Connect with us

Corona

ಲಾಕ್‍ಡೌನ್ ಅವಧಿಯಲ್ಲಿ ಹೆಚ್ಚು ಮಾರಾಟವಾಯ್ತು ಬ್ರೆಡ್ ಜಾಮ್

Published

on

ನವದೆಹಲಿ: ಸಾಂಕ್ರಮಿಕ ರೋಗ ಕೊರೊನಾ ನಿಯಂತ್ರಣಕ್ಕಾಗಿ ಭಾರತ ಸರ್ಕಾರ ಏಪ್ರಿಲ್ ಮತ್ತು ಮೇನಲ್ಲಿ ದೇಶವನ್ನು ಸಂಪೂರ್ಣ ಲಾಕ್‍ಡೌನ್ ಮಾಡಿತ್ತು. ಲಾಕ್‍ಡೌನ್ ವೇಳೆ ಮನೆಯಲ್ಲಿದ್ದ ಜನರು ಬ್ರೆಡ್, ಚೀಸ್, ಜಾಮ್ ಮತ್ತು ಕಾಫಿ ಹೆಚ್ಚು ಖರೀದಿಸಿದ್ರೆ, ಫ್ರೂಟಿ ಕೇಕ್ ಕಡಿಮೆ ಮಾರಾಟವಾಗಿದೆ. ಆಹಾರ ಸಾಮಾಗ್ರಿಗಳ ಜೊತೆ ಹ್ಯಾಂಡ್ ಸ್ಯಾನಿಟೈಸರ್ ಮತ್ತು ಗೃಹ ಕೀಟನಾಶಕಗಳು ಸಹ ಹೆಚ್ಚು ಬಿಕರಿಯಾಗಿದೆ.

ಎರಡು ತಿಂಗಳು ಲಾಕ್‍ಡೌನ್ ಅವಧಿಯಲ್ಲಿ ಮಾರುಕಟ್ಟೆ ಅನಿರೀಕ್ಷಿತರ ಬದಲಾವಣೆಗಳಿಗೆ ಸಾಕ್ಷಿಯಾಯ್ತು. ಅಗತ್ಯ ವಸ್ತುಗಳು ಬೇಡಿಕೆ ಪ್ರಮಾಣ ದಿಢೀರ್ ಹೆಚ್ಚಳವಾಗಿತ್ತು. ಕೆಲ ಕಂಪನಿಗಳ ಕಾರ್ಯ ನಿರ್ವಾಹಕ ಅಧಿಕಾರಿಗಳು ಲಾಕ್‍ಡೌನ್ ವೇಳೆ ಮಾರುಕಟ್ಟೆಯ ಬದಲಾವಣೆಯ ಬಗ್ಗೆ ಹೇಳಿದ್ದಾರೆ.

* ಬೆಂಗಳೂರಿನ ಬ್ರಿಟೆನಿಯಾ ಕಂಪನಿ ಎರಡು ತಿಂಗಳಲ್ಲಿ ಫ್ರೂಟಿ ಕೇಕ್ ಗಳಿಗಿಂತ ಬ್ರೆಡ್, ಚೀಸ್ ಮತ್ತು ರಸ್ಕ್ ಮಾರಾಟ ಮಾಡಿದೆ. ಈ ಉತ್ಪನ್ನಗಳಿಂದ ಕಂಪನಿಗೆ ಹೆಚ್ಚು ಆದಾಯ ಲಭಿಸಿದೆ. ಸಾಮಾನ್ಯವಾಗಿ ಶಾಲೆಗೆ ಮಕ್ಕಳ ಟಿಫನ್ ಬಾಕ್ಸ್ ಗಳಲ್ಲಿ ಕೇಕ್ ಒಂದು ತಿಂಡಿಯಾಗಿರುತ್ತಿತ್ತು. ಶಾಲೆಗಳು ಬಂದ್ ಆಗಿದ್ದರಿಂದ ಸಹಜವಾಗಿ ಮಾರುಕಟ್ಟೆಯಲ್ಲಿ ಕೇಕ್ ಬೇಡಿಕೆ ಇಳಿದಿತ್ತು.

* ದೇಶದ ಅತಿ ದೊಡ್ಡ ಎಫ್‍ಎಂಸಿಜಿ ಕಂಪನಿ ಹಿಂದೂಸ್ಥಾನ ಯುನಿಲೊವರ್ (ಹೆಚ್‍ಯುಎಲ್) ನ ಕಿಸಾನ್ ಜಾಮ್ ಏಪ್ರಿಲ್-ಜೂನ್ ಅವಧಿಯಲ್ಲಿ ಅಧಿಕ ಮಾರಾಟವಾದ ಉತ್ಪನ್ನವಾಗಿದೆ. ಲೈಫ್ ಬಾಯ್ ಸ್ಯಾನಿಟೈಸರ್ ಮತ್ತು ಇತರೆ ಹ್ಯಾಂಡ್ ವಾಶ್ ಗಳನ್ನು ಜನರು ಹೆಚ್ಚು ಖರೀದಿ ಮಾಡಿದ್ದಾರೆ.

* ಮುಂಬೈನ ಮೂಲದ ಗೋದ್ರೆಜ್ ಕನ್ಸೂಮರ್ ಪ್ರೊಡೆಕ್ಟ್ ಲಿಮಿಟೆಡ್ ಮನೆಗಳಲ್ಲಿ ಬಳಸಲಾಗುವ ಕೀಟನಾಶಕಗಳ ಹೆಚ್ಚು ಮಾರಾಟದಿಂದ ಅಧಿಕ ಆದಾಯವನ್ನು ಗಳಿಸಿವೆ. ಉತ್ತರ ಭಾರತದ ನಗರಗಳಲ್ಲಿ ಹೆಚ್ಚು ಸೊಳ್ಳೆಗಳು ಕಂಡು ಬರೋದರಿಂದ ಜನರು ಮಲೇರಿಯಾ, ಡೆಂಗ್ಯೂ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಾರೆ. ಕೊರೊನಾ ಆತಂಕದಿಂದಾಗಿ ಜನರು ಸೊಳ್ಳೆ ಬತ್ತಿ ಸೇರಿದಂತೆ ಹೆಚ್ಚು ಕೀಟ ನಾಶಕಗಳನ್ನು ಖರೀದಿಸಿದ್ದಾರೆ.

* ಕೋಲ್ಕಾತ್ತಾ ಮೂಲದ ಐಟಿಸಿ ಲಿಮಿಟೆಡ್ ಏಪ್ರಿಲ್ ಮಧ್ಯದಿಂದ ಗ್ರಾಹಕರು ಆಹಾರ ಸಾಮಾಗ್ರಿಗಳ ಜೊತೆಯಲ್ಲಿ ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಿದ್ದಾರೆ. ಹಾಗಾಗಿ ಹೈಜಿನಿಕ್ ವಸ್ತುಗಳನ್ನು ಸಹ ಹೆಚ್ಚು ಮಾರಾಟ ಮಾಡಿದೆ.

* ಗುರುಗ್ರಾಮದ ಮೂಲದ ನೆಸ್ಲೆ ಲಾಕ್‍ಡೌನ್ ವೇಳೆ ನೂಡಲ್ಸ್ ಮತ್ತು ಕಾಫಿಯನ್ನು ಹೆಚ್ಚು ಮಾರಾಟ ಮಾಡಿದೆ.

ಲಾಕ್‍ಡೌನ್ ವೇಳೆ ಮಾರುಕಟ್ಟೆಯ ಬಗ್ಗೆ ಮಾಹಿತಿ ನೀಡಿರುವ ಬ್ರಿಟೆನಿಯಾ ಕಂಪನಿಯ ಎಂಡಿ ವರುಣ್ ಬೆರ್ರಿ, ಬಿಸ್ಕಟ್ ಗಳಿಗಿಂತ ಹೆಚ್ಚು ಬ್ರೆಡ್ ಮತ್ತು ರಸ್ಕ್ ಮಾರಾಟದ ವೇಗ ಹೆಚ್ಚಾಗಿತ್ತು. ಇದರ ಜೊತೆಗೆ ಡೈರಿ ಉತ್ಪನ್ನ ಚೀಸ್ ತನ್ನ ಮಾರುಕಟ್ಟೆಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿತ್ತು. ಲಾಕ್‍ಡೌನ್ ವೇಳೆ ಜನರು ಮನೆಯಲ್ಲಿರೋದರಿಂದ ಬ್ರೆಡ್ ಊಟದ ಸ್ಥಾನವನ್ನು ಪಡೆದುಕೊಂಡಿತ್ತು. ಮನೆಯಲ್ಲಿ ಸೇವಿಸುವ ಆಹಾರಗಳಲ್ಲಿ ಬ್ರೆಡ್ ಒಂದಾಗಿತ್ತು. ಇದರ ಜೊತೆಗೆ ಬಿಸ್ಕಟ್ ಗಳಿಗಿಂತ ಹೆಚ್ಚು ರಸ್ಕ್ ಬೇಡಿಕೆ ಹೊಂದಿತ್ತು ಎಂದು ಹೇಳಿದ್ದಾರೆ.

ಎರಡು ತಿಂಗಳ ಮಾರುಕಟ್ಟೆಯನ್ನು ವಿಶ್ಲೇಷನೆ ಮಾಡಿರುವ ಹೆಚ್‍ಯುಎಲ್ ಮುಖ್ಯಸ್ಥ, ಎಂಡಿ ಸಂಜೀವ್ ಮೆಹ್ತಾ, ಲಾಕ್‍ಡೌನ್ ವೇಳೆ ಜಾಮ್ ಮತ್ತು ಕ್ಯಾಚಪ್ ಅತಿ ಹೆಚ್ಚು ಮಾರಾಟವಾಗಿದ್ದು ಮಾರುಕಟ್ಟೆಯ ಸಹಜ ಪ್ರಕ್ರಿಯೆಯಾಗಿದೆ. ಕೊರೊನಾ ಲಾಕ್‍ಡೌನ್ ನಿಂದಾಗಿ ಜನರು ಮತ್ತು ಮಕ್ಕಳು ಮನೆಯಲ್ಲಿದ್ದರಿಂದ ಜಾಮ್ ಮತ್ತು ಕ್ಯಾಚಪ್ ಮಾರುಕಟ್ಟೆಯಲ್ಲಿ ಸಹಜವಾಗಿ ಹೆಚ್ಚು ವೇಗವನ್ನು ಪಡೆದುಕೊಂಡಿದ್ದವು ಎಂದು ಹೇಳುತ್ತಾರೆ.

ಹೆಚ್‍ಯುಎಲ್ ನಿವ್ವಳ ಲಾಭದ ಶೇ.7 ಲಾಭಾಂಶ ಏಪ್ರಿಲ್-ಜೂನ್ ನಲ್ಲಿ (ರೂ.1,881 ಕೋಟಿ) ಏರಿಕೆಯಾಗಿದೆ. ಇವುಗಳ ಜೊತೆಯಲ್ಲಿ ಹೈಜಿನ್ ಮತ್ತು ಪೌಷ್ಠಿಕಾಂಶ ಆಹಾರಗಳ ಬೇಡಿಕೆ ಸಹ ಏರಿಕೆಯಾಗಿತ್ತು.

ನೆಸ್ಲೆ ಇಂಡಿಯಾ ಮಿಲ್ಕ್ ಆ್ಯಂಡ್ ನ್ಯೂಟ್ರಿಷಿಯನ್ ಪ್ರೊಡೆಕ್ಟ್ ಗಳಾದ ಪಿಕಪ್, ಮ್ಯಾಗಿ ಸಹ ಶೇ.25 ರಷ್ಟು ಏರಿಕೆ ಕಂಡಿವೆ. ಈ ಉತ್ಪನ್ನಗಳ ಜೊತೆ ನೆಸ್ಲೆ ಕಾಫಿ ಸಹ ಮಾರುಕಟ್ಟೆಯು ಸಹ ಹೆಚ್ಚಾಗಿದೆ. ಈ ಕುರಿತು ಸಂದರ್ಶನದಲ್ಲಿ ಮಾತನಾಡಿರುವ ನೆಸ್ಲೆ ಎಂಡಿ ಸುರೇಶ್ ನಾರಾಯಣ್, ಗ್ರಾಮೀಣ ಭಾಗಗಳು ಸೇರಿದಂತೆ ಟೈರ್ 2, 3, 4 ನಗರಗಳಲ್ಲಿ ನಮ್ಮ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ, ಎಫ್‍ಎಂಸಿಜಿಯ ಒಟ್ಟು ವ್ಯವಹಾರಳಲ್ಲಿ ನಮ್ಮ ಉತ್ಪನ್ನಗಳದ್ದು ಶೇ.25 ರಿಂದ ಶೇ.30 ರಷ್ಟು ಪಾಲಿದೆ. ಕೊರೊನಾಗೆ ವ್ಯಾಕ್ಸಿನ್ ಸಿಗೋವರೆಗೂ ಮಾತ್ರ ಸ್ಯಾನಿಟೈಸರ್ ಮಾರುಕಟ್ಟೆಯಲ್ಲಿ ಬೇಡಿಕೆ ಹೊಂದಿರಲಿದೆ ಎಂದು ಹೇಳುತ್ತಾರೆ.

ಕೊರೊನಾ ಆತಂಕದಲ್ಲಿ ಜನರು ಮನೆಯಲ್ಲಿರೋದರಿಂದ ಐಸ್ ಕ್ರೀಂ ಉತ್ಪನ್ನಗಳ ಮೇಲೆ ಭಾರೀ ಹೊಡೆತ ಬಿದ್ದಿದೆ. ಹಾಗಾಗಿ ಮನೆಯಲ್ಲಿ ಬಳಸುವ ಆಹಾರ ಉತ್ಪನ್ನಗಳ ಮೇಲಿನ ಬೇಡಿಕೆ ಹೆಚ್ಚಾಗಿದೆ. ಲಾಕ್‍ಡೌನ್ ಪರಿಣಾಮ ಹೋಟೆಲ್ ಮತ್ತು ರೆಸ್ಟೊರೆಂಟ್ ಉದ್ಯಮಗಳು ನಷ್ಟದ ಸ್ಥಿತಿಯಲ್ಲಿವೆ. ಐಸ್‍ಕ್ರೀಂ ಸೇರಿದಂತೆ ತಂಪಾದ ಪಾನೀಯಗಳಿಗೆ ಬೇಸಿಗೆಯಲ್ಲಿ ಹೆಚ್ಚು ವ್ಯಾಪಾರವನ್ನು ಹೊಂದಿರುತ್ತವೆ, ಆದ್ರೆ ಕೊರೊನಾ ಆತಂಕದಿಂದ ಈ ಬಾರಿಯ ಬೇಸಿಗೆಯಲ್ಲಿ ತಂಪು ಪಾನೀಯಗಳ ವ್ಯಾಪಾರದ ಮೇಲೆ ಹೊಡೆತ ಬಿದ್ದಿದೆ.

Click to comment

Leave a Reply

Your email address will not be published. Required fields are marked *