ಮಡಿಕೇರಿ: ಮನೆ ಕೊಡಿಸುವುದಾಗಿ ಹೇಳಿ 2018ರ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಂದಲೂ ಸಾವಿರಾರು ರೂಪಾಯಿ ಲಂಚ ಪಡೆಯುತ್ತಿದ್ದ ಬಿಲ್ ಕಲೆಕ್ಟರ್ ಎಸಿಬಿ ಬಲೆಗೆ ಬಿದ್ದಿದ್ದಾನೆ. ಮಡಿಕೇರಿ ನಗರ ಸಭೆಯ ಬಿಲ್ ಕಲೆಕ್ಟರ್ ಲೋಹಿತ್ ಎಸಿಬಿ ಬಲೆಗೆ ಬಿದ್ದ ಆರೋಪಿ.
ಮಡಿಕೇರಿ ನಗರದ ಚಾಮುಂಡೇಶ್ವರಿ ನಗರ ನಿವಾಸಿ ಗಣೇಶ್ ಎಂಬವರ ಮನೆ 2018 ರ ಭೀಕರ ಭೂಕುಸಿತದಲ್ಲಿ ಬಿದ್ದು ಹೋಗಿತ್ತು. ಸಂತ್ರಸ್ತರ ಮನೆ ಫಲಾನುಭವಿಗಳ ಎರಡನೇ ಪಟ್ಟಿಯಲ್ಲಿ ಗಣೇಶ್ ಅವರ ಹೆಸರಿತ್ತು. ಆದರೆ ಕೆಲವೇ ದಿನಗಳಲ್ಲಿ ಎರಡನೇ ಪಟ್ಟಿಯಲ್ಲಿ ಅವರ ಹೆಸರು ನಾಪತ್ತೆಯಾಗಿತ್ತು. ಈ ವಿಷಯ ತಿಳಿದ ಬಿಲ್ ಕಲೆಕ್ಟರ್ ಲೋಹಿತ್, ಗಣೇಶ್ ಅವರನ್ನು ಭೇಟಿಯಾಗಿ ನಿಮಗೆ ಮನೆಯನ್ನು ಕೊಡಿಸುತ್ತೇನೆ. ಆದರೆ 50 ಸಾವಿರ ಕೊಡುವಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದನಂತೆ. ಆದರೆ ಅದಕ್ಕೆ ಗಣೇಶ್ ಒಪ್ಪದಿದ್ದಾಗ 25 ಸಾವಿರ ರೂಪಾಯಿಗೆ ಫೈನಲ್ ಮಾಡಿದ್ದನಂತೆ.
Advertisement
Advertisement
ಸಂತ್ರಸ್ತ ಗಣೇಶ್, ಆಗಲಿ ಎಂದು ಹೇಳಿ ಮನೆಯ ಬೆಲೆಬಾಳುವ ವಸ್ತುಗಳನ್ನು ಮಾರಿ ಮೊನ್ನೆಯಷ್ಟೇ 5 ಸಾವಿರ ರೂಪಾಯಿ ಅಡ್ವಾನ್ಸ್ ಎಂದು ನೀಡಿದ್ದರು. ಬಳಿಕ ಲೋಹಿತ್ ಗುರುವಾರ ಉಸ್ತುವಾರಿ ಸಚಿವರು ಜಂಬೂರಿನಲ್ಲಿ ಮನೆಗಳ ಹಕ್ಕುಪತ್ರ ನೀಡಿದ್ದಾರೆ. ನಂತರ ಶುಕ್ರವಾರ ಉಳಿದ 20 ಸಾವಿರ ಹಣವನ್ನು ಚುಪ್ತಾ ಮಾಡುವಂತೆ ಹೇಳಿದ್ದ. ಆಗಲಿ ಎಂದು ಮತ್ತೆ ಒಪ್ಪಿಕೊಂಡಿದ್ದ ಗಣೇಶ್, ನಿನ್ನೆಯಷ್ಟೇ ಜಂಬೂರಿನಲ್ಲಿ ಮನೆ ಪಡೆದುಕೊಂಡು ಇಂದು ಹಣ ನೀಡಲು ಮಡಿಕೇರಿ ನಗರ ಸಭೆ ಬಳಿಗೆ ಬಂದಿದ್ದಾರೆ.
Advertisement
Advertisement
ಈ ವೇಳೆ ಗಣೇಶ್‍ನನ್ನು ನಗರಸಭೆಯಿಂದ ಎಪಿಎಂಸಿ ಮಾರುಕಟ್ಟೆ ಬಳಿಗೆ ಬರುವಂತೆ ಲೋಹಿತ್ ಹೇಳಿದ್ದಾನೆ. 2018ರ ಭೂಕುಸಿತದಲ್ಲಿ ಮನೆ ಕಳೆದುಕೊಂಡಿದ್ದ ಗಣೇಶ್ ತಾನು ನ್ಯಾಯಯುತವಾಗಿ ಮನೆ ಪಡೆದುಕೊಳ್ಳಲು ಇಷ್ಟೊಂದು ಕಷ್ಟ ಪಡಬೇಕೆ ಎಂದು ಯೋಚಿಸಿ ಇದೆಲ್ಲವನ್ನೂ ಇಂದು ಬೆಳಗ್ಗೆಯೇ ಎಸಿಬಿ ಪೊಲೀಸರಿಗೆ ದೂರು ನೀಡಿ ಬಂದಿದ್ದಾರೆ. ದೂರು ಆಧರಿಸಿದ ಎಸಿಬಿ ಪೊಲೀಸರು ಡಿವೈಎಸ್‍ಪಿ ತಿಪ್ಪಣ್ಣನವರ್ ನೇತೃತ್ವದಲ್ಲಿ ದಾಳಿ ಮಾಡಿ ಬಿಲ್ ಕಲೆಕ್ಟರ್ ಲೋಹಿತ್ ನನ್ನು 20 ಸಾವಿರ ಹಣದ ಸಹಿತ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.