Connect with us

Bengaluru City

ಪ್ರಶಾಂತ್ ನೀಲ್ ಹುಟ್ಟುಹಬ್ಬಕ್ಕೆ ಮೈತ್ರಿ ಮೂವೀಸ್‍ನಿಂದ ಸರ್ಪ್ರೈಸ್

Published

on

ಬೆಂಗಳೂರು: ಚಂದನವನದಲ್ಲಿ ಹೊಸ ಇತಿಹಾಸ ಸೃಷ್ಟಿಸುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡು ಸಾಧನೆಗೈದ ಅಪರೂಪದ ನಿರ್ದೇಶಕ, ಕೆಜಿಎಫ್ ಸಿನಿಮಾ ಸೃಷ್ಟಿಕರ್ತ ಪ್ರಶಾಂತ್ ನೀಲ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆ ಅಭಿಮಾನಿಗಳು ಸಾಗರೋಪಾದಿಯಲ್ಲಿ ಶುಭ ಕೋರುತ್ತಿದ್ದಾರೆ.

ಪ್ರಶಾಂತ್ ನೀಲ್ ಅವರು 40ನೇ ವಸಂತಕ್ಕೆ ಕಾಲಿಟ್ಟಿದ್ದು, ಲಾಕ್‍ಡೌನ್ ಹಿನ್ನೆಲೆ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿನ ಸಂಭ್ರಮಕ್ಕೆ ಮಾತ್ರ ಮಿತಿ ಇಲ್ಲದಂತಾಗಿದ್ದು, ಟ್ವಿಟ್ಟರ್‍ನಲ್ಲಿ ಸಾವಿರಾರು ಜನ ಶುಭ ಕೋರುತ್ತಿದ್ದಾರೆ. ಈ ಮೂಲಕ ಹ್ಯಾಷ್ ಟ್ಯಾಗ್‍ನೊಂದಿಗೆ ಹ್ಯಾಪಿ ಬರ್ತ್‍ಡೇ ಪ್ರಶಾಂತ್ ನೀಲ್ ಎಂಬುದು ಟ್ರೆಂಡಿಂಗ್‍ನಲ್ಲಿದೆ. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬದ ರೀತಿಯಲ್ಲೇ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.

ಮಾಡಿದ್ದು ಕೇವಲ ಮೂರೇ ಚಿತ್ರಗಳಾದರೂ ತಮ್ಮ ಖದರ್ ಚಿತ್ರಗಳ ಮೂಲಕವೇ ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಇದೀಗ ಟಾಲಿವುಡ್‍ಗೆ ಕಾಲಿಡಲು ಸಹ ಸಿದ್ಧತೆ ನಡೆಸಿದ್ದಾರೆ. ಉಗ್ರಂ ಸಿನಿಮಾ ಮೂಲಕ ಶ್ರೀಮುರಳಿಯವರಿಗೆ ದೊಡ್ಡ ಬ್ರೇಕ್ ನೀಡಿದ್ದರು. ಇದಾದ ಬಳಿಕ ರಾಕಿಂಗ್ ಸ್ಟಾರ್ ಯಶ್ ಜೊತೆ ಸೇರಿ ಕೆಜಿಎಫ್ ಹಾಗೂ ಕೆಜಿಎಫ್-2 ಸಿನಿಮಾಗಳ ಮೂಲಕ ತಮ್ಮದೇಯಾದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ.

ಪ್ರಶಾಂತ್ ನೀಲ್ ಅಸಿಸ್ಟೆಂಟ್, ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದವರಲ್ಲ. ಯಾವುದೇ ಸಂಸ್ಥೆಯಲ್ಲಿ ತರಬೇತಿ ಪಡೆದವರೂ ಅಲ್ಲ. ಅಸಲಿಗೆ ಸಿನಿಮಾ ಬಗ್ಗೆ ಅಷ್ಟೇನು ಗೊತ್ತಿರಲಿಲ್ಲ. ಶ್ರೀ ಮುರಳಿ ನಟನೆಯ ಉಗ್ರಂ ಸಿನಿಮಾ ಸೆಟ್‍ಗೆ ಆಗಾಗ ಹೋಗಿ ಬಂದಿದ್ದರಷ್ಟೆ. ಉಗ್ರಂ ಸಿನಿಮಾ ಮಾಡುವಾಗ ಸಿನಿಮಾ ವ್ಯಾಕರಣ ಗೊತ್ತಿರಲಿಲ್ಲ. ಚಿತ್ರ ಮುಗಿಸುವ ಹೊತ್ತಿಗೆ ನಿರ್ದೇಶನ, ಸಿನಿಮಾ ತಯಾರಿ, ಇಡೀ ಸಿನಿಮಾ ಮಾಧ್ಯಮವನ್ನು ಪ್ರಯೋಗಾತ್ಮಕವಾಗಿ ಕಲಿತರು.

ನಟಿಸುವುದು ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುವುದೆಂದರೆ ಪ್ರಶಾಂತ್ ನೀಲ್ ಅವರಿಗೆ ಭಯ. ಅವರ ಕೆಲಸವೇನಿದ್ದರೂ ಕ್ಯಾಮೆರಾ ಹಿಂದೆ. ಉಗ್ರಂ ಬಳಿಕ ಕೆಜಿಎಫ್ ಚಿತ್ರಕ್ಕೆ ಕೈ ಹಾಕಿದರು. ನಂತರ ಕೆಜಿಎಫ್ ಚಿತ್ರ ಬಹುಭಾಷೆಗಳಲ್ಲಿ ತಯಾರಾಗಲಿದೆಯೇ ಎಂದು ಪದೇ ಪದೆ ನಟ ಯಶ್ ಅವರನ್ನು ಕೇಳುತ್ತಿದ್ದರಂತೆ. ಆದರೆ ಯಶ್ ಅವರಿಗೆ ಇವರ ಮೇಲೆ ನಂಬಿಕೆ ಇತ್ತಂತೆ. ಹೀಗೆ ಸೂಪರ್ ಹಿಟ್ ಚಿತ್ರಗಳನ್ನು ನೀಡುವ ಮೂಲಕ ತೆಲುಗು, ತಮಿಳು ಮಲಯಾಳಂ, ಹಿಂದಿ ಪ್ರೇಕ್ಷಕರನ್ನು ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.

ಈಗಲೂ ಹಲವು ದೊಡ್ಡ ನಟರು ಪ್ರಶಾಂತ್ ನೀಲ್ ಅವರ ಕಾಲ್ ಶೀಟ್‍ಗಾಗಿ ಕಾತರದಿಂದ ಕಾಯುತ್ತಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ಆ ಮಟ್ಟಕ್ಕೆ ಪ್ರಶಾಂತ್ ನೀಲ್ ತಮ್ಮ ಸಿನಿಮಾಗಳ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ. ಇದೀಗ ತೆಲುಗಿನ ಜೂನಿಯರ್ ಎನ್‍ಟಿಆರ್ ಜೊತೆ ಸಿನಿಮಾ ಮಾಡುವ ಕುರಿತು ಅವರೇ ಸುಳಿವು ನೀಡಿದ್ದರು. ಈ ಕುರಿತು ಸಹ ನಿರೀಕ್ಷೆ ಹೆಚ್ಚಿದೆ.

ಸಿನಿಮಾ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಜೂ.ಎನ್‍ಟಿಆರ್ ಹುಟ್ಟಹಬ್ಬದಂದು ಪ್ರಶಾಂತ್ ನೀಲ್ ಟ್ವೀಟ್ ಮಾಡಿ ಈ ಕುರಿತು ಖಚಿತಪಡಿಸಿದ್ದರು. ಇದೀಗ ತೆಲುಗು ಸಿನಿಮಾ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಸಹ ಪ್ರಶಾಂತ್ ನೀಲ್ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿ ಟ್ವೀಟ್ ಮಾಡಿದೆ. ಇದರ ಜೊತೆಗೆ ರೇಡಿಯೇಷನ್ ಶೂಟ್‍ನಲ್ಲಿ ಶೀಘ್ರವೇ ಭೇಟಿಯಾಗೋಣ ಎಂದು ತಿಳಿಸಿದೆ. ವಿಶೇಷವೆಂದರೆ ಪ್ರಶಾಂತ್ ನೀಲ್ ಜೂ.ಎನ್‍ಟಿಆರ್ ಅವರಿಗೆ ಬರ್ತ್ ಡೇ ವಿಶ್ ತಿಳಿಸಿದಾಗಲೂ ರೇಡಿಯೇಷನ್ ಶೂಟ್ ಎಂದು ಹೇಳಿದ್ದರು. ಇದೀಗ ಮೈತ್ರಿ ಸಂಸ್ಥೆ ಸಹ ಅದೇ ರೀತಿ ಹೇಳಿದೆ. ಈ ಮೂಲಕ ಮತ್ತೊಂದು ಅದ್ಭುತ ಸಿನಿಮಾ ತಯಾರಾಗಲಿದೆ ಎಂಬ ಸುಳಿವು ನೀಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಕೆಜಿಎಫ್ ಅಭಿಮಾನಿಗಳು ವೇಟಿಂಗ್ ಫಾರ್ ಕೆಜಿಎಫ್-2 ಎಂದು ಬರೆದುಕೊಂಡರೆ, ಜೂನಿಯರ್ ಎನ್‍ಟಿಆರ್ ಅಭಿಮಾನಿಗಳು ವೇಟಿಂಗ್ ಫಾರ್ ಎನ್‍ಟಿಆರ್31 ಎಂದು ಬರೆದುಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *