ನವದೆಹಲಿ: ಹೊರಗಡೆ ಮಾತ್ರವಲ್ಲ, ಮನೆಯ ಒಳಗಡೆ ಸಹ ಮಾಸ್ಕ್ ಧರಿಸುವ ಸಮಯವಿದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಭಾರತದ ಕೋವಿಡ್ 19 ಸ್ಥಿತಿಯ ಬಗ್ಗೆ ನೀತಿ ಆಯೋಗದ ಸದಸ್ಯ ಡಾ. ವಿಕೆ ಪೌಲ್ ಅವರು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಈ ಸಮಯದಲ್ಲಿ ಜನರು ಮನೆಯಲ್ಲಿ ಮಾಸ್ಕ್ ಧರಿಸಿ ಕುಳಿತುಕೊಳ್ಳಬೇಕು ಮತ್ತು ಹೊರಗಿನ ವ್ಯಕ್ತಿಗಳನ್ನು ಆಹ್ವಾನಿಸಬಾರದು. ಅಷ್ಟೇ ಅಲ್ಲದೇ ಮನೆಯಿಂದ ಅನಗತ್ಯವಾಗಿ ಹೊರಗಡೆ ಬರಬಾರದು ಎಂದು ಹೇಳಿದರು.
Advertisement
Advertisement
Advertisement
Advertisement
ಕುಟುಂಬದಲ್ಲಿ ಕೋವಿಡ್ ಕೇಸ್ ಇದ್ದರೆ ವ್ಯಕ್ತಿಯು ಮನೆಯೊಳಗೆ ಮಾಸ್ಕ್ ಧರಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ಮನೆಯ ಇತರ ಸದಸ್ಯರಿಗೂ ಕೊರೊನಾ ಬರಬಹುದು ಎಂದು ತಿಳಿಸಿದರು.
ಕೇಂದ್ರ ಜಂಟಿ ಕಾರ್ಯದರ್ಶಿ (ಆರೋಗ್ಯ) ಲವ ಅಗರ್ವಾಲ್ ಅವರು ಮಾಸ್ಕ್ ಧರಿಸದಿರುವ ಅಪಾಯಕಾರಿ ಅಂಶಗಳ ಬಗ್ಗೆ ಮಾತನಾಡಿ, ಇಬ್ಬರು ವ್ಯಕ್ತಿಗಳು ಮಾಸ್ಕ್ ಧರಿಸದಿರುವುದು ಮತ್ತು ಸಾಕಷ್ಟು ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳದಿರುವುದರಿಂದ ಶೇ.90ರಷ್ಟು ಸೋಂಕಿನ ಅಪಾಯವನ್ನು ಹೊಂದಿರುತ್ತಾರೆ ಎಂದು ಅಧ್ಯಯನಗಳನ್ನು ಉಲ್ಲೇಖಿಸಿ ಹೇಳಿದರು.
ಸೋಂಕಿತ ವ್ಯಕ್ತಿ ಮಾಸ್ಕ್ ಧರಿಸಿದರೆ ಅಪಾಯವು ಶೇ.30ಕ್ಕೆ ಇಳಿಯುತ್ತದೆ. ಸೋಂಕಿತ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ ಇದ್ದರೆ ಆತನಿಂದ 30 ದಿನದಲ್ಲಿ 406 ಜನರಿಗೆ ಸೋಂಕು ತಗಲಬಹುದು. ಸಾಮಾಜಿಕ ಅಂತರ ಕಾಪಾಡಿದ್ದರೆ 30 ದಿನಗಳಲ್ಲಿ 2.5 ಜನರಿಗೆ ಸೋಂಕು ತಗಲಬಹುದು ಎಂದು ವಿವರಿಸಿದರು.
ಪ್ರಸ್ತುತ ಭಾರತದಲ್ಲಿ ಪ್ರತಿನಿತ್ಯ 3 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿದೆ. ಕೋವಿಡ್ ಎರಡನೇ ಅಲೆ ಮೇ ಮಧ್ಯ ಭಾಗದಲ್ಲಿ ಉತ್ತಂಗಕ್ಕೆ ಏರುವ ಸಾಧ್ಯತೆ ಇದ್ದು ಏಪ್ರಿಲ್ 30ರ ವೇಳೆಗೆ ಉತ್ತರ ಪ್ರದೇಶದಲ್ಲಿ ಪ್ರತಿ ನಿತ್ಯ 1.19 ಲಕ್ಷ, ಮಹಾರಾಷ್ಟ್ರದಲ್ಲಿ 99 ಲಕ್ಷ ಪ್ರಕರಣಗಳು ವರದಿಯಾಗಬಹುದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.