Connect with us

ಪಂಚಮಸಾಲಿ ಸಮಾಜದಲ್ಲಿ 80 ಲಕ್ಷ ಜನರಿದ್ದಾರೆ, ಅವರೆಲ್ಲರೂ ನಾಯಕರೇ: ನಿರಾಣಿ

ಪಂಚಮಸಾಲಿ ಸಮಾಜದಲ್ಲಿ 80 ಲಕ್ಷ ಜನರಿದ್ದಾರೆ, ಅವರೆಲ್ಲರೂ ನಾಯಕರೇ: ನಿರಾಣಿ

–  ಹೆಲಿಕಾಪ್ಟರ್‌ನಲ್ಲಿ ಓಡಾಡುವ ಎಸ್‍ಸಿ, ಎಸ್‍ಟಿಗಳು ಇದ್ದಾರೆ

ಧಾರವಾಡ: ಪಂಚಮಸಾಲಿ ಸಮಾಜದಲ್ಲಿ 80 ಲಕ್ಷ ಜನರಿದ್ದಾರೆ, ಆ ಜನರೆಲ್ಲರೂ ಪಂಚಮಸಾಲಿಯ ನಾಯಕರೇ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ಹೋರಾಟದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಕೂಡಲ ಸಂಗಮ ಮತ್ತು ಹರಿಹರ ಪೀಠ ಸ್ವಾಮೀಜಿ 2ಎ ಗಾಗಿ ಅವರದ್ದೇ ಲೆವಲ್‍ನಲ್ಲಿ ಅವರು ಹೋರಾಟ ಮಾಡುತ್ತಿದ್ದಾರೆ. ನಾವು ಸಹ ವಿಧಾನಸಭೆ ಒಳಗೆ ಈ ಬಗ್ಗೆ ಸಿಎಂಗೆ ಮನವಿ ಮಾಡಿಕೊಂಡಿದ್ದೆವೆ. ಮೀಸಲಾತಿ ಕೊಡುವುದಕ್ಕೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಮೀಸಲಾತಿ ಬಂದ ಬಳಿಕ ಕೋರ್ಟ್‍ಗೆ ಹೋದರೆ ಅದು ಹಾಗೆಯೇ ಉಳಿಯುತ್ತದೆ. ಹೀಗಾಗಿ ನಿವೃತ್ತ ನ್ಯಾಯಮೂರ್ತಿಗಳ ತ್ರಿ ಸದಸ್ಯ ಪೀಠದಿಂದ ಈ ಕೆಲಸ ನಡೆದಿದೆ. ಇಷ್ಟೇ ದಿನದಲ್ಲಿ ಮೀಸಲಾತಿ ಆಗುತ್ತದೆ ಅಂತಾ ಹೇಳಲು ಆಗುವುದಿಲ್ಲ. ಎಲ್ಲ ಸಮಾಜದಲ್ಲಿ ಬಡವರು ಶ್ರೀಮಂತರು ಇದ್ದಾರೆ. ಎಸ್‍ಸಿ ಸಮಾಜದಲ್ಲಿಯೂ ಶ್ರೀಮಂತರಿದ್ದಾರೆ, ಮಲ್ಲಿಕಾರ್ಜುನ ಖರ್ಗೆಯಂಥವರು ಹೆಲಿಕಾಪ್ಟರ್‍ನಲ್ಲಿ ಓಡಾಡುವವರು ಎಸ್‍ಸಿ, ಎಸ್‍ಟಿಯಲ್ಲಿ ಇದ್ದಾರೆ. ಬ್ರಾಹ್ಮಣ ಮೇಲ್ವರ್ಗದ ಸಮಾಜದಲ್ಲೂ ಬಡವರಿದ್ದಾರೆ ಎಂದು ಹೇಳಿದರು.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿ, ಇದು ನಕಲಿ ಸಿಡಿ ಎಂದು ಜಾರಕಿಹೊಳಿಯವರೇ ಹೇಳಿದ್ದಾರೆ. ಆದರೂ ಸಹ ಸತ್ಯಾಸತ್ಯತೆ ಕಂಡು ಹಿಡಿಯಲು ತನಿಖೆ ಮಾಡುತ್ತಿದ್ದಾರೆ. ಸ್ವಲ್ಪ ದಿನದಲ್ಲಿ ನಿರಪರಾಧಿಯಾಗಿ ಹೊರ ಬರುತ್ತಾರೆ. ವರದಿ ಬಂದ ಬಳಿಕ ಅಪಾದನೆಯಿಂದ ಹೊರಗೆ ಬರುತ್ತಾರೆ. ಗೃಹ ಇಲಾಖೆಗೆ ತನ್ನದೆಯಾದ ಪ್ರಕ್ರಿಯೆ ಇರುತ್ತದೆ. ಆ ಪ್ರಕ್ರಿಯೆ ಅಡಿಯಲ್ಲಿ ಅವರು ತನಿಖೆ ನಡೆಸುತ್ತಿದ್ದಾರೆ ಎಂದಿದ್ದಾರೆ.

Advertisement
Advertisement