Connect with us

Cinema

ಮತ್ತೆ ಮನ ಗೆದ್ದ ಸೋನು ಸೂದ್ – ಐಸಿಯುನಲ್ಲಿರುವ ನಟನಿಗೆ ಸಹಾಯ

Published

on

ಮುಂಬೈ: ಕೊರೊನಾ ವೈರಸ್ ಬಿಕ್ಕಟ್ಟಿನ ನಡುವೆ ಕಷ್ಟದಲ್ಲಿ ಸಿಲುಕಿದವರಿಗೆ ಸಹಾಯ ಮಾಡಿ ಭಾರತೀಯರ ಮನ ಗೆದ್ದಿದ್ದ ನಟ ಸೋನು ಸೂದ್ ಅವರು ಈಗ ಐಸಿಯುನಲ್ಲಿರುವ ಬಾಲಿವುಡ್‍ನ ಹಿರಿಯ ನಟರೊಬ್ಬರಿಗೆ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.

ಸೋನು ಸೂದ್ ಅವರು ಕೊರೊನಾ ವೈರಸ್ ಲಾಕ್‍ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರಿಗೆ ತಮ್ಮ ಗ್ರಾಮಕ್ಕೆ ವಾಪಸ್ ಆಗಲು ಬಸ್ ವ್ಯವಸ್ಥೆ ಮಾಡಿಕೊಟ್ಟಿದ್ದರು. ಜೊತೆಗೆ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಮುಂಬೈ ಪೊಲೀಸರಿಗೆ 25 ಸಾವಿರ ಮಾಸ್ಕ್ ವಿತರಿಸಿದ್ದರು. ಈಗ ಆಸ್ಪತ್ರೆಯಲ್ಲಿರುವ ಹಿರಿಯ ಕಲಾವಿದ ಅನುಪಮ್ ಶ್ಯಾಮ್ ಅವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಇದನ್ನು ಓದಿ: ಕೆಲಸ ಕಳ್ಕೊಂಡು ತರಕಾರಿ ಮಾರಾಟ ಮಾಡ್ತಿದ್ದ ಟೆಕ್ಕಿಗೆ ಸೋನು ಸೂದ್ ಸಹಾಯ

ಮನ್ ಕೀ ಆವಾಜ್ ಪ್ರತಿಜ್ಞಾ ಕಾರ್ಯಕ್ರಮದಲ್ಲಿ ಠಾಕೂರ್ ಸಜ್ಜನ್ ಸಿಂಗ್ ಎಂಬ ಪಾತ್ರದಲ್ಲಿ ಹೆಚ್ಚು ಹೆಸರುವಾಸಿಯಾದ ಅನುಪಮ್ ಶ್ಯಾಮ್ ಮುಂಬೈನ ಲೈಫ್‍ಲೈನ್ ಆಸ್ಪತ್ರೆಯಲ್ಲಿ ಡಯಾಲಿಸಿಸ್‍ಗೆ ಒಳಗಾಗುತ್ತಿದ್ದಾರೆ. ಅವರ ಚಿಕಿತ್ಸೆಗೆ ಹಣಕಾಸಿನ ನೆರವು ನೀಡುವಂತೆ ಸಿನಿ ಮತ್ತು ಟಿವಿ ಕಲಾವಿದರ ಸಂಘ ಜನರಿಗೆ ಮನವಿ ಮಾಡಿತ್ತು. ಈಗ ಈ ವಿಚಾರವಾಗಿ ಟ್ವೀಟ್ ಮಾಡಿರುವ ಸೋನು ಸೂದ್ ಅನುಪಮ್ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

ಹಲವಾರು ಟಿವಿ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳಲ್ಲಿ ಅಭಿನಯಿಸಿದ ಅನುಪಮ್ ಶ್ಯಾಮ್ ಅವರನ್ನು ಈ ಹಿಂದೆ ಮುಂಬೈನ ಅಪೆಕ್ಸ್ ಕಿಡ್ನಿ ಕೇರ್ ಗೆ ಸೇರಿಸಲಾಗಿತ್ತು. ಆದರೆ ಡಯಾಲಿಸಿಸ್ ಸಮಯದಲ್ಲಿ ಅವರು ಪ್ರಜ್ಞೆ ತಪ್ಪಿದ ನಂತರ ಅವರನ್ನು ಲೈಫ್‍ಲೈನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅವರ ಸಹೋದರ ಅನುರಾಗ್ ತಿಳಿಸಿದ್ದಾರೆ. ಚಿಕಿತ್ಸೆಗೆ ಆರ್ಥಿಕವಾಗಿ ಸಹಾಯ ಮಾಡುವಂತೆ ನಟನ ಕುಟುಂಬವು ಮನವಿ ಮಾಡಿಕೊಂಡಿತ್ತು. ಆಗ ನಟ ಮನೋಜ್ ಬಾಜಪೇಯಿ ಅವರು ಸಹಾಯ ಮಾಡುವುದಾಗಿ ಮುಂದೆ ಬಂದಿದ್ದರು.

ನಾವು ಅವರನ್ನು ಅಪೆಕ್ಸ್ ಕಿಡ್ನಿ ಕೇರ್ ಆಸ್ಪತ್ರೆಯಿಂದ ತಕ್ಷಣ ಲೈಫ್‍ಲೈನ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವೆ. ಅನುಪಮ್ ಶ್ಯಾಮ್ ಪ್ರಸ್ತುತ ಐಸಿಯುನಲ್ಲಿದ್ದಾರೆ. ಆರ್ಥಿಕ ಬಿಕ್ಕಟ್ಟಿನಿಂದಾಗಿ ಅವರಿಗೆ ಉತ್ತಮ ಚಿಕಿತ್ಸೆ ಕೊಡಿಸಲು ಸಾಧ್ಯವಾಗಲಿಲ್ಲ. ಅವರ ಆರೋಗ್ಯದ ಬಗ್ಗೆ ನಾನು ಅವರ ಸ್ನೇಹಿತರಿಗೆ ತಿಳಿಸಿದ್ದೇನೆ ಮತ್ತು ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದ್ದೇನೆ. ಮನೋಜ್ ಬಾಜಪೇಯಿ ಅವರು ಕರೆ ಮಾಡಿ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ ಎಂದು ಅನುರಾಗ್ ಅವರು ಮಂಗಳವಾರ ಮಾಹಿತಿ ನೀಡಿದ್ದರು.

ಇತ್ತ ಸೋನು ಸೂದ್ ಅವರು ಹಲವಾರು ಜನರಿಗೆ ಸಹಾಯ ಮಾಡಿಕೊಂಡು ಬರುತ್ತಿದ್ದಾರೆ. ಇತ್ತೀಚೆಗೆ ಕೊರೊನಾ ಲಾಕ್‍ಡೌನ್‍ನಿಂದ ಕೆಲಸ ಕಳೆದುಕೊಂಡು ತರಕಾರಿ ವ್ಯಾಪಾರ ಮಾಡುತ್ತಿದ್ದ ಹೈದರಾಬಾದ ಟೆಕ್ಕಿಯೊಬ್ಬರಿಗೆ ಕರೆ ಮಾಡಿ ಸಹಾಯ ಮಾಡುವುದಾಗಿ ತಿಳಿಸಿದ್ದರು. ಜೊತೆಗೆ ಉಳುಮೆ ಮಾಡಲು ಎತ್ತುಗಳಿಲ್ಲದೇ ತನ್ನ ಹೆಣ್ಣು ಮಕ್ಕಳ ಸಹಾಯದಿಂದ ಉಳುಮೆ ಮಾಡುತ್ತಿದ್ದ ಬಡ ರೈತ ಕುಟುಂಬಕ್ಕೆ ಟ್ರ್ಯಾಕ್ಟರ್ ಕೊಡಿಸಿ ಮಾನವೀಯತೆ ಮೆರೆದಿದ್ದರು. ಈಗ ಹಿರಿಯ ನಟ ಸಹಾಯಕ್ಕೆ ಬಂದಿದ್ದಾರೆ.

Click to comment

Leave a Reply

Your email address will not be published. Required fields are marked *