ಹುಬ್ಬಳ್ಳಿ: ಗಣ್ಯ ವ್ಯಕ್ತಿಗಳು ನಿಧನರಾದಾಗ ಊರೆಲ್ಲಾ ಮೆರವಣಿಗೆ ಮಾಡಿ ಅಂತ್ಯ ಸಂಸ್ಕಾರ ಕಾರ್ಯ ಮಾಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ರೈತ ಕುಟುಂಬ ಮನೆಯಲ್ಲಿ 27 ವರ್ಷಗಳ ಕಾಲ ಸಾಕಷ್ಟು ದುಡಿದ ಎತ್ತು ಸಾವನ್ನಪ್ಪಿದ ನಂತರ ಅದ್ಧೂರಿ ಮೆರವಣಿಗೆ ಮಾಡಿ ವಿಧಿ ವಿಧಾನದ ಮೂಲಕ ಅಂತ್ಯಕ್ರೀಯೆ ನೆರವೇರಿಸಿದೆ.
ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ರೈತ ಅಶೋಕ ಗಾಮನಗಟ್ಟಿ ಅವರ ಕುಟುಂಬ ತಮ್ಮ ಮನೆಯಲ್ಲಿಯೇ ಜನಸಿದ ಕರುವಿಗೆ ರಾಮ ಎಂದು ನಾಮಕರಣ ಮಾಡಿ ಪ್ರತಿವರ್ಷ ಹುಟ್ಟು ಹಬ್ಬವನ್ನು ಆಚರಣೆ ಮಾಡುವ ಮೂಲಕ ಮನೆಯ ಸದಸ್ಯರಲ್ಲಿ ಒಬ್ಬನಂತೆ ನೋಡುತ್ತಿದ್ದರು. ಆದರೆ ಮನೆಯ ಮಗನಂತೆ ಜೋಪಾನ ಮಾಡಿ, 27 ವರ್ಷಗಳ ಕಾಲ ದುಡಿದ ರಾಮ ಇಂದು ಸಾವನ್ನಪ್ಪಿದ ಪರಿಣಾಮ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಹಲವು ವರ್ಷಗಳ ಕಾಲ ಮನೆಯ ಸದಸ್ಯನಾಗಿ ಜಮೀನಿನಲ್ಲಿ ದುಡಿದ ರಾಮ, ಸಾವನಪ್ಪಿದ ಪರಿಣಾಮ ರೈತನ ಕುಟುಂಬ ಸಕಲ ವಾದ್ಯ ಮೇಳದೊಂದಿಗೆ ಊರಲ್ಲಿ ಮೆರವಣಿಗೆ ಮಾಡಿ, ವಿಧಿ ವಿಧಾನಗಳ ಮೂಲಕ ರಾಮನ ಅಂತ್ಯ ಸಂಸ್ಕಾರ ನೆರವೇರಿಸಿ ಮೂಕಪ್ರಾಣಿಗೆ ವಿಶಿಷ್ಟವಾಗಿ ಗೌರವ ಸಲ್ಲಿಸಿದ್ದಾರೆ.
ಎತ್ತಿನ ಜೊತೆಗೆ ರೈತ ಕುಟುಂಬ ಉತ್ತಮ ಬಾಂಧವ್ಯ ಹೊಂದಿದ್ದನ್ನು ಕಂಡ ಗ್ರಾಮಸ್ಥರಲ್ಲಿಯೂ ರಾಮನ ಸಾವು ಶೋಕವನ್ನುಂಟು ಮಾಡಿದೆ. ಹೀಗಾಗಿ ರಾಮ ಎನ್ನುವ ಎತ್ತಿನ ಅಂತ್ಯಸಂಸ್ಕಾರದಲ್ಲಿ ಗ್ರಾಮಸ್ಥರೂ ಪಾಲ್ಗೊಂಡು ರಾಮ ಅಮರ್ ರಹೇ ಎಂದು ಘೋಷಣೆ ಕೂಗಿದ್ದು, ರೈತನಿಗೆ ಜಾನುವಾರುಗಳ ಮೇಲಿನ ಪ್ರೀತಿ ಅದೆಷ್ಟು ಗಾಢ ಎನ್ನುವುದನ್ನು ಸಾರಿಸಾರಿ ಹೇಳುವಂತಿತ್ತು.