ಬೆಂಗಳೂರು: ಕೊರೊನಾದಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಜನರ ನೆರವಿಗೆ ಮುಂದಾಗಿರುವ ಶಾಸಕ ಮುನಿರತ್ನ ಅವರು, ರಾಜರಾಜೇಶ್ವರಿ ನಗರದ ಎಲ್ಲಾ ವಾರ್ಡ್‍ನ ಜನರಿಗೆ ಉಚಿತ ದಿನಸಿ ಪದಾರ್ಥಗಳನ್ನು ಹಂಚುತ್ತಿದ್ದಾರೆ.
ಇಂದು ಕೊಟ್ಟಿಗೆಪಾಳ್ಯದಲ್ಲಿ ಜನರಿಗೆ ಉಚಿತ ದಿನಸಿ ಪದಾರ್ಥಗಳ ಹಂಚಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕರು, ತರಕಾರಿ ಹಾಗೂ ದಿನಸಿ ಪದಾರ್ಥಗಳನ್ನು ಒಳಗೊಂಡಿರುವ ಕಿಟ್‍ನ್ನು ನೂರಾರು ಜನರಿಗೆ ಹಂಚುವ ಮೂಲಕ ಕೊರೊನಾ ಕಷ್ಟಕಾಲದಲ್ಲಿ ಸಮಸ್ಯೆ ಎದುರಿಸುತ್ತಿರುವ ಜನರಿಗೆ ನೆರವಿನ ಹಸ್ತ ಚಾಚಿದ್ದಾರೆ. ಇದನ್ನೂ ಓದಿ: ಆರ್‌ಆರ್ ನಗರದಲ್ಲಿ 400 ಹಾಸಿಗೆಗಳ ಸುಸಜ್ಜಿತ ಕೋವಿಡ್ ಆಸ್ಪತ್ರೆ ನಿರ್ಮಾಣ: ಶಾಸಕ ಮುನಿರತ್ನ
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುನಿರತ್ನ ಅವರು, ಅಧಿಕಾರ ಶಾಶ್ವತವಲ್ಲ ಅಧಿಕಾರ ಇರಲಿ, ಇಲ್ಲದೆ ಇರಲಿ ಆ ಜನರ ಸೇವೆ ಮಾಡುವುದು ಪೂರ್ವಜನ್ಮದ ಪುಣ್ಯ ಆ ಕೆಲಸ ನಾನು ಮಾಡುತ್ತಿದ್ದೇನೆ. ಇಂತಹ ಕಷ್ಟ ಕಾಲದಲ್ಲಿ ಮತದಾರ ಬಂಧುಗಳಿಗೆ ಮೊದಲಿಗೆ ನೆನಪಿಗೆ ಬರುವುದು ರಾಜಕಾರಣಿಗಳು. ಆಯಾ ಕ್ಷೇತ್ರದಲ್ಲಿರುವ ಸಣ್ಣ ಮಟ್ಟಿನಿಂದ ಹಿಡಿದು ದೊಡ್ಡ ಮಟ್ಟದ ರಾಜಕಾರಣಿ ಅಂದರೆ ತಾಲೂಕು, ಜಿಲ್ಲೆ, ನಗರ ಪ್ರದೇಶದಲ್ಲಿರುವ ರಾಜಕಾರಣಿಗಳು ಅಥವಾ ಶಾಸಕರು, ಸಂಸದರು ಇರಬಹುದು. ಕಷ್ಟ ಎಂದು ಬಂದಾಗ ಸಾರ್ವಜನಿಕರು ಮೊದಲಿಗೆ ಅವರನ್ನು ನೆನಪಿಸಿಕೊಳ್ಳುತ್ತಾರೆ. ಆ ರಾಜಕಾರಣಿ ಆ ಸಂದರ್ಭದಲ್ಲಿ ಜನರಿಗೆ ನೆರವಿನ ಹಸ್ತ ಚಾಚಿಲ್ಲ ಅಂದರೆ ಅವರನ್ನು ದೇವರು ಕೂಡ ಮೆಚ್ಚುವುದಿಲ್ಲ ಎಂದರು. ಇದನ್ನೂ ಓದಿ: ಬಡಜನರ ಕಷ್ಟ ಅರಿತು ದಿನಸಿ, ತರಕಾರಿ ವಿತರಿಸಿದ ಶಾಸಕ ಮುನಿರತ್ನ
ನನ್ನ ಕ್ಷೇತ್ರದಲ್ಲಿ ನನ್ನ ಮತದಾರರ ಸೇವೆ ಮಾಡುವಂತಹ ಭಾಗ್ಯ ಜನ ನನಗೆ ಕಲ್ಪಿಸಿಕೊಟ್ಟಿದ್ದಾರೆ. ಅವರ ಋಣದಲ್ಲಿ ನಾನು ಇದ್ದೇನೆ. ಅವರ ಋಣ ತೀರಿಸುವ ಕೆಲಸ ನಾನು ಮಾಡುತ್ತಾ ಇರುತ್ತೇನೆ. ಕೊರೊನಾ ಮೊದಲನೇ ಅಲೆಯಲ್ಲೂ ನಾನು ಸಹಾಯ ಮಾಡಿದ್ದೇನೆ. ಎರಡನೇ ಅಲೆಯಲ್ಲೂ ಮಾಡುತ್ತಿದ್ದೇನೆ. ಮೊದಲನೇ ಅಲೆಯ ಸಂದರ್ಭ ನಾನು ಶಾಸಕನಾಗದೆ ಇದ್ದರು ಜನರ ಸೇವೆ ಮಾಡಿದ್ದೇನೆ. ಇದೀಗ ಶಾಸಕನಾಗಿ ಕೂಡ ಜನರ ಸೇವೆ ಮುಂದಾಗಿದ್ದೇನೆ ಎಂದು ಅಭಿಪ್ರಾಯಪಟ್ಟರು.