Connect with us

Latest

ದೆಹಲಿ ಬಂಗಲೆಯನ್ನು ತೊರೆದ ಪ್ರಿಯಾಂಕಾ ಗಾಂಧಿ

Published

on

ನವದೆಹಲಿ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವಧಿಗೂ ಮುನ್ನವೇ ದೆಹಲಿಯ ಲೋಧಿ ರಸ್ತೆಯಲ್ಲಿರುವ ನಿವಾಸವನ್ನು ತೊರೆದಿದ್ದಾರೆ.

ಕೇಂದ್ರ ಸರ್ಕಾರ ಆಗಸ್ಟ್‌ 1ರ ಒಳಗಡೆ ನಿವಾಸವನ್ನು ಖಾಲಿ ಮಾಡಬೇಕೆಂದು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ದೆಹಲಿ ನಿವಾಸವನ್ನು ತೊರೆದು ಗುರುಗ್ರಾಮದ ಅರಾಲಿಯಾ ವಸತಿ ಸಂಕೀರ್ಣದಲ್ಲಿರುವ ನಿವಾಸಕ್ಕೆ ಶಿಫ್ಟ್‌ ಆಗಿದ್ದಾರೆ ಎಂದು ವರದಿಯಾಗಿದೆ.

ಸೆಕ್ಟರ್‌ 43ರ ಗಾಲ್ಫ್‌ ಕೋರ್ಸ್‌ ರಸ್ತೆಯ ಬಳಿ ಇರುವ ಈ ನಿವಾಸ ಪತಿ ರಾಬರ್ಟ್‌ ವಾದ್ರಾ ಹೆಸರಿನಲ್ಲಿದೆ. ಗುರುಗ್ರಾಮದ ಪೊಲೀಸರು ಜುಲೈ 25 ರಂದು ಪ್ರಿಯಾಂಕಾ ಗಾಂಧಿಯವರಿಗೆ ಭದ್ರತೆ ನೀಡಿದ್ದರು. ಸದ್ಯ ಪ್ರಿಯಾಂಕ ಗಾಂಧಿ ಅವರಿಗೆ ಝಡ್‌ ಪ್ಲಸ್‌ ಭದ್ರತೆ ನೀಡಲಾಗುತ್ತಿದೆ.

ಈ ಮೊದಲು ಪ್ರಿಯಾಂಕಾ ಗಾಂಧಿಯವರು ಲಕ್ನೋದಲ್ಲಿ ಮನೆ ಮಾಡುತ್ತಾರೆ ಎಂದು ವರದಿಯಾಗಿತ್ತು. ಉತ್ತರ ಪ್ರದೇಶದ ಚುನಾವಣೆಯ ಹಿನ್ನೆಲೆಯಲ್ಲಿ ಲಕ್ನೋಗೆ ಶಿಫ್ಟ್‌ ಆಗಲಿದ್ದಾರೆ ಎಂದು ಹೇಳಲಾಗುತ್ತಿತ್ತು.

ಸರ್ಕಾರಿ ಬಂಗಲೆ ತೆರವು ಮಾಡುವ ಮುನ್ನ ಅದೇ ಬಂಗಲೆಗೆ ವಾಸ್ತವ್ಯ ಹೂಡಲು ಬರುವ ಬಿಜೆಪಿ ವಕ್ತಾರ, ರಾಜ್ಯಸಭಾ ಸದಸ್ಯ ಅನಿಲ್ ಬಲೂನಿ ಅವರನ್ನು ಚಹಾ ಕೂಟಕ್ಕೆ ಪ್ರಿಯಾಂಕ ಗಾಂಧಿ ಆಹ್ವಾನಿಸಿದ್ದರು. ಆದರೆ ಚಹಾ ಕೂಟವನ್ನು ತಿರಸ್ಕರಿಸಿದ್ದ ಅನಿಲ್ ಬಲೂನಿ, ಪ್ರಿಯಾಂಕ ಗಾಂಧಿ ಅವರನ್ನೇ ಭೋಜನ ಕೂಟಕ್ಕೆ ಆಹ್ವಾನಿಸಿದ್ದರು. ಈ ಬಗ್ಗೆ ಪ್ರಿಯಾಂಕ ಗಾಂಧಿಗೆ ಆಹ್ವಾನ ನೀಡಿದ್ದ ಬಲೂನಿ, ನೀವು ಆಹ್ವಾನಿಸಿದ ಚಹಾ ಕೂಟಕ್ಕೆ ನನಗೆ ಬರಲಾಗಲಿಲ್ಲ, ಹೀಗಾಗಿ ನೀವು ಭೋಜನ ಕೂಟಕ್ಕೆ ಬನ್ನಿ. ನಿಮಗಾಗಿ ಉತ್ತರಾಖಂಡ‌ ಶೈಲಿಯ ಎಲ್ಲಾ ಸಾಂಪ್ರದಾಯಿಕ ಆಹಾರದ ವ್ಯವಸ್ಥೆ ಮಾಡಿಸುತ್ತೇನೆ ಎಂದು ಹೇಳಿದ್ದರು.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪ್ರಿಯಾಂಕಾ ಗಾಂಧಿ ಅವರಿಗೆ ಜುಲೈ 1ರಂದು ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಿತ್ತು. ಎಸ್‍ಪಿಜಿ ಭದ್ರತೆ ಇಲ್ಲದ ಕಾರಣ ಮನೆ ಖಾಲಿ ಮಾಡುವಂತೆ ಪತ್ರದಲ್ಲಿ ಸೂಚಿಸಿತ್ತು. ಆಗಸ್ಟ್ 1ರ ವೇಳೆಗೆ ಬಂಗಲೆಯನ್ನು ಖಾಲಿ ಮಾಡಬೇಕು. ಅದಕ್ಕೂ ಮುನ್ನವೇ ನಿವಾಸಕ್ಕೆ ಸಂಬಂಧಿಸಿದ ಬಿಲ್‍ಗಳನ್ನು ಪಾವತಿ ಮಾಡಲು ಸೂಚಿಸಿತ್ತು.

2020ರ ಜೂನ್ 30ರ ವೇಳೆಗೆ ಪ್ರಿಯಾಂಕಾ ಗಾಂಧಿ 3,46,677 ರೂ. ಮೊತ್ತದ ಬಾಕಿ ಬಿಲ್‍ಗಳನ್ನು ಪಾವತಿ ಮಾಡಬೇಕಿತ್ತು. ಸೂಚಿಸಿದ ಅವಧಿ ವೇಳೆಗೆ ನಿವಾಸ ಖಾಲಿ ಮಾಡದಿದ್ದರೆ ದಂಡ ಪಾವತಿ ಮಾಡಬೇಕಾಗುತ್ತದೆ ಎಂದು ಸಚಿವಾಲಯ ಸ್ಪಷ್ಟಪಡಿಸಿತ್ತು.

1997ರಲ್ಲಿ ಪ್ರಿಯಾಂಕಾ ಗಾಂಧಿ ಅವರಿಗೆ ಈ ನಿವಾಸವನ್ನು ಹಂಚಿಕೆ ಮಾಡಲಾಗಿತ್ತು. ಕಾಂಗ್ರೆಸ್ ಮುಖಂಡರ ಆಪ್ತ ಮೂಲಗಳ ಮಾಹಿತಿ ಅನ್ವಯ ಪ್ರಿಯಾಂಕಾ ಗಾಂಧಿ ಮೊದಲು ಸರ್ಕಾರಿ ಬಂಗಲೆಯನ್ನು ತೆಗೆದುಕೊಳ್ಳಲು ಹಿಂಜರಿದ್ದರು. ಆದರೆ ಎಸ್‍ಪಿಜಿ ಭದ್ರತೆಯ ಕಾರಣ ಅವರಿಗೆ ನಿವಾಸ ಹಂಚಿಕೆ ಮಾಡಲಾಗಿತ್ತು.

ಮದುವೆಯಾದ ಬಳಿಕವೂ ಅವರನ್ನು ಭದ್ರತೆಯ ದೃಷ್ಟಿಯಿಂದ ದಕ್ಷಿಣ ದೆಹಲಿಯಲ್ಲಿರುವ ಸೈನಿಕ್ ಫಾರ್ಮ್ ಹೌಸ್‍ಗೆ ತೆರಳಲು ಅವಕಾಶ ನೀಡಿರಲಿಲ್ಲ. 1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆ ಬಳಿಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ಎಲೈಟ್ ಎಸ್‍ಪಿಜಿ ಭದ್ರತೆ ನೀಡಲಾಗಿತ್ತು. ಕಳೆದ ವರ್ಷ ನವೆಂಬರ್ ನಲ್ಲಿ ಕೇಂದ್ರ ಸರ್ಕಾರ ಎಸ್‍ಪಿಜಿ ಭದ್ರತೆಯನ್ನು ವಾಪಸ್ ಪಡೆದಿತ್ತು. ಈ ವೇಳೆ ಕಾಂಗ್ರೆಸ್ ನಾಯಕರು ಕೇಂದ್ರದ ಕ್ರಮದ ಕುರಿತು ವ್ಯಾಪಕ ಟೀಕೆ ಮಾಡಿದ್ದರು.

Click to comment

Leave a Reply

Your email address will not be published. Required fields are marked *