ಅಂಪೈರ್ಸ್ ಕಾಲ್ ನಿಯಮ ಮುಂದುವರಿಕೆ – ಡಿಆರ್‍ಎಸ್‍ನಲ್ಲಿ 3 ಬದಲಾವಣೆಗೆ ಒಪ್ಪಿಗೆ

Public TV
2 Min Read
virat kohli umpire

– ಐಸಿಸಿ ಸಭೆಯಲ್ಲಿ ಗಂಭೀರ ಚರ್ಚೆ
– ನಿಯಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕೊಹ್ಲಿ

ದುಬೈ: ಬಹಳ ಚರ್ಚೆಗೆ ಗ್ರಾಸವಾಗಿರುವ ಅಂಪೈರ್ಸ್ ಕಾಲ್ ನಿಯಮವನ್ನು ರದ್ದು ಮಾಡದೇ ಇರಲು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ನಿರ್ಧಾರ ತೆಗೆದುಕೊಂಡಿದೆ. ಆದರೆ ಈಗ ಅನುಸರಿಸುತ್ತಿರುವ ಡಿಆರ್‍ಎಸ್‍ನಲ್ಲಿ ಕೆಲ ಬದಲಾವಣೆ ಮಾಡಲು ಒಪ್ಪಿಗೆ ನೀಡಿದೆ.

ಇಂಗ್ಲೆಂಡ್ ಜೊತೆಗಿನ ಕ್ರಿಕೆಟ್ ಸರಣಿ ಸಂದರ್ಭದಲ್ಲಿ ಟೀಂ ಇಂಡಿಯಾ ನಾಯಕ ಅಂಪೈರ್ಸ್ ಕಾಲ್‍ನಲ್ಲಿ ಗೊಂದಲಗಳಿವೆ ಎಂದು ಹೇಳಿದ್ದರು. ಇದಕ್ಕೆ ಕೆಲ ಕ್ರಿಕೆಟಿಗರು ಸಹ ಬೆಂಬಲ ಸೂಚಿಸಿದ್ದ ಬಳಿಕ ಈ ನಿಯಮ ಬಹಳ ಚರ್ಚೆಗೆ ಗ್ರಾಸವಾಗಿತ್ತು. ಇದನ್ನೂ ಓದಿ: ಡೇವಿಡ್‌ ವಾರ್ನರ್‌ ಔಟ್‌? ನಾಟೌಟ್?‌ – ಚರ್ಚೆಗೆ ಗ್ರಾಸವಾದ ಮೂರನೇ ಅಂಪೈರ್‌ ನಿರ್ಧಾರ

umpire calls

ಕೊಹ್ಲಿ ಹೇಳಿದ್ದು ಏನು?
ಹಾಲಿ ನಿಯಮದ ಪ್ರಕಾರ ಎಲ್‍ಬಿಡಬ್ಲ್ಯೂ ಸಂದರ್ಭದಲ್ಲಿ ಅಂಪೈರ್ ನೀಡಿದ ನಾಟೌಟ್ ತೀರ್ಪನ್ನು ಪ್ರಶ್ನಿಸಿ ಮೂರನೇ ಅಂಪೈರ್ ಔಟ್ ಎಂಬ ತೀರ್ಮಾನಕ್ಕೆ ಬರಬೇಕಾದರೆ ಚೆಂಡಿನ ಅರ್ಧಕ್ಕಿಂತಲೂ(ಶೇ.50) ಹೆಚ್ಚಿನ ಭಾಗ ವಿಕೆಟಿಗೆ ತಾಗುವಂತಿರಬೇಕು. ಆದರೆ ಬಾಲ್ ವಿಕೆಟಿಗೆ ಸ್ವಲ್ಪವೇ  ಬಡಿಯುವಂತಿದ್ದರೂ ಔಟ್ ಕೊಡಬೇಕು ಎಂದು ವಿರಾಟ್ ಕೊಹ್ಲಿ ವಾದಿಸಿದ್ದರು.

ಮೂರು ಬದಲಾವಣೆ
1. ಈಗ ಡಿಆರ್‍ಎಸ್‍ಗೆ 3 ಸಣ್ಣ ಬದಲಾವಣೆಗಳನ್ನು ತರಲು ಐಸಿಸಿ ಮುಂದಾಗಿದೆ. ಹಾಲಿ ನಿಯಮದ ಪ್ರಕಾರ ಎಲ್‍ಬಿಡಬ್ಲ್ಯುಗೆ ಸಂಬಂಧಿಸಿದಂತೆ ಡಿಆರ್‍ಎಸ್ ತೆಗೆದುಕೊಳ್ಳುವಾಗ ಚೆಂಡು ಬೇಲ್ಸ್‌ನ ಕೆಳಭಾಗಕ್ಕೆ ಬಡಿಯುವಂತಿದ್ದರೆ ಆಗ ಅದು ಅಂಪೈರ್ಸ್ ಕಾಲ್ ವ್ಯಾಪ್ತಿಗೆ ಬರುತ್ತದೆ. ಆದರೆ ಈಗ ಚೆಂಡು ಬೇಲ್ಸ್ ಮೇಲ್ಭಾಗಕ್ಕೆ ಬಡಿಯುತ್ತದೆ ಎಂದು ಖಾತ್ರಿಯಾದರೂ ಅದನ್ನು ಅಂಪೈರ್ಸ್ ಕಾಲ್ ವ್ಯಾಪ್ತಿಗೆ ಸೇರಿಸಲು ಮುಂದಾಗಿದೆ. ಇದನ್ನೂ ಓದಿ: ಟೆಸ್ಟ್‌ ಚಾಂಪಿಯನ್‌ ಶಿಪ್‌ – ಐಸಿಸಿ ನಿಯಮದ ವಿರುದ್ಧ ಕೊಹ್ಲಿ ಕಿಡಿ ಕಾರಿದ್ದು ಯಾಕೆ?

DAVID WARNER 12

2. ಎಲ್‍ಬಿಡಬ್ಲ್ಯುಗೆ ಸಂಬಂಧಿಸಿ ಅಂಪೈರ್‌ಗೆ ಮನವಿ ಸಲ್ಲಿಸುವುದಕ್ಕೂ ಮೊದಲು ಬ್ಯಾಟ್ಸ್‌ಮನ್‌ ನಾನು ಹೊಡೆತಕ್ಕೆ ಮುಂದಾಗಿದ್ದೇನೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಅವಕಾಶ ನೀಡಲಾಗಿದೆ.

3. ಬ್ಯಾಟ್ಸ್‌ಮನ್‌ಗಳು ರನ್ ಓಡುವ ಸಂದರ್ಭದಲ್ಲಿ ಕ್ರೀಸ್ ಮುಟ್ಟಿದ್ದಾರೋ ಇಲ್ಲವೋ ಎನ್ನುವುದನ್ನು 3ನೇ ಅಂಪೈರ್ ಖಚಿತ ಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಒಂದು ವೇಳೆ ಓಡುವ ಭರದಲ್ಲಿ ಕ್ರೀಸ್‍ಮುಟ್ಟದೇ ಇದ್ದಾಗ 3ನೇ ಅಂಪೈರ್ ಫೀಲ್ಡ್ ಅಂಪೈರ್ ಜೊತೆ ಸಂವಹನ ನಡೆಸಿ ರನ್ ಕಡಿತಗೊಳಿಬಹುದಾಗಿದೆ.

ಅಂಪೈರ್ಸ್ ಕಾಲ್ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಯಿತು. ತಂತ್ರಜ್ಞಾನದಲ್ಲಿರುವ ಕೆಲ ನ್ಯೂನತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಅಂಪೈರ್ಸ್ ಕಾಲ್ ಜಾರಿಯಲ್ಲಿದೆ. ಇದರ ಜೊತೆ ಮೈದಾನದಲ್ಲಿರುವ ಅಂಪೈರ್‌ಗಳೇ ತೀರ್ಮಾನ ತೆಗೆದುಕೊಳ್ಳುವವರಾಗಿ ಮುಂದುವರಿಯಬೇಕು. ಈ ಕಾರಣಕ್ಕೆ ಅಂಪೈರ್ಸ್ ಕಾಲ್ ನಿರ್ಧಾರವನ್ನು ಮುಂದುವರಿಸಿರುವುದಾಗಿ ಐಸಿಸಿ ಕ್ರಿಕೆಟ್ ಸಮಿತಿಯ ಮುಖ್ಯಸ್ಥ ಅನಿಲ್ ಕುಂಬ್ಳೆ ತಿಳಿಸಿದ್ದಾರೆ.

Share This Article