ನವದೆಹಲಿ: ಚೀನಾದ ಭಾರೀ ವಿರೋಧದ ನಡುವೆಯೂ ಗಲ್ವಾನ್ ನದಿಗೆ ಅಡ್ಡಲಾಗಿ ಕಟ್ಟುತ್ತಿದ್ದ ಸೇತುವೆ ಕಾಮಗಾರಿಯನ್ನು ಭಾರತ ಪೂರ್ಣಗೊಳಿಸಿದೆ.
ಹೌದು. ಸೇನಾ ಎಂಜಿನಿಯರ್‌ಗಳು 60 ಮೀಟರ್ ಉದ್ದದ ಸೇತುವೆ ಕಾಮಗಾರಿಯನ್ನು ಗುರುವಾರ ಪೂರ್ಣಗೊಳಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಚೀನಾ ಗಡಿ ಭಾಗದಲ್ಲಿ ರಸ್ತೆ, ವಾಯು ನೆಲೆಗಳನ್ನು ನಿರ್ಮಿಸುತ್ತಿದ್ದರೆ ಭಾರತ ತನ್ನ ಗಡಿ ಒಳಗಡೆ ಗಲ್ವಾನ್ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡುತ್ತಿರುವುದ್ದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಕಾರಣಕ್ಕೆ ಮೇ ತಿಂಗಳಿನಿಂದಲೇ ಕಿರಿಕ್ ಆರಂಭಿಸಿತ್ತು. ಜೂನ್ ತಿಂಗಳಿನಲ್ಲಿ ವಿಕೋಪಕ್ಕೆ ಹೋಗಿ ಎಲ್‌ಎಸಿ ಬಳಿ ಟೆಂಟ್ ಹಾಕಿ ಗಲಾಟೆ ಎಬ್ಬಿಸಿದ್ದರು. ಪರಿಣಾಮ ಸೋಮವಾರ ರಕ್ತಪಾತವೇ ನಡೆದಿತ್ತು.
ಭಾರತಕ್ಕೆ ಯಾಕೆ ಮಹತ್ವ?
ಚೀನಾದ ಆಕ್ಷೇಪಕ್ಕೆ ಕಾರಣವಾಗಿರುವುದು ದರ್ಬುಕ್- ಶಾಯಕ್- ದೌಲತ್ ಬೇಗ್ ಓಲ್ಡೀ ರಸ್ತೆ(ಡಿಎಸ್‌ಡಿಬಿಒ) ಸುಮಾರು 255 ಕಿಲೋಮೀಟರ್ ಉದ್ದವಿದೆ. ಭಾರತಕ್ಕೆ ಎಷ್ಟು ಮಹತ್ವ ಎಂದರೆ ಇದು ದೌಲತ್ ಬೇಗ್ ಓಲ್ಡೀ ವಾಯುನೆಲೆಯಿಂದ ನಡುವಿನ ಪ್ರಯಾಣದ ಸಮಯವನ್ನು 2 ದಿನಗಳಿಂದ 6 ಗಂಟೆಗಳಿಗೆ ಇಳಿಸುತ್ತದೆ.
ಗಲ್ವಾನ್ ನದಿಯ ಹಾಗೂ ವಾಸ್ತವಿಕ ಗಡಿರೇಖೆಯ ಪಕ್ಕದಲ್ಲೇ ಈ ಹೆದ್ದಾರಿ ಹಾದುಹೋಗುತ್ತದೆ. ಹೆದ್ದಾರಿ ನಿರ್ಮಾಣದಿಂದಾಗಿ ಸೇನೆಗೆ ತನ್ನ ಸರಕುಗಳನ್ನು ತೆಗೆದುಕೊಂಡು ಹೋಗಲು ಸಹಾಯವಾಗಲಿದೆ.
ಕ್ಸಿನ್‌ಜಿಯಾಂಗ್ ಮತ್ತು ಟಿಬೆಟ್ ನಡುವಿನ ಕಾರಕೋರಂ ಹೆದ್ದಾರಿ ಹಾದುಹೋಗಿರುವ ಆಕ್ಸಾಯ್ ಚಿನ್ ಪ್ರದೇಶವೂ ಈ ಭಾರತ ನಿರ್ಮಿತ ರಸ್ತೆಯ ಪಕ್ಕದಲ್ಲೇ ಇರಲಿದೆ. ಯುದ್ಧ ಸಮಭವಿಸಿದರೆ ಭಾರತಕ್ಕೆ ತನ್ನ ಸೇನೆಯನ್ನು ಕ್ಷಿಪ್ರ ಅವಧಿಯಲ್ಲಿಇಲ್ಲಿಗೆ ಕಳುಹಿಸಲು ಸಾಧ್ಯವಾಗುತ್ತದೆ. ಈ ಕಾರಣಕ್ಕೆ ಚೀನಾ ರಸ್ತೆ ಕಾಮಗಾರಿಗೆ ಅಡ್ಡಿ ಪಡಿಸುತ್ತಿತ್ತು.