– ಸಚಿವನಾಗಿ ಮಾಡುವುದು ಸಿಎಂ ವಿವೇಚನೆಗೆ ಬಿಟ್ಟಿದ್ದು
ಚಿಕ್ಕೋಡಿ: ಅಂತ್ಯಕ್ರಿಯೆ ಮಾಡಲು ಜನರಿಗೆ ತೊಂದರೆ ಆಗಬಾರದು. ತೊಂದರೆ ಆದರೆ ತಹಶೀಲ್ದಾರ್ ಮನೆ ಮುಂದೆ ಶವ ತಂದು ಇಡುತ್ತೇವೆ ಎಂದು ಹುಕ್ಕೇರಿ ಶಾಸಕ ಉಮೇಶ ಕತ್ತಿ ಹುಕ್ಕೇರಿ ತಹಶೀಲ್ದಾರ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ತಾಲೂಕು ಪಂಚಾಯತಿ ಸಭಾ ಭವನದಲ್ಲಿ ಆಯೋಜಿಸಿದ್ದ ಕೊರೊನಾ ನಿಗ್ರಹ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಅಂತ್ಯಕ್ರಿಯೆ ಮಾಡಲು ಯಾವುದೇ ಸಮಸ್ಯೆ ಆಗಬಾರದು. ಸರ್ಕಾರಿ ಜಮೀನುಗಳಿದ್ದರೆ ಅವುಗಳನ್ನು ಸ್ಮಶಾನಗಳಿಗಾಗಿ ಮೀಸಲಿಡಬೇಕು ಎಂದು ಹೇಳಿದರು.
Advertisement
Advertisement
ಜಮೀನುಗಳು ಇಲ್ಲದ ಗ್ರಾಮಗಳ ಅಧಿಕಾರಿಗಳು ಜಮೀನು ಖರೀದಿ ಮಾಡಲು ಪ್ರಸ್ತಾವನೆ ಸಲ್ಲಿಸಬೇಕು. ಸ್ಮಶಾನ ಜಾಗ ಇಲ್ಲದೆ ಜನ ತೊಂದರೆ ಅನುಭವಿಸಬಾರದು ಎಂದು ಅಧಿಕಾರಿಗಳಿಗೆ ಉಮೇಶ ಕತ್ತಿ ಎಚ್ಚರಿಕೆ ನೀಡಿದರು. ಅಲ್ಲದೆ ಗ್ರಾಮಗಳನ್ನು ಬಿಟ್ಟು ತೋಟದಲ್ಲಿ ವಾಸಿಸುವ ಜನರಿಗೆ ರಸ್ತೆ ವ್ಯವಸ್ಥೆ ಹಾಗೂ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಕೊಡುವಂತೆ ಅಧಿಕಾರಿಗಳಿಗೆ ಉಮೇಶ ಕತ್ತಿ ಸೂಚಿಸಿದರು.
Advertisement
Advertisement
ಸಭೆ ಬಳಿಕ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಉಮೇಶ ಕತ್ತಿ ಅವರು, ನನ್ನ ಮಂತ್ರಿ ಮಾಡೋದು ಬಿಡೋದು ಸಿಎಂ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಸಂಪುಟ ವಿಸ್ತರಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ನನಗೆ ಸಚಿವನಾಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಚಿವನಾಗಿ ಮಾಡಿದರೆ ಸ್ವಾಗತ ಮಾಡುತ್ತೇನೆ ಸದ್ಯ ಶಾಸಕನಾಗಿ ಜನ ಸೇವೆ ಮಾಡುತ್ತಾ ಕ್ಷೇತ್ರದಲ್ಲಿದ್ದೇನೆ ಎಂದು ತಿಳಿಸಿದರು.