– ಗೇಟಿನಿಂದ ಒಳಗೆ ಬಂದು ಕಚ್ಚಿದ ಹಾವು
ಹೈದರಾಬಾದ್: ಮನೆಯ ಮುಂದೆ ವರಾಂಡಾದಲ್ಲಿ ಆಟ ಆಡುತ್ತಿದ್ದ ಮೂರು ವರ್ಷದ ಬಾಲಕನಿಗೆ ಹಾವು ಕಚ್ಚಿ ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ನಂದಿಗಾಮದಲ್ಲಿ ನಡೆದಿದೆ.
ಅಥರ್ವ್ ಪ್ರಧಾನ್ (3) ಮೃತ ಬಾಲಕ. ಮೃತ ಬಾಲಕನ ತಂದೆ ಬುದ್ಧದೇವ್ ಪ್ರಧಾನ್ ಕೆಲವು ವರ್ಷಗಳ ಹಿಂದೆ ತಮ್ಮ ಕುಟುಂಬದೊಂದಿಗೆ ಒಡಿಶಾದಿಂದ ನಂದಿಗಾಮಕ್ಕೆ ವಲಸೆ ಬಂದಿದ್ದರು. ಪೃಥ್ವಿ ಕಾಲೋನಿಯಲ್ಲಿ ವಾಸಿಸುತ್ತಿದ್ದು, ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಮೃತ ಅಥರ್ವ್ ತಮ್ಮ ಮನೆಯ ಮುಂದೆ ವರಾಂಡಾದಲ್ಲಿ ಆಡುತ್ತಿದ್ದನು. ಈ ವೇಳೆ ಹಾವು ಗೇಟ್‍ನಿಂದ ಒಳ ಬಂದು ಬಾಲಕನ ಕಾಲಿಗೆ ಕಚ್ಚಿದೆ. ತಕ್ಷಣ ಬಾಲಕ ಕೂಗಿಕೊಂಡಿದ್ದಾನೆ. ಆಗ ಮನೆಯಿಂದ ಪೋಷಕರು ಓಡಿ ಬಂದು ನೋಡಿದ್ದಾರೆ. ಈ ವೇಳೆ ಹಾವು ಗೇಟಿನಿಂದ ಪೊದೆಗಳಿಗೆ ಹೋಗುವುದನ್ನು ನೋಡಿದ್ದಾರೆ. ಇದರಿಂದ ಗಾಬರಿಗೊಂಡ ಪೋಷಕರು ತಕ್ಷಣ ಚಿಕಿತ್ಸೆಗಾಗಿ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಮಾರ್ಗ ಮಧ್ಯೆಯೇ ಅಥರ್ವ್ ಮೃತಪಟ್ಟಿದ್ದಾನೆ.
ಮರಣೋತ್ತರ ಪರೀಕ್ಷೆಯ ನಂತರ ಬಾಲಕನ ಮೃತದೇಹವನ್ನು ಕುಟುಂದವರಿಗೆ ಹಸ್ತಾಂತರಿಸಲಾಗಿದೆ. ಮಗು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.