ಉಡುಪಿ: ಕೋಳಿಯೊಂದು ಪದೇ ಪದೇ ಪಕ್ಕದ ಮನೆಗೆ ಹೋಗುತ್ತದೆ ಎಂಬ ಕ್ಷುಲ್ಲಕ ಕಾರಣಕ್ಕೆ ಬಡಿಗೆ ತೆಗೆದುಕೊಂಡು ಬಡಿದಾಡಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿ ಜಿಲ್ಲೆ ಕಾಪು ತಾಲೂಕಿನ ಪಡುಬಿದ್ರೆ ಸಮೀಪದ ಉಳ್ಳೂರು ಇಂಥದ್ದೊಂದು ಗಲಾಟೆ ಸಾಕ್ಷಿಯಾಗಿದೆ. ರವಿರಾಜ್ ಶೆಟ್ಟಿ ಎಂಬಾತ ದೊಣ್ಣೆ ತೆಗೆದುಕೊಂಡು ವಾರಿಜಾ ಶೆಟ್ಟಿ ಮೇಲೆ ಹಲ್ಲೆ ಮಾಡಿದ್ದಾನೆ. ರವಿರಾಜ್ ಮನೆಯ ಕೋಳಿ ವಾರಿಜಾ ಅವರ ಅಂಗಳಕ್ಕೆ ಹೋಗಿದೆ. ಅದನ್ನು ವಾರಿಜ ಓಡಿಸಿದ್ದಾರೆ. ಅಲ್ಲದೆ ಕೋಳಿ ಪದೇಪದೇ ಬರುತ್ತದೆ ಎಂದು ವಾರಿಜಾ ಬೈದಿದ್ದಾರೆ. ಈ ವಿಚಾರ ರಂಪಾಟಕ್ಕೆ ಕಾರಣವಾಗಿದೆ.
ಮಾತಿಗೆ ಮಾತು ಬೆಳೆದು ಜಗಳ ಮಿತಿ ಮೀರಿ ದೊಣ್ಣೆ ತೆಗೆದುಕೊಂಡು ಮಹಿಳೆಯರ ರವಿರಾಜ್ ಹಲ್ಲೆ ಮಾಡಿದ್ದಾನೆ. ಮಹಿಳೆಯರನ್ನು ಎಳೆದಾಡಿ ಅವಾಚ್ಯವಾಗಿ ಬೈದಿದ್ದಾನೆ. ಆತನಿಗೆ ಮಹಿಳೆಯೊಬ್ಬರು ಬೆಂಬಲ ನೀಡಿದ್ದು, ವಾರಿಜಾ ಅವರ ಬೆಂಬಲಕ್ಕೆ ಬಂದ ಮಹಿಳೆಯ ಮೇಲೂ ಹಲ್ಲೆಯಾಗಿದೆ.
ಕೋಳಿ ಜಗಳದ ಹಿಂದೆ ಹಳೆಯ ವೈಷಮ್ಯ ಜಮೀನಿನ ತಗಾದೆ ಇರಬಹುದು ಎನ್ನಲಾಗಿದೆ. ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಎರಡೂ ಕುಟುಂಬವನ್ನು ಠಾಣೆಗೆ ಕರೆಸಿ ಮುಚ್ಚಳಿಕೆ ಬರೆದು, ಎಚ್ಚರಿಕೆ ಕೊಟ್ಟು ಕಳುಹಿಸಲಾಗಿದೆ.