ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸ್ ಅವರು ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.
ಡಿಕೆಶಿ ಅವರ ಸದಾಶಿವ ನಗರ ನಿವಾಸದಲ್ಲಿ ಭೇಟಿಯಾದ ಅಖಂಡ, ತಮ್ಮ ನಿವಾಸಕ್ಕೆ ಬೆಂಕಿ ಹಚ್ಚಿದ ಪ್ರಕರಣ ಸಂಬಂಧ ಸಂಪತ್ ರಾಜು ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಅಖಂಡ ನೋವು ನನಗೆ ಅರ್ಥ ಆಗುತ್ತೆ. ಕೆಲವೊಂದು ವಿಷಯ ಹೇಳಿದ್ದಾರೆ. ಖಂಡಿತಾ ಅವರಿಗೆ ನ್ಯಾಯ ಒದಗಿಸಿ ಕೊಡುತ್ತೇನೆ. ಶಿಸ್ತುಪಾಲನಾ ಸಮಿತಿಗೆ ಶಿಫಾರಸು ಮಾಡುವುದಾಗಿ ತಿಳಿಸಿದರು.
ಮೂರು-ನಾಲ್ಕು ದಿನದಿಂದ ಭೇಟಿಗೆ ಸಮಯ ಕೇಳಿದ್ದರು. ನಾನು ಇವತ್ತು ಬರೋಕೆ ಹೇಳಿದ್ದೆ. ಅವರ ಸಮಸ್ಯೆ ಕೇಳಿದೆ. ಭಾರೀ ನೋವಲ್ಲಿ ಇದ್ದಾರೆ. ಅವರ ನೋವು ನನಗೆ ಅರ್ಥ ಆಗುತ್ತೆ. ನಾನೇ ಅವರ ಸ್ಥಾನದಲ್ಲಿದ್ದರೂ ನೋವಾಗುತ್ತಿತ್ತು ಎಂದು ಡಿಕೆಶಿ ಹೇಳಿದರು.
ಇದೇ ವೇಳೆ ಅಖಂಡ ಮಾತನಾಡಿ, ಮಾಜಿ ಮೇಯರ್ ಸಂಪತ್ ರಾಜ್, ಜಾಕೀರ್ ರನ್ನ ಪಕ್ಷದಿಂದ ಉಚ್ಚಾಟಿಸಬೇಕು ಅಂತ ಹೇಳಿದ್ದೀನಿ. ನ್ಯಾಯ ಸಿಗುತ್ತೆ ಅನ್ನೋ ಭರವಸೆ ಇದೆ. ಎಲ್ಲವನ್ನೂ ಹೇಳಿದ್ದೇನೆ. ವಿಚಾರವನ್ನ ಶಿಸ್ತು ಪಾಲನಾ ಸಮಿತಿಗೆ ಶಿಫಾರಸು ಮಾಡ್ತೀನಿ ಅಂದಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು. ನ್ಯಾಯ ಸಿಗುತ್ತೆ ಅನ್ನೊ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭೇಟಿ ವೇಳೆ ಇಬ್ಬರು ಮಹಿಳಾ ಜನ ಪ್ರತಿನಿಧಿಗಳು ಡಿಕೆಶಿ ಕಾಲಿಗೆ ಬಿದ್ದು ನಮಸ್ಕರಿಸಿದ ಪ್ರಸಂಗ ನಡೆಯಿತು. ರಾಮನಗರ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಜಯರತ್ನ ರಾಜೇಂದ್ರ ಹಾಗೂ ಕನಕಪುರ ತಾಲೂಕು ಪಂಚಾಯತ ಉಪ ಅಧ್ಯಕ್ಷೆ ಮಂಜುಳಾ ಬೇಡ.. ಬೇಡ ಅಂದ್ರೂ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ.
ಕಾಂಗ್ರೆಸ್ ಶಾಸಕ @AkhandaSrinivas ಅವರು ಕೆಪಿಸಿಸಿ ಅಧ್ಯಕ್ಷರಾದ @DKShivakumar ಅವರನ್ನು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿ, ಸಮಾಲೋಚನೆ ನಡೆಸಿದರು. pic.twitter.com/Pqx0MObJWq
— Karnataka Congress (@INCKarnataka) November 21, 2020