Thursday, 24th May 2018

Recent News

ರೈಲಿನ ಫುಟ್ ಬೋರ್ಡ್‍ನಿಂದ ಕೆಳಗೆ ಬಿದ್ದು ಯುವ ನಟ ದುರ್ಮರಣ

ಮುಂಬೈ: ರೈಲಿನಿಂದ ಬಿದ್ದ ಮರಾಠಿಯ ಯುವ ನಟರೊಬ್ಬರು ದುರ್ಮರಣಕ್ಕೀಡಾದ ಘಟನೆ ಸೋಮವಾರ ಬೆಳಗ್ಗೆ ಮುಂಬೈನಲ್ಲಿ ನಡೆದಿದೆ.

ಪ್ರಫುಲ್ ಭಲೇರಾವ್(22) ರೈಲು ಅಪಘಾತದಲ್ಲಿ ಸಾವನ್ನಪ್ಪಿದ ನಟ. ಪ್ರಫುಲ್ ಮಲಾಡ್ ನಿಂದ ಗೋರೆಗಾಂವ್ ಗೆ ಹೋಗುತ್ತಿದ್ದ ರೈಲನ್ನು ಏರಿದಾಗ ಈ ಅವಘಡ ಸಂಭವಿಸಿದೆ.

ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ, ಪ್ರಫುಲ್ ರೈಲು ಹಿಡಿಯಲೆಂದು ಓಡಿಬಂದಿದ್ದು, ಫುಟ್ ಬೋರ್ಡ್ ನಲ್ಲಿ ನಿಂತಿದ್ದಾರೆ. ಈ ವೇಳೆ ರೈಲು ವೇಗವಾಗಿ ಚಲಿಸಿದ್ದು, ಪ್ರಫುಲ್ ಎಡವಿ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಸೋಮವಾರ ಮುಂಜಾನೆ 4.15ರ ಸುಮಾರಿಗೆ ಪ್ರಫುಲ್, ಚರ್ಚ್ ಗೇಟ್ ನಿಂದ ಮಲಾಡ್ ಗೆ ಪ್ಲಾಟ್‍ಫಾರ್ಮ್ ನಂಬರ್ 2ರಲ್ಲಿ ರೈಲನ್ನ ಏರಿದ್ದರು. ಫುಟ್ ಬೋರ್ಡ್ ಮೇಲೆ ನಿಂತಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದರು. ನಂತರ ಸಿಗ್ನಲ್ ಪೋಲ್‍ಗೆ ಹೊಡೆದು ತಲೆಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ರೈಲ್ವೆಯ ಹಿರಿಯ ಪೊಲೀಸ್ ಅಧಿಕಾರಿ ಶೈಲೇಂದ್ರ ಧಿವಾರ್ ತಿಳಿಸಿದ್ದಾರೆ.

4.30ರ ಸುಮಾರಿಗೆ ರೈಲ್ವೇ ಟ್ರ್ಯಾಕ್ ನಲ್ಲಿ ಶವ ಇರುವ ಕುರಿತು ಕರೆಯೊಂದು ನಮಗೆ ಬಂದಿತ್ತು. ಘಟನೆ ನಡೆದ ಸಂದರ್ಭದಲ್ಲಿ ಅಷ್ಟೊಂದು ಜನಜಂಗುಳಿ ಇರಲಿಲ್ಲ. ಹೀಗಾಗಿ ನಟ ರೈಲಿನಿಂದ ಕೆಳಗೆ ಬಿದ್ದಾಗ ಫುಟ್‍ಬೋರ್ಡ್‍ನಲ್ಲಿ ಹೊರಕ್ಕೆ ಬಾಗಿರಬಹುದಾದ ಸಾಧ್ಯತೆ ಇದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಕುರಿತು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದೇವೆ ಅಂತ ಅವರು ವಿವರಿಸಿದ್ದಾರೆ.

ಪ್ರಫುಲ್ ಮರಾಠಿಯ ಫೇಮಸ್ ನಟರಾಗಿದ್ದು, `ಕುಂಕು’ ಎಂಬ ಪ್ರಸಿದ್ಧ ಟಿವಿ ಕಾರ್ಯಕ್ರಮದಿಂದಾಗಿ ಹೆಸರುವಾಸಿಯಾಗಿದ್ದರು. ಆ ಬಳಿಕ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದ ಇವರು, ಇತ್ತೀಚೆಗೆ ಮರಾಠಿಯಲ್ಲಿ ಬಿಡುಗಡೆಗೊಂಡ ಬರಾಯನ್ ಚಿತ್ರದಲ್ಲೂ ಕೂಡ ಕಾಣಿಸಿಕೊಂಡಿದ್ದರು.

Leave a Reply

Your email address will not be published. Required fields are marked *