-ಸೋದರರ ಕೋಣೆಗಳಿಗೆ ನುಗ್ಗುತ್ತಿದ್ದ
ಲಕ್ನೋ: ಅತ್ತಿಗೆ ಜೊತೆ ಅಸಭ್ಯವಾಗಿ ವರ್ತಿಸಿದ ತಮ್ಮನನ್ನು ಕೋಲಿನಿಂದ ಥಳಿಸಿ ಕೊಲೆಗೈದಿರುವ ಘಟನೆ ಉತ್ತರ ಪ್ರದೇಶದ ಆಗ್ರಾದ ಬಳಿಯ ಎತ್ಮಾಉದ್ಧೌಲ್ ಕ್ಷೇತ್ರದ ಸುಶೀಲನಗರದಲ್ಲಿ ನಡೆದಿದೆ.
ಸುಶೀಲನಗರದ ನಿವಾಸಿ ರಮೇಶಚಂದ್ ಅವರಿಗೆ ಸುರೇಂದ್ರ ಸಿಂಗ್, ಸಂಜಯ್, ಸುಖಾ, ಕಾಲೂ ಮತ್ತು ನೆಹಾನಿ ಐವರು ಗಂಡು ಮಕ್ಕಳು. ಸಂಜಯ್ ಬಿಟ್ಟು ಉಳಿದ ನಾಲ್ವರಿಗೂ ಮದುವೆಯಾಗಿದ್ದು, ಎಲ್ಲರೂ ಒಂದೇ ಮನೆಯಲ್ಲಿ ವಾಸವಾಗಿದ್ದಾರೆ. ಮದುವೆಯಾಗದ ಸಂಜಯ್ ಸೋದರರ ಪತ್ನಿಯರ ಜೊತೆ ಕೆಟ್ಟದಾಗಿ ವರ್ತಿಸುತ್ತಿದ್ದನು. ಪಾನಮತ್ತನಾಗಿ ಮನೆಗೆ ಬರುತ್ತಿದ್ದ ಸಂಜಯ್ ಅಶ್ಲೀಲವಾಗಿ ನಡೆದುಕೊಳ್ಳುತ್ತಿದ್ದನು.
ಪಾನಮತ್ತನಾಗಿ ಮನೆಗೆ ಬಂದ ಸಂಜಯ್ ಹಿರಿಯ ಸೋದರನ ಪತ್ನಿಯ ಕೋಣೆಗೆ ನುಗ್ಗಿ ಅಶ್ಲೀಲವಾಗಿ ವರ್ತಿಸಿದ್ದಾನೆ. ಇದರಿಂದ ಕೋಪಗೊಂಡ ಸುರೇಂದ್ರ ಸಿಂಗ್ ತಮ್ಮನನ್ನು ಕೋಣೆಯಲ್ಲಿ ಕೂಡಿಹಾಕಿ ಜೀವ ಹೋಗುವರೆಗೂ ಥಳಿಸಿದ್ದಾನೆ. ವಿಷಯ ತಿಳಿದು ಪೊಲೀಸರು ಸುರೇಂದ್ರನನ್ನು ಬಂಧಿಸಿ, ಕೊಲೆಗೆ ಬಳಸಿದ ಕೋಲನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತ ಸಂಜಯ್ ವಿರುದ್ಧ ರೈಲ್ವೇ ವಸ್ತುಗಳ ಕಳ್ಳತನದಡಿ ಪ್ರಕರಣಗಳು ದಾಖಲಾಗಿವೆ.