ಭುವನೇಶ್ವರ: ಇನ್ನೇನೋ ಕೆಲವೇ ಕ್ಷಣಗಳಲ್ಲಿ ವರ ಆಕೆಗೆ ತಾಳಿ ಕಟ್ಟುತ್ತಿದ್ದ. ಆದರೆ ಈ ಮಧ್ಯೆ ವಧು ಮದುವೆ ಮನೆಯಿಂದಲೇ ಪರಾರಿಯಾಗಿದ್ದಾಳೆ. ಹೀಗಾಗಿ ವರ ಆಕೆಯ ತಂಗಿಯನ್ನು ಮದುವೆಯಾಗಿ ಫಜೀತಿಗೆ ಸಿಲುಕಿದ ಘಟನೆಯೊಂದು ಒಡಿಶಾದಲ್ಲಿ ನಡೆದಿದೆ.
ಕಲಹಂಡಿ ಜಿಲ್ಲೆಯ ಮಾಳ್ವಾಡ ಗ್ರಾಮದ ವಧು ತನ್ನ ಪ್ರಿಯಕರನೊಂದಿಗೆ ಕಾಲ್ಕಿತ್ತಿದ್ದಾಳೆ. ಹೀಗಾಗಿ ಮದುವೆ ನಿಲ್ಲಿಸಲು ಒಪ್ಪದ ಎರಡೂ ಕಡೆಯ ಸಂಬಂಧಿಕರು ವಧುವಿನ ತಂಗಿಯನ್ನು ವರನಿಗೆ ಮದುವೆ ಮಾಡಿಕೊಡಲು ನಿಶ್ಚಯಿಸಿದ್ದಾರೆ. ಅಂತೆಯೇ 15 ವರ್ಷದ ಬಾಲಕಿಯನ್ನು 26 ವರ್ಷದ ವರನ ಜೊತೆ ಮದುವೆ ಮಾಡಿದ್ದಾರೆ.
Advertisement
Advertisement
ಇತ್ತ ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಅಧಿಕಾರಿಗಳು ಮದುವೆ ಮನೆಗೆ ದೌಡಾಯಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ಬಾಲ್ಯವಿವಾಹ ನಿಷೇಧವಿರುವುದರಿಂದ 10ನೇ ತರಗತಿಯಲ್ಲಿ ಓದುತ್ತಿರುವ ಅಪ್ರಾಪ್ತೆಯನ್ನು ರಕ್ಷಿಸಲಾಗಿದೆ ಎಂದು ಕಲಹಂಡಿ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಬಾಲಕಿಯ ರಕ್ಷಣೆ ಮಾಡಿದ ಬಳಿಕ ಆಕೆಯ ಹೆತ್ತವರಿಗೆ ಹಾಗೂ ವರನ ಕುಟುಂಬದವರಿಗೆ ಬಾಲ್ಯವಿವಾಹ ಕಾನೂನು ಬಾಹಿರ ಎಂಬುದರ ಬಗ್ಗೆ ತಿಳಿಹೇಳಲಾಗಿದೆ. ಅಲ್ಲದೆ ಬಾಲಕಿಗೆ ಮದುವೆಯಾಗುವ ವಯಸ್ಸಲ್ಲ ಎಂದು ಬುದ್ಧಿ ಹೇಳಿದ್ದಾರೆ.
Advertisement
ಬಾಲಕಿ ಕೂಡ ಪೋಷಕರ ಮನೆಯಲ್ಲಿಯೇ ಇದ್ದುಕೊಂಡು ಓದು ಮುಗಿಸುವುದಾಗಿ ತಿಳಿಸಿದ್ದಾಳೆ. ಬಾಲಕಿಯ ಮನೆಯವರು ಕೂಡ 18 ವರ್ಷ ತುಂಬಿದ ಬಳಿಕ ಮದುವೆ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿ ವಿವರಿಸಿದ್ದಾರೆ.