Monday, 28th May 2018

ಮೋಹನ್ ಭಾಗವತ್ ಈ ಕಾರಣಕ್ಕೆ ಲಿಂಗಾಯತ ಧರ್ಮವನ್ನು ಬೆಂಬಲಿಸಲಿ: ಡಾ. ಮಾತೆ ಮಹಾದೇವಿ

ಬಾಗಲಕೋಟೆ: ಲಿಂಗಾಯತ ಧರ್ಮ ಹಿಂದೂ ಸಂಸ್ಕೃತಿ ವಿರೋಧಿಯಲ್ಲ. ಅದಕ್ಕೆ ಕಳವಳ ಬೇಡ. ಇದೊಂದು ಸ್ವತಂತ್ರ ಧರ್ಮವೇ ಹೊರತು ಜಾತಿಯಲ್ಲ. ಹೀಗಾಗಿ ಮೋಹನ್ ಭಾಗವತ್ ಅವರು ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವನ್ನು ಬೆಂಬಲಿಸಲಿ ಎಂದು ಬಸವಧರ್ಮ ಪೀಠಾಧ್ಯಕ್ಷೆ ಡಾ. ಮಾತೆ ಮಹಾದೇವಿ ಹೇಳಿದ್ದಾರೆ.

ಇಂದು ಬಾಗಲಕೋಟೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರು ಈ ಹಿಂದೆ ಒಪ್ಪಿಕೊಂಡಿದ್ದರು. ಈಗ ಬಿಜೆಪಿ ಹೈಕಮಾಂಡ್ ತಾಕೀತು ಮಾಡಿದ ಹಿನ್ನೆಲೆಯಲ್ಲಿ ಸುಮ್ಮನಾಗಿದ್ದಾರೆ. ಅವರಿಗೆ ಅಧ್ಯಯನದ ಕೊರತೆ ಮತ್ತು ಆತ್ಮವಿಶ್ವಾಸದ ಕೊರತೆಯಿಂದ ಮಾತನಾಡದೇ ಇರಬಹುದು. ಹೀಗಾಗಿ ಬಿಜೆಪಿ ಆದರ್ಶತನ ಬೇರೆಯಾಗಿದ್ದರಿಂದಲೇ ಅವರು ಮಾತನಾಡುತ್ತಿಲ್ಲ ಎಂದರು.

ಕುರುಬ ಮತ್ತು ಒಕ್ಕಲಿಗ ಪ್ರತ್ಯೇಕ ಧರ್ಮ ಬೇಡಿಕೆ ವಿಚಾರದಲ್ಲಿ ಅವರಿಗೆ ಧರ್ಮ ಸಂಸ್ಥಾಪಕರಿಲ್ಲ. ದೀಕ್ಷಾ ಸಂಸ್ಕಾರ ಇಲ್ಲ. ಹೀಗಾಗಿ ಕುರುಬ ಮತ್ತು ಒಕ್ಕಲಿಗ ಸಮುದಾಯ ಪ್ರತ್ಯೇಕ ಧರ್ಮದ ಅರ್ಹತೆ ಪಡೆಯೋದಿಲ್ಲ ಎಂದು ಹೇಳಿದರು.

ಸಿದ್ಧಗಂಗಾ ಶ್ರೀಗಳು ಪ್ರತ್ಯೇಕ ಧರ್ಮಕ್ಕೆ ಪ್ರತಿಕ್ರಿಯೆ ನೀಡದೇ ಇರೋ ವಿಚಾರದಲ್ಲಿ ಸಿದ್ಧಗಂಗಾ ಶ್ರೀಗಳಿಗೂ ಅಧ್ಯಯನ ಕೊರತೆಯೋ ಅಥವಾ ಆತ್ಮವಿಶ್ವಾಸದ ಕೊರತೆಯೋ ಗೊತ್ತಿಲ್ಲ. ಆದರೆ ಯಾರೇ ಮನವಿ ನೀಡಿದರೂ ಸಿಎಂ ಸಿದ್ದರಾಮಯ್ಯ ಅವರು ವಿಚಾರವಾದಿಗಳು, ಬಸವಣ್ಣನ ತತ್ವದಲ್ಲಿ ನಂಬಿಕೆ ಇಟ್ಟವರು. ಹೀಗಾಗಿ ಪ್ರತ್ಯೇಕ ಧರ್ಮಕ್ಕೆ ಶಿಫಾರಸ್ಸು ಮಾಡಲಿ ಎಂದರು.

ಆ.22ರಂದು ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಬೆಳಗಾವಿಯಲ್ಲಿ ಬೃಹತ್ ರ್ಯಾಲಿ ಮತ್ತು ಮಹಾರಾಷ್ಟ್ರದಲ್ಲೂ ರ್ಯಾಲಿ ನಡೆಸಿ ಬೆಂಗಳೂರಿನಲ್ಲಿ ಸಮಾರೋಪ ಸಮಾವೇಶವನ್ನ ಅಕ್ಟೋಬರ್ 30ರಂದು ನಡೆಸಲಾಗುವುದು ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *