ಇಸ್ಲಾಮಾಬಾದ್: ಪಾಕಿಸ್ತಾನ ಸರ್ಕಾರ ಅತ್ಯಾಚಾರ ಮಾಡಿದವರ ವಿರುದ್ಧ ಕಠಿಣ ಕಾನೂನು ಜಾರಿಗೆ ತಂದಿದೆ ಎಂದು ಅಲ್ಲಿನ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಮಂಗಳವಾರ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ನೀಡಿದವರ ಪುರುಷತ್ವ ಹರಣ (Chemical Castration) ಮಾಡುವ ಕಾನೂನನ್ನು ಜಾರಿಗೆ ತರಲು ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಪಾಕ್ ಮಾಧ್ಯಮಗಳು ಸುದ್ದಿ ಮಾಡಿವೆ. ಅತ್ಯಾಚಾರ ಮಾಡಿದವರಿಗೆ ಕೆಮಿಕಲ್ ಕ್ಯಾಸ್ಟ್ರೇಶನ್ ಎಂಬ ರಾಸಾಯನಿಕ ಬಳಿಸಿ ಅವರು ಮುಂದೆ ಮತ್ತೆ ಸೆಕ್ಸ್ ಮಾಡದಂತೆ ಮಾಡಲು ನಿಯಮ ರೂಪಿಸಿದೆ.
ಕೇಂದ್ರ ಸಂಪುಟ ಸಭೆಯಲ್ಲಿ ಪಾಕ್ ಕಾನೂನು ಸಚಿವರು ಅತ್ಯಾಚಾರ ವಿರೋಧಿ ಕರುಡನ್ನು ಮಂಡನೆ ಮಾಡಿದ್ದು, ಇದಕ್ಕೆ ಪ್ರಧಾನಿ ಇಮ್ರಾನ್ ಖಾನ್ ಸುಗ್ರೀವಾಜ್ಞೆಗೆ ಅನುಮೋದನೆ ಸೂಚಿಸಿದ್ದಾರೆ. ಜೊತೆಗೆ ಈ ಕಾಯ್ದೆಯ ಪ್ರಕಾರ ದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳನ್ನು ತ್ವರಿತ ರೀತಿಯಲ್ಲಿ ವಿಚಾರಣೆ ಮಾಡಬೇಕು. ಪೊಲೀಸರು ಸಾಕ್ಷಿ ನಾಶವಾಗದಂತೆ ನೋಡಿಕೊಳ್ಳಬೇಕು. ಅತ್ಯಾಚಾರ ಪ್ರಕರಣದಲ್ಲಿ ಹೆಚ್ಚು ಮಹಿಳಾ ಪೊಲೀಸರು ಭಾಗವಹಿಸಬೇಕು ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ.
ಇದೇ ಸಂಪುಟ ಸಭೆಯಲ್ಲಿ ಕೆಲ ಸಚಿವರು ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವ ಕಾನೂನು ತನ್ನಿ ಎಂದು ಒತ್ತಾಯ ಮಾಡಿದ್ದಾರೆ ಎಂದು ಮಾಧ್ಯಮಗಳು ಸುದ್ದಿ ಮಾಡಿವೆ. ಆದರೆ ಇಮ್ರಾನ್ ಖಾನ್ ಸದ್ಯ ಅತ್ಯಾಚಾರಿಗಳಿಗೆ ಕೆಮಿಕಲ್ ಕ್ಯಾಸ್ಟ್ರೇಶನ್ ರಾಸಾಯನಿಕ ನೀಡುವ ಮೂಲಕ ಅವರೆಂದು ಸೆಕ್ಸ್ ಮಾಡದಂತೆ ಮಾಡಲಾಗುವುದು. ಈ ಕಾನೂನು ಜಾರಿಗೆ ಬರಲಿ ನಂತರ ಮುಂದಿನ ಕಾನೂನಿನ ಬಗ್ಗೆ ಯೋಚಿಸೋಣ ಎಂದು ಹೇಳಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ಪಾಕ್ ಸರ್ಕಾರ ನೀಡಲ್ಲ.
ಕಳೆದ 2018ರ ಜನವರಿಯಲ್ಲಿ ನಡೆದ ಏಳು ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ನಂತರ, ಪಾಕಿಸ್ತಾನದಲ್ಲಿ ಈ ಕಾನೂನು ತರಬೇಕು ಎಂದು ಒತ್ತಾಯ ಕೇಳಿಬಂದಿತ್ತು. ಆದರೆ ಈಗ ಮತ್ತೆ ಲಹೋರ್‍ನಲ್ಲಿ ಒಂದು ಗ್ಯಾಂಗ್ ರೇಪ್ ನಡೆದಿದ್ದು, ಈ ವಿಚಾರ ಮತ್ತೆ ಮುನ್ನಲೆಗೆ ಬಂದಿತ್ತು. ಹೀಗಾಗಿ ಪಾಕಿಸ್ತಾನದ ಸರ್ಕಾರ ಈ ಕಾನೂನನ್ನು ಜಾರಿಗೆ ತಂದಿದೆ ಎನ್ನಲಾಗಿದೆ.