ಹಾವೇರಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಇಂದು 58 ಜನರಿಗೆ ಸೋಂಕು ದೃಢಪಟ್ಟಿದೆ. ಅಲ್ಲದೆ ಓರ್ವ ವೃದ್ಧ ಸಾವನ್ನಪ್ಪಿದ್ದಾರೆ.
ಜಿಲ್ಲೆಯ ಖಾಸಗಿ ವೈದ್ಯ, ಗ್ರಾಮಲೆಕ್ಕಾಧಿಕಾರಿ, ಸವಣೂರು ಪುರಸಭೆಯ ಬಿಲ್ ಕಲೆಕ್ಟರ್ ಹಾಗೂ ಅಬಕಾರಿ ಇಲಾಖೆಯ ಇಬ್ಬರು ಪ್ರಥಮ ದರ್ಜೆಯ ಸಹಾಯಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ರಾಣೆಬೆನ್ನೂರು ತಾಲೂಕಿನಲ್ಲಿ 17 ಜನರಿಗೆ, ಹಾನಗಲ್ ತಾಲೂಕಿನಲ್ಲಿ 12 ಜನರಲ್ಲಿ ಕೊರೊನಾ ಪತ್ತೆಯಾಗಿದೆ.
ಹಾವೇರಿ ತಾಲೂಕಿನಲ್ಲಿ 10, ಶಿಗ್ಗಾಂವಿ ತಾಲೂಕಿನಲ್ಲಿ 4, ಹಿರೇಕೆರೂರು ತಾಲೂಕಿನಲ್ಲಿ ಒಬ್ಬರಿಗೆ, ಸವಣೂರು ಮತ್ತು ಬ್ಯಾಡಗಿ ತಾಲೂಕಿನಲ್ಲಿ ತಲಾ 7 ಜನರಿಗೆ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 660ಕ್ಕೆ ಏರಿದೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಮರಣ ಸಂಖ್ಯೆ 21ಕ್ಕೆ ಏರಿದೆ. ಹಾವೇರಿ ಬಸವೇಶ್ವರ ನಗರದ 65 ವರ್ಷದ ವ್ಯಕ್ತಿ ಅನಾರೋಗ್ಯದಿಂದ ನಿನ್ನೆ ತಮ್ಮ ಮನೆಯಲ್ಲಿ ಮೃತಪಟ್ಟಿದ್ದರು. ಕೋವಿಡ್-19 ನಿಯಮದಂತೆ ವೃದ್ಧನ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಮಿಶ್ರಾ ತಿಳಿಸಿದ್ದಾರೆ.