– ಕಲ್ಲುಚಪ್ಪಡಿಗೆ ತಲೆ ಹೊಡೆಸಿ ಕೊಲೆಗೈದು ಗೋಡೆ ಬೀಳಿಸಿದ
ಮೈಸೂರು: ಗೋಡೆ ಕುಸಿದು ಗೃಹಿಣಿ ಮೃತಪಟ್ಟ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪತ್ನಿಯ ಕೊಲೆ ನಂತರ ಪತಿ ಕಥೆ ಕಟ್ಟಿರುವ ವಿಚಾರ ಬಯಲಾಗಿದೆ.
ಸಲ್ಮಾ(26) ಮೃತಪಟ್ಟಿದ್ದ ಗೃಹಿಣಿ. ಈಕೆಯನ್ನು ಪತಿ ನಯೀಂ ಪಾಷ ಕೊಲೆ ಮಾಡಿದ್ದಾನೆ. ಈ ಘಟನೆ ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲೂಕಿನ ಹೊನ್ನಮ್ಮನ ಕಟ್ಟೆ ಗ್ರಾಮದಲ್ಲಿ ಡಿಸೆಂಬರ್ 13 ರಂದು ನಡೆದಿತ್ತು.
ಪತ್ನಿಯ ಕೊಲೆ ಮಾಡಿ ಪೊಲೀಸ್ ಠಾಣೆಗೆ ಹೋಗಿದ್ದ ಪತಿ, ಮನೆಯ ಗೋಡೆ ಕುಸಿದು ಪತ್ನಿ ಸಾವನ್ನಪ್ಪಿದ್ದಾಳೆ. ಮರಣೋತ್ತರ ಪರೀಕ್ಷೆ ನಡೆಸುವುದು ಬೇಡ. ನಾನು ದೂರು ಕೊಡುವುದಿಲ್ಲ ಎಂದು ಹೇಳಿದ್ದ. ಆದರೂ ಪೊಲೀಸರು ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದರು.
ಇದಾದ ಬಳಿಕ ಪೊಲೀಸ್ ಠಾಣೆಗೆ ಅನಾಮಧೇಯ ಕರೆಯೊಂದು ಬಂದಿದೆ. ಕರೆ ಮಾಡಿದ ವ್ಯಕ್ತಿ ನಯೀಂ ಪಾಷನೇ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ಮಾಹಿತಿ ನೀಡಿದನು. ಈ ಕರೆಯ ಜಾಡು ಹಿಡಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ತನಿಖೆಯ ವೇಳೆ ಪಾಷಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪತ್ನಿಯ ನಡತೆ ಬಗ್ಗೆ ಅನುಮಾನಗೊಂಡು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಪತ್ನಿಯ ತಲೆಯನ್ನು ಕಲ್ಲು ಚಪ್ಪಡಿಗೆ ಹೊಡೆಸಿ ಕೊಲೆ ಮಾಡಿದ್ದಾನೆ. ನಂತರ ಆಕೆಯ ಮೇಲೆ ಗೋಡೆ ಬೀಳಿಸಿದ್ದಾನೆ.
ಸದ್ಯ ಪೊಲೀಸರು ಆರೋಪಿ ಪಾಷಾನನ್ನು ಬಂಧಿಸಿದ್ದಾರೆ. ಈ ಸಂಬಂಧ ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.