– ಆಗಸ್ಟ್ 12ರಂದು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ ದುಂಡುಮೇಜಿನ ಸಭೆ
– ಸೆಪ್ಟೆಂಬರ್ ಗೆ ಮೀಸಲಾತಿಗೆ ಕೊಟ್ಟ ಸಮಯ ಅಂತ್ಯ
ದಾವಣಗೆರೆ: ಸೆಪ್ಟೆಂಬರ್ ಗೆ ಸರ್ಕಾರಕ್ಕೆ ನೀಡಿದ್ದ ಕಾಲಾವಧಿ ಮುಗಿಯುತ್ತದೆ. ಅಕ್ಟೋಬರ್ ಒಂದರೊಳಗೆ ಮೀಸಲಾತಿ ಪ್ರಕಟಿಸಿ ಎಂದು ಕೂಡಲಸಂಗಮದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಒತ್ತಾಯ ಮಾಡಿದರು.
ದಾವಣಗೆರೆಯಲ್ಲಿ ಮಾತನಾಡಿದ ಸ್ವಾಮೀಜಿಗಳು, ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯ ಸರ್ಕಾರ ಈ ಹಿಂದೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವುದಾಗಿ ಭರವಸೆ ನೀಡಿತ್ತು. ಅಕ್ಟೋಬರ್ ಒಂದರೊಳಗಾಗಿ ಆ ಪ್ರಕಾರ ಮೀಸಲಾತಿ ನೀಡಬೇಕು. ವಿಳಂಬವಾದ್ರೆ ಮತ್ತೆ ಪ್ರೀಡಂ ಪಾರ್ಕ್ ನಲ್ಲಿ ಹೋರಾಟ ಮಾಡಲಾಗುವುದು ಎಂದು ಸ್ವಾಮೀಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಕಾಯ್ದೆಯನ್ನು ಮಂಡಿಸಿರುವುದನ್ನು ಸ್ವಾಗತಿಸುತ್ತೇನೆ. ಆಯಾ ರಾಜ್ಯಗಳಿಗೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸೇರಿಸುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಅಧಿಕಾರ ಕೊಟ್ಟಿದೆ. ಮುಂದಿನ ತಿಂಗಳು ಸರ್ಕಾರ ನೀಡಿದ್ದ ಕಾಲಮಿತಿ ಮುಕ್ತಾಯಗೊಳ್ಳುತ್ತದೆ ಎಂದರು.
ನೂತನ ಸಿಎಂ ಬೊಮ್ಮಾಯಿ ರೈಟ್ ಟೈಮ್ ಗೆ ರೈಟ್ ಪರ್ಸನ್ ಮುಖ್ಯಮಂತ್ರಿ. ಬೊಮ್ಮಾಯಿ ನಮ್ಮವರು ಸಿಎಂ ಆಗಿರುವುದಕ್ಕೆ ಅಭಿಮಾನ ಇದೆ. ಮೀಸಲಾತಿ ಚಳುವಳಿಯಲ್ಲಿ ಬೊಮ್ಮಾಯಿ ಅಂದು ಸಂಪೂರ್ಣ ಸಹಕಾರ ಕೊಟ್ಟಿದ್ದರು. ಯಡಿಯೂರಪ್ಪನವರು ಅಂದು ಮೀಸಲಾತಿ ನೀಡುವ ವಿಚಾರವಾಗಿ ವ್ಯಕ್ತಿಯಾಗಿ ಮಾತು ಕೊಟ್ಟಿಲ್ಲ. ಒಂದು ಸರ್ಕಾರದ ಪ್ರತಿನಿಧಿಯಾಗಿ ಮಾತು ಕೊಟ್ಟಿದ್ದರು, ಈಗ ಬೊಮ್ಮಾಯಿಯವರು ಮುಖ್ಯಮಂತ್ರಿಗಳಾಗಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿದರು. ಇದನ್ನೂ ಓದಿ: ಪಂಚಮಸಾಲಿ ಸಮಾಜದಲ್ಲಿ 80 ಲಕ್ಷ ಜನರಿದ್ದಾರೆ, ಅವರೆಲ್ಲರೂ ನಾಯಕರೇ: ನಿರಾಣಿ
ಮೀಸಲಾತಿ ನೀಡದಿದ್ದರೆ ಇಡೀ ಪಂಚಮಸಾಲಿ ಸಮಾಜ ಅಕ್ಟೋಬರ್ ಒಂದಕ್ಕೆ ಮಾಜಿ ಮುಖ್ಯಮಂತ್ರಿ ದಿ. ಜೆ.ಹೆಚ್.ಪಟೇಲ್ ರವರ ಜನ್ಮದಿನದಂದು ಸರ್ಕಾರದ ವಿರುದ್ಧ ಹೋರಾಟ ಮಾಡ್ತೀವಿ ಎಂದರು. ಇದಕ್ಕೂ ಮುನ್ನ ನಾವು ರಾಜ್ಯ ಸರ್ಕಾರಕ್ಕೆ ನೆನಪಿಸಲು ಆಗಸ್ಟ್ 12 ರಂದು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ ದುಂಡುಮೇಜಿನ ಸಭೆ ನಡೆಸಲಿದ್ದು, ಈ ದುಂಡುಮೇಜಿನ ಸಭೆಯಲ್ಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷರು ಸೇರಿದಂತೆ ರಾಜ್ಯದ ಮೂಲೆ ಮೂಲೆಯ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದು, ಈ ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷೆ ರೂಪಿಸಲಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಪಂಚಮಸಾಲಿ ಮೀಸಲು ಪಾದಯಾತ್ರೆಗೆ ಟ್ವಿಸ್ಟ್ – ವೀರಶೈವ ಲಿಂಗಾಯತ ಶ್ರೀಗಳಿಂದಲೂ ಬೆಂಬಲ