ವಿಜಯಪುರ: ಬಡವರ ಪಾಲಾಗಬೇಕಿದ್ದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯನ್ನು ವಿಜಯಪುರ ಪೊಲೀಸ್ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಜಪ್ತಿ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರ ನಿಡಗುಂದಿ ರಸ್ತೆ ಬಳಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಲಾರಿಯಲ್ಲಿ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಮನಗೂಳಿ ಪೊಲೀಸರು ಹಾಗೂ ಜಿಲ್ಲಾ ಆಹಾರ ಅಧಿಕಾರಿಗಳು ದಾಳಿ ನಡೆಸಿದ್ದರು. ಲಾರಿ ಸಮೇತ ಅಕ್ರಮ ಪಡಿತರ ಅಕ್ಕಿಯನ್ನ ವಶಕ್ಕೆ ಪಡೆದಿದ್ದಾರೆ.
ವಾಹನ ಸಂಖ್ಯೆ ಏಂ-29 ಃ-8299 ಮೂಖಾಂತರ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಬೇರೆಕಡೆಗೆ ಸಾಗಿಸಲಾಗುತ್ತಿತ್ತು. ಈ ವೇಳೆ ದಾಳಿ ನಡೆಸಿ ಲಾರಿಯನ್ನು ಜಪ್ತಿ ಮಾಡಲಾಗಿದೆ. ಒಟ್ಟು ಅಕ್ಕಿ ಅಂದಾಜು 296 ಕ್ವಿಂಟಲ್ ಇದ್ದು, ಅಂದಾಜು 7,99,000 ರೂ ಮೌಲ್ಯದ್ದಾಗಿದೆ. ಲಾರಿ ಚಾಲಕ ಸದ್ದಾಂ ಜಂಗಿಯನ್ನ ಪೊಲೀಸರು ವಶಕ್ಕೆ ಪಡೆಸಿದ್ದು, ಸದ್ದಾಂ ಮೂಲತಃ ಬಾಗಲಕೋಟ ಜಿಲ್ಲೆಯ ಗದ್ದನಕೇರಿ ನಿವಾಸಿ ತಿಳಿದು ಬಂದಿದೆ. ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.