‘ತೋತಾಪುರಿ’..ನವರಸ ನಾಯಕ ಜಗ್ಗೇಶ್ ಅಭಿನಯದ ಸ್ಯಾಂಡಲ್‍ವುಡ್ ಅಂಗಳದ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ. ವಿಭಿನ್ನ ಟೈಟಲ್ ಮೂಲಕವೇ ಸಿಕ್ಕಾಪಟ್ಟೇ ಕುತೂಹಲ ಹುಟ್ಟುಹಾಕಿದ್ದ ತೋತಾಪುರಿ ಚಿತ್ರತಂಡ ಆನಂತರ ಚಿತ್ರೀಕರಣದಲ್ಲಿ ನಿರತವಾಗಿತ್ತು. ಚಿತ್ರೀಕರಣ ಪೂರ್ಣಗೊಳಿಸಿ ಕುಂಬಳಕಾಯಿ ಒಡೆದಿರುವ ಚಿತ್ರತಂಡ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿದೆ. ಇಲ್ಲಿಯವರೆಗೂ ಚಿತ್ರಕ್ಕೆ ಸಂಬಂಧಿಸಿದ ಪೋಸ್ಟರ್ ಆಗಲಿ, ಫಸ್ಟ್ ಲುಕ್ ಆಗಲಿ ಅಧಿಕೃತವಾಗಿ ಬಿಡುಗಡೆ ಮಾಡದ ಚಿತ್ರತಂಡ ಇಂದು ಅಧಿಕೃತವಾಗಿ ‘ತೋತಾಪುರಿ’ ಚಿತ್ರದ ಟೈಟಲ್ ಲಾಂಚ್ ಮಾಡಿದೆ.
ನೀರ್ ದೋಸೆ ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಹಿಟ್ ಕಾಂಬೀನೇಷನ್ ನವರಸ ನಾಯಕ ಜಗ್ಗೇಶ್ ಹಾಗೂ ನಿರ್ದೇಶಕ ವಿಜಯ ಪ್ರಸಾದ್ ಜೋಡಿ. ನಾಲ್ಕು ವರ್ಷದ ನಂತರ ಒಂದಾಗಿರುವ ಈ ಜೋಡಿ ‘ತೋತಾಪುರಿ’ ಸಿನಿಮಾ ಮೂಲಕ ಮತ್ತೊಮ್ಮೆ ಹೈವೋಲ್ಟೇಜ್ ಕಾಮಿಡಿಯ ರಸದೌತಣ ಪ್ರೇಕ್ಷಕರಿಗೆ ಉಣಬಡಿಸಲಿದೆ. ನೀರ್ ದೋಸೆ ಸಿನಿಮಾ ನೋಡಿ ಎಂಜಾಯ್ ಮಾಡಿದ್ದ ಸಿನಿರಸಿಕರು ಮತ್ತೊಮ್ಮೆ ಇವರಿಬ್ಬರ ಕಾಂಬೀನೇಷನ್‍ನಲ್ಲಿ ಬರ್ತಿರುವ ‘ತೋತಾಪುರಿ’ ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ.
‘ತೋತಾಪುರಿ’ ಚಿತ್ರವನ್ನು ಎರಡು ಭಾಗಗಳಾಗಿ ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದೆ. ಲಾಕ್‍ಡೌನ್‍ಗೂ ಮೊದಲೇ ಮೊದಲ ಭಾಗದ ಚಿತ್ರೀಕರಣ ಮುಗಿಸಿದ್ದ ಚಿತ್ರತಂಡ ಎರಡನೇ ಭಾಗದ ಚಿತ್ರೀಕರಣವನ್ನು ಈಗಾಗಲೇ ಕಂಪ್ಲೀಟ್ ಮಾಡಿದೆ. ಈ ಮೂಲಕ ಬಿಡುಗಡೆಗೂ ಮುನ್ನವೇ ಎರಡೂ ಸೀಕ್ವೆಲ್‍ಗಳ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಮೊದಲ ಸಿನಿಮಾ ಎಂಬ ದಾಖಲೆಯನ್ನು ‘ತೋತಾಪುರಿ’ ಚಿತ್ರ ತನ್ನದಾಗಿಸಿಕೊಂಡಿದೆ. ‘ತೋತಾಪುರಿ’ ಚಿತ್ರದ ವಿಶೇಷ ಅಂದ್ರೆ ಅದು ಟ್ಯಾಗ್‍ಲೈನ್. ಟ್ಯಾಗ್‍ಲೈನ್ ಚಿತ್ರದ ಹೈಲೈಟ್ ಅಂದ್ರೂ ತಪ್ಪಾಗೋದಿಲ್ಲ. ಅಂದ್ಹಾಗೆ ಮೊದಲ ಭಾಗಕ್ಕೆ ಚಿತ್ರತಂಡ ‘ತೊಟ್ ಕೀಳ್ಬೇಕಷ್ಟೇ’ ಎಂಬ ಟ್ಯಾಗ್‍ಲೈನ್ ನೀಡಿದೆ.
ಚಿತ್ರದಲ್ಲಿ ರೈತನ ಪಾತ್ರದಲ್ಲಿ ಜಗ್ಗೇಶ್ ಅಭಿನಯಿಸಿದ್ದು ಹಿಂದೆಂದೂ ಕಾಣಿಸಿಕೊಳ್ಳದ ಪಾತ್ರದಲ್ಲಿ ಪ್ರೇಕ್ಷಕರನ್ನು ರಂಜಿಸಲಿದ್ದಾರಂತೆ. ನಾಯಕಿ ಪಾತ್ರದಲ್ಲಿ ಅದಿತಿ ಪ್ರಭುದೇವ ನಟಿಸಿದ್ದು, ಮುಸ್ಲಿಂ ಯುವತಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಡಾಲಿ ಧನಂಜಯ್, ಸುಮನ್ ರಂಗನಾಥ್, ವೀಣಾ ಸುಂದರ್, ದತ್ತಣ್ಣ ಸೇರಿದಂತೆ ಖ್ಯಾತ ಕಲಾವಿದರ ದಂಡು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸುರೇಶ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಶಿವಲಿಂಗ ಖ್ಯಾತಿಯ ನಿರ್ಮಾಪಕ ಸುರೇಶ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅನೂಪ್ ಸೀಳೀನ್ ಸಂಗೀತ ನಿರ್ದೇಶನ, ನಿರಂಜನ್ ಬಾಬು ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ ‘ತೋತಾಪುರಿ’ ಚಿತ್ರಕ್ಕಿದೆ.