪರಿಶೀಲನೆ ಮಾಡುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಹೀಗಾಗಿ ಕಡ್ಡಾಯವಾಗಿ ವಾಹನಗಳನ್ನು ತಡೆದು ಪರಿಶೀಲನೆ ಮಾಡಬೇಕು. ಅನಾವಶ್ಯಕವಾಗಿ ರಸ್ತೆಗಿಳಿದರೆ ವಾಹನಗಳನ್ನು ಸೀಜ್ ಮಾಡಬೇಕು ಎಂದು ಆದೇಶಿಸಿದ್ದಾರೆ.
ಕೊರೊನಾ ಮಾರ್ಗಸೂಚಿಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು, ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮೌಖಿಕವಾಗಿ ಸೂಚಿಸಿದ್ದಾರೆ. ಲಾಕ್‍ಡೌನ್ ಜಾರಿಯಲ್ಲಿದ್ದರೂ ಕಳೆದ ಕೆಲ ದಿನಗಳಿಂದ ಬೆಳಗ್ಗೆ 10 ಗಂಟೆ ನಂತರವೂ ಹೆಚ್ಚು ವಾಹನಗಳು ಸಂಚರಿಸುತ್ತಿವೆ. ಪೊಲೀಸರು ತಪಾಸಣೆ ನಡೆಸುತ್ತಿಲ್ಲ ಎಂಬ ದೂರು ಸಹ ಕೇಳಿ ಬಂದಿವೆ. ಹೀಗಾಗಿ ಕಮಲ್ ಪಂತ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.