– ಪವಿತ್ರ ಕಡ್ತಲ
ನಿನ್ನೆ ಬಿಗ್ ಬುಲೆಟಿನ್ನಲ್ಲಿ ಬ್ರೇಕ್ ನಲ್ಲಿದ್ದಾಗ ರಂಗನಾಥ್ ಸರ್ ಕರೆ ಬಂದಿತ್ತು. ಬ್ರೇಕ್ನ ಮಧ್ಯೆ ಸರ್ ಕರೆ, ಕೊಂಚ ಅಚ್ಚರಿ ಭಯದಿಂದಲೇ ಹಲೋ ಸರ್ ಅಂದಿದ್ದೆ. ಆ ಹುಡ್ಗಿಗೆ ನಾಳೆ ಟ್ಯಾಬ್ ತಲುಪಿಸಿ ಆಕೆ ಚೆನ್ನಾಗಿ ಓದಲಿ ಅಂದ್ರು. ನನಗಂತೂ ಮಾತು ಹೊರಡಲಿಲ್ಲ. ಥ್ಯಾಂಕ್ಸ್ ಸರ್ ಅಂತಾ ಅಂದುಬಿಟ್ಟೆ ಅಷ್ಟೇ. ನಮ್ಮ ಮೆಟ್ರೋ ಟೀಂನ ನಂದಿನಿಯ ಒಂದು ಸುದ್ದಿ ಹೂಮಾರುವ ಹುಡ್ಗಿ ಮುಖದಲ್ಲಿ ಚಂದದ ನಗು ತರಿಸಿತ್ತು. ಹೂ ಮಾರುವ ಹುಡ್ಗಿಯ ಕಣ್ಣಿನಲ್ಲಿ ಓದುವ ಆಸೆಗೊಂದು ಭರವಸೆ ಕೊಟ್ಟಿತ್ತು. ಸಾಮಾನ್ಯವಾಗಿ ವರದಿಗಾರರು ನಿರಂತರವಾಗಿ ಸುದ್ದಿಗಾಗಿ ಹೋಗುವ ಸರ್ಕಾರಿ ಕಚೇರಿಗಳಲ್ಲಿ ಒಂದಿಷ್ಟು ಸಿಬ್ಬಂದಿಯ ಬಳಿ, ಅಲ್ಲಿನ ಸೆಕ್ಯೂರಿಟಿ ಗಾರ್ಡೋ ಅಥವಾ ಆಯಾ ಕೆಲ್ಸ ಮಾಡೋರ ಬಳಿ ಸಣ್ಣದಾಗಿ ಆತ್ಮೀಯತೆಯ ನಂಟು ಇಟ್ಟುಕೊಂಡಿರ್ತಾರೆ. ಕೆಲವೊಮ್ಮೆ ಇವ್ರೇ ಸುದ್ದಿಯ ಮೂಲವೂ ಆಗಿರ್ತಾರೆ. ಆದ್ರೇ ಬೇರೆ ಸುದ್ದಿಯ ಹುಡುಕಾಟದಲ್ಲಿ ಇರುವಾಗ ಅಚಾನಕ್ ಆಗಿ ಎದುರಿಗೆ ಸಿಗುವವರ ಜೊತೆಗೆ ಮಾತಿಗಿಳಿದಾಗ ಅವ್ರ ಕಷ್ಟಗಳು ಬದುಕಿನ ನೋವನ್ನು ಕೊಂಚ ಕೇಳಿಸಿಕೊಳ್ಳುವ, ಕೆಲವೊಮ್ಮೆ ಅವ್ರಿಗೇನಾದ್ರೂ ಸಹಾಯ ಮಾಡೋಣ ಎನ್ನುವ ಮನಸ್ಥಿತಿ ಇದ್ರೆ, ಖಂಡಿತಾ ಜೀವನಪೂರ್ತಿ ವೃತ್ತಿ ಬದುಕಿನ ಸಾರ್ಥಕತೆಯನ್ನು ಅನುಭವಿಸಬಹುದು. ಅಂದ ಹಾಗೆ ಈ ಹೂ ಹುಡ್ಗಿ ಯಾರು? ನಮ್ಮ ವರದಿಗಾರ್ತಿ ನಂದಿನಿ ಕಣ್ಣಿಗೆ ಬಿದ್ದಿದ್ದು ಹೇಗೆ ಅನ್ನೋದು ಇನ್ನೂ ಇಂಟರೆಸ್ಟಿಂಗ್..!
Advertisement
ಆದಿಶಕ್ತಿ ದೇವಿಯಂಗಳದಲ್ಲಿದ್ಳು ‘ಬನಶಂಕರಿ’..!: ಆಕೆ ಥೇಟು ದೇವತೆಯಂತೆ ಕಾಣಿಸುವ ಚಂದದ ಹುಡ್ಗಿ..! ಚಟಪಟ ಮಾತು.. ಮುಖದಲ್ಲಿ, ಮಿನುಗುವ ಕಣ್ಣಲ್ಲಿ ಆತ್ಮವಿಶ್ವಾಸದ ಬುಗ್ಗೆ…! ದೇಗುಲದ ಮೂಲೆಯೊಂದರಲ್ಲಿ ಪುಟ್ಟ ಸ್ಟೂಲ್ನಲ್ಲಿ ಆಕೆ ಕೈ, ಹೈ ಸ್ಪೀಡ್ನಲ್ಲಿ ದಾರದೊಂದಿಗೆ ಹೂವು ಪೋಣಿಸುವ ಕೆಲ್ಸ ಮಾಡುತ್ತಿತ್ತು. ಆದ್ರೆ ಅವಳ ದೃಷ್ಟಿ ಮಾತ್ರ ಮೊಬೈಲ್ ಮೇಲಿತ್ತು. ನೋಡೋರಿಗೆ ಏನೋ ಸಿನಿಮಾ ವೀಕ್ಷಣೆ ಮಾಡಿಕೊಂಡಿದ್ದಾಳೋ ಅಂತಾ ಅನಿಸುತ್ತಿತ್ತು. ಆದ್ರೆ ಆಕೆ ತನ್ನ ಕಣ್ಣು ಮಿಟುಕಿಸದೆ ಮೊಬೈಲ್ ನೋಡುತ್ತಿದ್ದದ್ದು ಎಸ್ಎಸ್ಎಲ್ಸಿ ಎಕ್ಸಾಂನ ಸಿದ್ಧತೆಗಾಗಿ. ಬೆಳಗ್ಗೆಯಿಂದ ಮಧ್ಯಾಹ್ನ ತನಕ ಪರೀಕ್ಷೆಗೆ ತಯಾರಾಗುತ್ತಲೇ ಬೆಂಗಳೂರಿನ ಆದಿಶಕ್ತಿ ದೇವಸ್ಥಾನದ ದೇವಿಯಂಗಳದಲ್ಲಿ ಹೂಮಾರುತ್ತಿದ್ದ ಆ ಹುಡ್ಗಿ ಹೆಸ್ರು ಬನಶಂಕರಿ.! ಆಕೆಯ ಹೆಸ್ರು ನೋಡಿ ಅದೆಷ್ಟು ಚಂದ. ಆದ್ರೆ ಹೂಮಾರುವ ಹುಡ್ಗಿಯ ಬದುಕು ಹೂವಿನ ಹಾಸಿಗೆಯಲ್ಲ. ತಂದೆ ನೇಕಾರ ವೃತ್ತಿ, ತಾಯಿಯದ್ದು ಇದೇ ಹೂವು ಮಾರುವ ಕೆಲ್ಸ. ಲಾಕ್ಡೌನ್ ಸಂಕಷ್ಟದ ಮಧ್ಯೆ ಬದುಕಿಗೆ ದುಡಿಮೆ ಇಲ್ಲದೇ ಬನಶಂಕರಿ ಕುಟುಂಬ ಪರದಾಡಿತ್ತು. ಹೀಗಾಗಿ ದುಡಿಮೆಗಾಗಿ ಓದುವ ಮಧ್ಯೆಯೂ ಅಮ್ಮನಿಗೆ ಸಹಾಯ ಮಾಡೋದಕ್ಕಾಗಿ ಹೂವು ಮಾರುವ ಕೆಲ್ಸ ಮಾಡ್ತಾಳೆ ಈ ಬನಶಂಕರಿ.
Advertisement
Advertisement
ಹೂವು ಮತ್ತು ಅಮ್ಮನ ಕನಸು: ಅಪ್ಪ ಅಮ್ಮ ಇಬ್ಬರೂ ಕೂರಿಸಿಕೊಂಡು ಓದು ಓದು ಅಂತಾ ಮಕ್ಕಳಿಗೆ ಹೇಳಿದ್ರೂ ಕೆಲವೊಮ್ಮೆ ಕೇಳದ ಈ ಕಾಲದಲ್ಲಿ ಹೂವು ಕಟ್ಟುತ್ತಾ ನಿಷ್ಟೆಯಿಂದ ಓದುತ್ತಿದ್ದಾಳೆ ಬನಶಂಕರಿ. ಅಷ್ಟಕ್ಕೂ ಇವಳ ಬಳಿಯಿದ್ದ ಫೋನ್ ಇನ್ನೇನು ಪಾಪ ಗುಜುರಿ ಸೇರುವ ಹಂತದಲ್ಲಿಯೇ ಇತ್ತು ಬಿಡಿ. ಅಚಾನಕ್ ಆಗಿ ಅದ್ಯಾವುದೋ ಸುದ್ದಿಗಾಗಿ ಆದಿಶಕ್ತಿಯ ದೇವಸ್ಥಾನದ ಬಳಿ ರಿಪೋರ್ಟರ್ ನಂದಿನಿ ಹೋಗಿದ್ದಾರೆ. ಏನಮ್ಮಾ ಆಯ್ತಾ ಓದಿ, ಇನ್ನೇನು ಶುರುವಾಯ್ತಲ್ಲ ಎಕ್ಸಾಂ ಅಂತಾ ಅರ್ಚಕರು ಪೂಜೆ ಮುಗಿಸಿ ಹೊರಬರುವಾಗ ಹೂ ಮಾರುತ್ತಿದ್ದ ಹುಡ್ಗಿ ಬನಶಂಕರಿಯನ್ನು ವಿಚಾರಿಸಿದ್ದಾರೆ. ಇದು ನಂದಿನಿ ಜೊತೆಗಿದ್ದ ಡ್ರೈವರ್ ವಿಜಯ್ ಕಿವಿಗೆ ಬಿದ್ದು ನಂದಿನಿಗೆ ಹೇಳಿದ್ದಾರೆ. ಹೌದಾ ಅಂತಾ ಹೇಳಿ ಸುಮ್ಮನಾಗದ ನಂದಿನಿ ಈ ಹೂವು ಮಾರುವ ಹುಡ್ಗಿಯ ಬಳಿ ಮಾತು ಶುರುಹಚ್ಚಿಕೊಂಡಿದ್ದಾರೆ. ಹೂವನ್ನು ಸರಾಗವಾಗಿ ಕಟ್ಟುತ್ತಾ ಅತ್ತ ಆನ್ಲೈನ್ ಕ್ಲಾಸನ್ನು ಅಟೆಂಡ್ ಮಾಡುತ್ತಾ ಬನಶಂಕರಿ ಮಾತಿಗಿಳಿದಿದ್ದಾಳೆ. ಹೂಂ ಅಕ್ಕ, ಮನೆಯಲ್ಲಿ ಕಷ್ಟ.. ಓದು ನಂಗಿಷ್ಟ… ಆದ್ರೇ ದುಡಿಮೆನೂ ಬೇಕಲ್ವಾ.. ದುಡ್ಡು ಬೇಕಲ್ವಾ ಅಮ್ಮನ ಜೊತೆ ಸಹಾಯ ಮಾಡ್ತೀನಿ ಹಾಗೂ ಮಧ್ಯಾಹ್ನದ ತನಕ ಕ್ಲಾಸ್ ಅಟೆಂಡ್ ಮಾಡ್ತಾ ನಾನು ಅಮ್ಮನ ಜೊತೆ ಇರ್ತೀನಿ. ಅಕ್ಕಾ ನಾನು ಚೆನ್ನಾಗಿ ಮಾರ್ಕ್ಸ್ ಕೂಡ ತಗೋತಿನಿ ಅಂತಾ ಅದೇ ಕಾನ್ಫಿಡೆನ್ಸ್ ನಲ್ಲಿ ಹೇಳಿದ್ದಾಳೆ.
Advertisement
ಇದೆಲ್ಲಾ ಬನಶಂಕರಿ ಹೇಳ್ತಿರಬೇಕಾದರೆ ನಂದಿನಿಯ ಕಣ್ಣು ಆ ನಜ್ಜುಗುಜ್ಜಾದ ಮೊಬೈಲ್ ಮೇಲೆ ಹೋಗಿದೆ. ಜೊತೆಗೆ ಅವಳ ಛಲ ಇಷ್ಟವಾಗಿ ಸ್ಫೂರ್ತಿಯ ಹುಡುಗಿಯಿದು. ಇವಳನ್ನು ಕರುನಾಡಿಗೆ ಪರಿಚಯಿಸೋಣ ಅಂತಾ ಕ್ಯಾಮೆರಾದಲ್ಲಿ ಅವಳ ಓದು ಅವಳ ಆಸಕ್ತಿ, ಹೂವು ಕಟ್ಟುವ ಪರಿ ಎಲ್ಲವನ್ನೂ ಸೆರೆಹಿಡಿದು ಸುದ್ದಿಯೂ ಪ್ರಸಾರವಾಯ್ತು. ಅಷ್ಟೇ, ಹೂವು ಮಾರುವ ಹುಡ್ಗಿ ಅದೆಷ್ಟೋ ಜನ್ರ ಮನಸು ಗೆದ್ಲು…!
ಸ್ಪಂದಿಸಿದವು ಹಲವು ಮನ..!: ಅಚ್ಚರಿ ಏನ್ ಗೊತ್ತಾ..? ಬನಶಂಕರಿ ಕಥೆ ನನ್ನ ಹಳೆಯ ಕಷ್ಟದ ದಿನವನ್ನು ನೆನಪಿಸಿತ್ತು ಅಂತಾ ಪಬ್ಲಿಕ್ ಟಿವಿಯ ವರದಿಯನ್ನು ನೋಡುತ್ತಿದ್ದ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಬಂದು ಬನಶಂಕರಿಯನ್ನು ಭೇಟಿಯಾದ್ರು. ಅವ್ರ ಕಣ್ಣಲ್ಲೂ ಭಾವುಕತೆ ಇತ್ತು. ಕಷ್ಟದ ದಿನಗಳೇ ಸಾಧನೆಗೆ ಸ್ಫೂರ್ತಿಯಾಗುತ್ತೆ ಬಿಡು ಹುಡ್ಗಿ ಅಂತಾ ಕೋಟು ಹಾಕಿಕೊಂಡಿದ್ದ ಅಧಿಕಾರಿ ಮನಸ್ಫೂರ್ತಿ ಹಾರೈಸಿದ್ರು. ಅಷ್ಟೇ ಅಲ್ಲ ನಿಂಗೊಂದು ಲ್ಯಾಪ್ಟಾಪ್ ಕೊಡಿಸ್ತೀನಿ ಚೆನ್ನಾಗಿ ಓದು, ನಿನ್ನ ಓದಿಗೆ ನಿನ್ನ ಕಷ್ಟಕ್ಕೆ ನಾನಿರ್ತೀನಿ ಅಂತಾ ಪ್ರೀತಿಯಿಂದ ಮೈದಡವಿದ್ರು. ಪಬ್ಲಿಕ್ ಟಿವಿಯ ಎಲ್ಲ ಬುಲೆಟಿನ್ನಲ್ಲಿಯೂ ಈ ಹುಡ್ಗಿಯ ಸುದ್ದಿ ಪ್ರಸಾರವಾಗಿತ್ತು. ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೂಡ ಟ್ವೀಟ್ ಮಾಡಿ ಶಹಬ್ಬಾಸ್ ಮಗಳೇ ನಿನ್ನ ಜೊತೆಗೆ ನಾವಿದ್ದೀವಿ ಅಂತಾ ಪ್ರೀತಿಯ ಸಂದೇಶ ಕಳಿಸಿದ್ರು. ಗೌರವ್ ಗುಪ್ತಾರ ಜೊತೆಗೆ ಮಾತಾನಾಡಿ ಈ ಹುಡ್ಗಿಯ ವಿವರವನ್ನು ಪಡೆದ್ರು. ಇಷ್ಟಕ್ಕೆ ಮುಗಿದಿಲ್ಲ ಒಂದು ಸುದ್ದಿಯ ಪಾಸಿಟಿವ್ ಸ್ಪಂದನೆಯ ಕಥೆ.
ನಿಮ್ಮ ಬಿಗ್ ಬುಲೆಟಿನ್..!: ಹೂಮಾರುವ ಹುಡ್ಗಿಯ ಮುಖದಲ್ಲಿ ಮತ್ತಷ್ಟು ಹೂ ನಗೆ ತಂದಿದ್ದು ಬಿಗ್ ಬುಲೆಟಿನ್ ಕಾರ್ಯಕ್ರಮ. ಬಿಗ್ ಬುಲೆಟಿನ್ನಲ್ಲಿ ಈ ಹುಡ್ಗಿಯ ಮಾತುಗಳು ಪ್ರಸಾರವಾಗುತ್ತಿದ್ದಂತೆ ರಂಗನಾಥ್ ಸರ್ ಜ್ಞಾನದೀವಿಗೆಯ ಪಾಲು ಇವಳಿಗೂ ಹೋಗಬೇಕು ಎಂದುಕೊಂಡ್ರೋ ಏನೋ.! ರಾಜ್ಯದ ಸಾವಿರಾರು ಬಡಮಕ್ಕಳ ಪಾಲಿಗೆ ಈಗಾಗಲೇ ಎಸ್ಎಸ್ಎಲ್ಸಿ ಪರೀಕ್ಷೆಗೆ ಓದಿಕೊಳ್ಳಲು ಟ್ಯಾಬ್ ವಿತರಣೆ ಮಾಡಿರುವ ಪಬ್ಲಿಕ್ ಟಿವಿಗೆ ಹೂ ಮಾರುವ ಹುಡ್ಗಿ ಹೆಚ್ಚಾದಾಳೇ..? ಆಕೆಯ ಸುದ್ದಿ ಪ್ರಸಾರವಾದ ಮರುದಿನವೇ ಹೂ ಮಾರುವ ಹುಡ್ಗಿಗೆ ಪಬ್ಲಿಕ್ ಟಿವಿ ಓದುವ ಟ್ಯಾಬ್ ಕೈಗಿತ್ತಿತ್ತು. ಪುಟಾಣಿ ಹುಡ್ಗಿಯ ಖುಷಿಗೆ ಅವಳ ಕಣ್ಣಲ್ಲಿ ಆನಂದದ ಕಣ್ಣೀರು ತುಂಬಿತ್ತು. ಆದಿಶಕ್ತಿಯ ದೇಗುಲದೊಳಗೆ ಅರ್ಚಕರು ದೇವಿಗೆ ಗಂಟೆ ಮೊಳಗಿಸುವ ಸದ್ದು ಕೇಳಿಸುತ್ತಿತ್ತು. ಅಂದ ಹಾಗೆ ಈ ಪುಟಾಣಿಯ ಮುಂದಿನ ಶಿಕ್ಷಣಕ್ಕೆ ನೆರವಿನ ಹಸ್ತ ಚಾಚಲು ಕೂಡ ಅನೇಕರು ಮುಂದೆ ಬಂದಿದ್ದಾರೆ. ಹೂ ಮಾರುವ ಹುಡ್ಗಿಯ ಹೂ ನಗು ಹೀಗೆ ಇರಲಿ.. ಆಕೆಗೆ ನಿಮ್ಮ ಕಡೆಯಿಂದಲೂ ಹಾರೈಕೆಯಿರಲಿ..!