– ವಶದಲ್ಲಿದ್ದ ಡ್ರಗ್ಸ್ ಕೇಸ್ ಆರೋಪಿ ಸಾವು
– ಪೊಲೀಸರ ಮೇಲೆ ಹಲ್ಲೆಗೆ ಯತ್ನ
ಬೆಂಗಳೂರು: ಆಫ್ರಿಕಾ ದೇಶದ ಪ್ರಜೆ ಸಾವನ್ನಪ್ಪಿದ್ದಕ್ಕೆ ಠಾಣೆಗೆ ಮುತ್ತಿಗೆ ಹಾಕಿ ಗುಂಡಾವರ್ತನೆ ತೋರಿದ್ದಕ್ಕೆ ಆಫ್ರಿಕಾ ಪ್ರಜೆಗಳ ವಿರುದ್ಧ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಜಾನ್ ಅಲಿಯಾಸ್ ಜೋಯಲ್ ಶಿಂದನಿ ಮಾಲು(27) ಸಾವನ್ನಪ್ಪಿದ ಆರೋಪಿ. ಈತ ಡ್ರಗ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿ ಜೆ.ಸಿ.ನಗರ ಪೊಲೀಸರ ವಶದಲ್ಲಿದ್ದನು. ಆರೋಗ್ಯದಲ್ಲಿ ಏರುಪೇರಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರ ವಶದಲ್ಲಿದ್ದ ಈತನನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ.
Advertisement
Advertisement
ವಶದಲ್ಲಿದ್ದ ಜಾನ್ ಸಾವನ್ನಪ್ಪಿರುವ ಹಿನ್ನೆಲೆ ಜೆಸಿ ನಗರ ಪೊಲೀಸ್ ಠಾಣೆಗೆ ವಿದೇಶಿ ಪ್ರಜೆಗಳು ಇಂದು ಸಂಜೆ ಮುತ್ತಿಗೆ ಹಾಕಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದಾಂಧಲೆಗೆ ಯತ್ನಿಸಿದ್ದಾರೆ.
Advertisement
ಪೊಲೀಸರು ಹಲ್ಲೆಗೈದು ಕೊಲೆ ಮಾಡಿದ್ದಾರೆ ಎಂದು ನೈಜಿರೀಯಾ ಪ್ರಜೆಗಳು ಪೊಲೀಸರ ಮೇಲೆ ಕೊಲೆ ಆರೋಪ ಮಾಡಿದ್ದಾರೆ. ಪೊಲೀಸರನ್ನ ಆಫ್ರಿಕನ್ ಪ್ರಜೆಗಳು ಅವಾಚ್ಯವಾಗಿ ಬೈದು, ಕೆಟ್ಟದಾಗಿ ಪೊಲೀಸರನ್ನು ಗುರಿಯಾಗಿಸಿ ಸನ್ನೆ, ಬೆಂಕಿ ಕಡ್ಡಿ ಗೀರಿ ಗುಂಡಾವರ್ತನೆ ತೋರಿದ್ದಾರೆ.
Advertisement
ಪೊಲೀಸರು ಹೇಳಿದ್ದೇನು?
ರಾತ್ರಿ 10:30 ಕ್ಕೆ ಡ್ರಗ್ ಪೆಡ್ಲರ್ ಬಗ್ಗೆ ಮಾಹಿತಿ ಸಿಕ್ಕಿತ್ತು. ಪಿಎಸ್‍ಐ ರಘುಪತಿ ಮಾಹಿತಿಯನ್ನು ಆಧರಿಸಿ ಆರೋಪಿಯನ್ನು ರಾತ್ರಿ 12:30ಕ್ಕೆ ವಶಕ್ಕೆ ಪಡೆಯಲಾಯ್ತು. ಬಂಧನ ಮಾಡುವ ಸಂದರ್ಭದಲ್ಲಿ ಎಸ್ಕೇಪ್ ಆಗಲು ಪ್ರಯತ್ನ ಮಾಡಿದ್ದ. ಆದರೆ ಪಿಎಸ್‍ಐ ಸಿಬ್ಬಂದಿಯೊಂದಿಗೆ ಆತನ ಬಂಧನ ಮಾಡಲಾಯ್ತು. ಬಳಿಕ 2:15 ಕ್ಕೆ ವಶಪಡಿಸಿಕೊಂಡ ಡ್ರಗ್ಸ್ ಸಮೇತ ಆತನ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದೆವು. ಆದರೆ ಸ್ವಲ್ಪ ಹೊತ್ತಿನ ಬಳಿಕ ಆರೋಪಿಗೆ ಎದೆ ನೋವು ಪ್ರಾರಂಭವಾಯ್ತು. ತಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಆದರೆ 6:45 ರ ಹೊತ್ತಿಗೆ ಆತನಿಗೆ ಹೃದಯಾಘಾತ ಆಗಿ ಸಾವನ್ನಪ್ಪಿದ್ದಾನೆ ಎಂದು ಡಿಸಿಪಿ ಧರ್ಮೇಂದ್ರ ಮೀನಾ ಸ್ಪಷ್ಟನೆ ನೀಡಿದ್ದಾರೆ.
ನಮ್ಮ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಅವರ ಮೇಲೆ ಎಫ್ ಐಆರ್ ಮಾಡಿ ಬಂಧಿಸುತ್ತೇವೆ. ಇದು ತುಂಬಾ ಸೂಕ್ಷ್ಮ ವಿಚಾರವಾಗಿದೆ. ನಮ್ಮ ಮಹಿಳಾ ಸಿಬ್ಬಂದಿ ಮೇಲೆ ಕೂಡ ಹಲ್ಲೆಗೆ ಯತ್ನಿಸಿ ಅವಾಚ್ಯವಾಗಿ ಬೈದಿದ್ದಾರೆ. ಸದ್ಯ ಎಷ್ಟು ಜನ ಸಿಕ್ಕಿದ್ದಾರೆ ಅಂತಾ ಗೊತ್ತಾಗಬೇಕಿದೆ. ಗಲಾಟೆ ಮಾಡಿದ ಯಾರನ್ನು ಬಿಡಲ್ಲ. ನಿನ್ನೆ ರಾತ್ರಿ ಆಫ್ರಿಕನ್ ಪ್ರಜೆ ಅರೆಸ್ಟ್ ಮಾಡಿದ್ದಾರೆ. 5 ಗಂಟೆ ವೇಳೆಗೆ ಹೃದಯಾಘಾತವಾಗಿದೆ. ನಾವು ಆಸ್ಪತ್ರೆಗೆ ಸೇರಿಸುವ ವೇಳೆ ಸಾವನ್ನಪ್ಪಿದ್ದಾನೆ. ನಮ್ಮ ಪೊಲೀಸರು ಆ ವ್ಯಕ್ತಿಯ ಮೇಲೆ ಹಲ್ಲೆ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಲಾಠಿಚಾರ್ಜ್:
ಪೊಲೀಸರ ಮೇಲೆ ಕೂಗಾಟ, ತಳ್ಳಾಟ ಮಾಧ್ಯಮಗಳ ಮೇಲೂ ಹಲ್ಲೆಗೆ ಯತ್ನ ಮಾಡಿದ್ದಾರೆ. ಚಪ್ಪಾಳೆ ತಟ್ಟುವ ಮೂಲಕ ಪೊಲೀಸರ ಮೇಲೆ ಗಲಾಟೆ ಮಾಡುತ್ತಾ ಮಹಿಳಾ ಸಿಬ್ಬಂದಿ ಮೇಲೆ ಪ್ರತಿಭಟನಾಕಾರರು ಎಗರಿದ್ದಾರೆ. ಪ್ರತಿಭಟನಾಕಾರರನ್ನ ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಅಟ್ಟಾಡಿಸಿಕೊಂಡು ಪೊಲೀಸರು ಲಾಠಿ ಬೀಸಿದ್ದಾರೆ. ರಸ್ತೆ ರಸ್ತೆಗಳಲ್ಲಿ ನುಗ್ಗಿ ಪೊಲೀಸ್ ಲಾಠಿ ಏಟು ಕೊಟ್ಟಿದ್ದಾರೆ. ಆದರೆ ಬಹುತೇಕರು ಓಡಿ ಎಸ್ಕೇಪ್ ಆಗಿದ್ದಾರೆ.