ಮಡಿಕೇರಿ: ಕೊಯ್ಲು ಮಾಡಿ ಕಣದಲ್ಲಿ ಒಣಹಾಕಿದ್ದ ಕಾಫಿಯ ರಾತ್ರಿ ಕಾವಲು ಕಾಯುತ್ತಿದ್ದ ಕಾರ್ಮಿಕನ ಮೇಲೆ ಕಾಡಾನೆ ದಾಳಿ ಮಾಡಿದ್ದು, ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
Advertisement
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಬಿಬಿಟಿಸಿ ಎಸ್ಟೇಟ್ ನಲ್ಲಿ ದುರ್ಘಟನೆ ನಡೆದಿದೆ. ಆನಂದಪುರದ ನಿವಾಸಿ ಸಂದೀಪ್ (22) ಮೃತಪಟ್ಟ ಯುವಕ. ಎಂದಿನಂತೆ ರಾತ್ರಿಯೂ ಕಾಫಿ ಕಣದಲ್ಲಿ ಕಾವಲು ಕಾಯುತ್ತಿದ್ದ ಸಂದೀಪನ ಮೇಲೆ ತಡರಾತ್ರಿ ಕಾಡಾನೆ ದಾಳಿ ಮಾಡಿ ತಲೆ ಮೇಲೆ ಕಾಲಿಟ್ಟಿದೆ. ಸಂದೀಪನ ತಲೆ ಛಿದ್ರವಾಗಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
Advertisement
ಜೊತೆಯಲ್ಲಿದ್ದ ರಾಜು ಎಂಬ ಮತ್ತೊಬ್ಬ ಕಾರ್ಮಿಕ ಅದೃಷ್ಟವಷಾತ್ ಸ್ವಲ್ಪದರಲ್ಲಿಯೇ ಕಾಡಾನೆ ದಾಳಿಯಿಂದ ಬಚಾವ್ ಆಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆ ತಿಳಿಯುತ್ತಿದ್ದಂತೆ ಕಾರ್ಮಿಕ ಮುಖಂಡರು, ತೋಟದ ನೂರಾರು ಕಾರ್ಮಿಕರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಅಲ್ಲದೆ ಮೃತ ಸಂದೀಪನ ಕುಟುಂಬಕ್ಕೆ ಸೂಕ್ತ ಪರಿಹಾರ ಸಿಗುವವರೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ತೆಗೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು.
Advertisement
Advertisement
ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಿಐಟಿಯು ಕಾರ್ಮಿಕ ಸಂಘಟನೆ ಮುಖಂಡ ಮಹದೇವ ಸೇರಿದಂತೆ ಹಲವು ಕಾರ್ಮಿಕರು ತರಾಟೆಗೆ ತೆಗೆದುಕೊಂಡಿದ್ದರು. ಎರಡು ಲಕ್ಷ ರೂ. ಪರಿಹಾರ ಕೊಡುವುದಾಗಿ ತೋಟದ ಸಂಸ್ಥೆಯ ಅಧಿಕಾರಿಗಳು ಒಪ್ಪಿದ್ದಾರೆ. ಆದರೆ ಕನಿಷ್ಠ ಹತ್ತು ಲಕ್ಷ ಪರಿಹಾರ ಸಿಗುವವರೆಗೆ ಮೃತದೇಹವನ್ನು ತೆಗೆಯಲು ಬಿಡುವುದಿಲ್ಲ. ಅರಣ್ಯ ಇಲಾಖೆ ಮತ್ತು ಬಿಬಿಟಿಸಿ ಸಂಸ್ಥೆ ಕಚೇರಿ ಎದುರು ಪ್ರತಿಭಟನೆ ಮಾಡುವುದಾಗಿ ಸಿಐಟಿಯು ಮುಖಂಡರು ನಿರ್ಧರಿಸಿದ್ದಾರೆ. ಬಳಿಕ ಕಾಫಿ ತೋಟದ ಸಂಸ್ಥೆಯಿಂದ 3 ಲಕ್ಷ ಪರಿಹಾರ ಹಾಗೂ ಅರಣ್ಯ ಇಲಾಖೆಯಿಂದ 7.50 ಲಕ್ಷ ಪರಿಹಾರವನ್ನು ಮೃತನ ಕುಟುಂಬಕ್ಕೆ ನೀಡಲಾಯಿತು. ಮಗನ ಸಾವಿನ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಂದೀಪ್ ಕುಟುಂಬದ ರೋಧನ ಮುಗಿಲು ಮುಟ್ಟಿತ್ತು.