ಶಿವಮೊಗ್ಗ: ಬಿಹಾರದಲ್ಲಿ ಮಹಾಮೈತ್ರಿ ಅಧಿಕಾರಕ್ಕೆ ಬರುವುದು ಹಾಗೂ ತೇಜಸ್ವಿ ಯಾದವ್ ಮುಖ್ಯಮಂತ್ರಿ ಆಗುವುದು ನಿಶ್ಚಿತ. ಆದರೆ ಒಂದು ವೇಳೆ ಅತಂತ್ರ ಫಲಿತಾಂಶ ಬಂದರೆ ಯಡಿಯೂರಪ್ಪ ಬಿಹಾರಕ್ಕೆ ಹೋಗಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಆಪರೇಷನ್ ಕಮಲ ಮಾಡುವುದರಲ್ಲಿ ಎಕ್ಸ್‍ಪರ್ಟ್ ಇದ್ದಾರೆ. ಹೀಗಾಗಿ ಬಿಹಾರಕ್ಕೆ ಹೋಗುತ್ತಾರೆ ಎಂದು ಹೇಳಿ ಕಾಲೆಳೆದರು.
ಶಿರಾ ಹಾಗೂ ಆರ್.ಆರ್ ನಗರ ಚುನಾವಣೆಯ ಫಲಿತಾಂಶದ ಬಗ್ಗೆ ಈಗಾಲೇ ಹೇಳಲು ನಾನು ಜ್ಯೋತಿಷಿಯಲ್ಲ. ಮತದಾರ ದೇವರು ಯಾರಿಗೆ ಆಶೀರ್ವಾದಿಸಿದ್ದಾನೋ ಅವರು ಗೆಲ್ಲುತ್ತಾರೆ ಎಂದು ಹೇಳಿದರು.
ಶಿವಮೊಗ್ಗದಲ್ಲಿ ಈ ಬಗ್ಗೆ ಯಡಿಯೂರಪ್ಪ ಅವರ ಪುತ್ರರು ಉಪ ಚುನಾವಣೆಯಲ್ಲಿ ಹಣ ಖರ್ಚು ಮಾಡುವುದರಲ್ಲಿ ದಾಖಲೆ ನಿರ್ಮಿಸಿದ್ದಾರೆ. ರಾಜ್ಯದ ಖಜಾನೆಯನ್ನೇ ತೆಗೆದುಕೊಂಡು ಹೋಗಿ ಚುನಾವಣೆ ನಡೆಸಿದ್ದಾರೆ. ನನ್ನ 46 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಚುನಾವಣೆಯನ್ನೇ ನಾನು ನೋಡಿಲ್ಲ ಎಂದರು.
ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಸಿಬಿಐ ಬಂಧಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ಬಿಜೆಪಿ ಬಹಳಷ್ಟು ಮಂದಿಗೆ ಬಿಜೆಪಿಗೆ ಸೇರುವಂತೆ ಗಾಳ ಹಾಕುತ್ತದೆ. ಅವರ ಮಾತು ಕೇಳದಿದ್ದಾಗ ಅವರ ಮುಂಚೂಣಿ ಘಟಕಗಳಾದ ಐಟಿ, ಇಡಿ ಹಾಗೂ ಸಿಬಿಐ ಉಪಯೋಗಿಸಿಕೊಂಡು ಇಂತಹ ಕೆಲಸ ಮಾಡುತ್ತಾರೆ. ಹುಬ್ಬಳ್ಳಿಯಲ್ಲಿಯೂ ಸಹ ವಿನಯ ಕುಲಕರ್ಣಿ ಪ್ರಕರಣದಲ್ಲಿ ಇದೇ ಕೆಲಸವಾಗಿದೆ ಎಂದು ಬಿ.ಕೆ.ಹರಿಪ್ರಸಾದ್ ಆರೋಪಿಸಿದರು.