ಬೆಂಗಳೂರು: ಸಂಪುಟ ವಿಸ್ತರಣೆಗೆ ಮುನ್ನ ಸಿಎಂ ಎಲ್ಲ ಬಿಜೆಪಿ ಶಾಸಕರು ಮತ್ತು ಸಚಿವರ ಜೊತೆ ಸಭೆ ನಡೆಸುತ್ತಿದ್ದಾರೆ. ಸಭೆಗೂ ಮುನ್ನ ಜೊತೆಯಲ್ಲಿ ಕುಳಿತಿದ್ದ ಸಚಿವರಾದ ಶ್ರೀರಾಮುಲು ಮತ್ತು ಡಿಸಿಎಂ ಲಕ್ಷ್ಮಣ ಸವದಿ ಉಂಗುರು ಚರ್ಚೆ ನಡೆಸಿದರು.
ಸಚಿವ ಶ್ರೀರಾಮುಲು ಧರಿಸಿರುವ ಹಸಿರು ಬಣ್ಣದ ಹರಳಿನ ಉಂಗುರವನ್ನ ಸವದಿ ನೋಡಿದ್ದಾರೆ. ರಾಮುಲು ಕೈಯನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ಇದು ಯಾವ ಬೆರಳಿಗೆ ಹಾಕಿಕೊಳ್ಳಬೇಕು? ಯಾವ ಹರಳಿನ ಉಂಗುರವಿದು? ರಾಶಿ, ನಕ್ಷತ್ರದ ಆಧಾರದ ಮೇಲೆ ಹರಳನ್ನು ಧರಿಸಬೇಕು. ಯಾವ ಜ್ಯೋತಿಷಿ ಬಳಿ ಮಾತುಕತೆ ನಡೆಸಿ, ಇದನ್ನು ಧರಿಸಿದ್ದೀರಿ? ಸುಖಾಸುಮ್ಮನೆ ಹರಳಿನ ಉಂಗುರ ಹಾಕಿಕೊಳ್ಳಬೇಡಿ ಎಂದು ಲಕ್ಷ್ಮಣ ಸವದಿ ಸಲಹೆ ನೀಡಿದ್ದಾರೆ.
ಸುಮಾರು ನಾಲ್ಕೈದು ನಿಮಿಷಗಳ ಕಾಲ ಇಬ್ಬರು ನಾಯಕರು ಉಂಗುರುದ ಬಗ್ಗೆ ಮಾತುಕತೆ ನಡೆಸಿದರು. ಸಚಿವರ ಸಮ್ಮುಖದಲ್ಲಿಯೇ ಸಿಎಂ ಯಡಿಯೂರಪ್ಪ ಶಾಸಕರ ಸಮಸ್ಯೆಯನ್ನ ಕೇಳುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಅಂದ್ರೆ ಸಂಪುಟ ವಿಸ್ತರಣೆ ಮತ್ತು ಬಜೆಟ್ ಮಂಡನೆ ವೇಳೆ ಶಾಸಕರಿಂದ ಬಹಿರಂಗ ಅಸಮಾಧಾನ ವ್ಯಕ್ತವಾಗುವ ಸಾಧ್ಯತೆಗಳಿವೆ. ಹಾಗಾಗಿ ಮುಖ್ಯಮಂತ್ರಿಗಳೇ ಬಿಜೆಪಿ ಶಾಸಕರ ಕೊಂದು ಕೊರತೆಗಳನ್ನು ಆಲಿಸುತ್ತಿದ್ದಾರೆ. ಅನುದಾನ ವಿಚಾರ, ಇಲಾಖಾವಾರು ಅಭಿವೃದ್ಧಿ ಕೆಲಸಗಳು, ಕಾಮಗಾರಿಗಳು, ಯೋಜನೆ ಜಾರಿ ವಿಚಾರಗಳ ಕುರಿತು ಚರ್ಚಿಸುತ್ತಿದ್ದಾರೆ.