ರಾಯಚೂರು: ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಹುಳು ಹತ್ತಿದ ಕಳಪೆ ಬೀಜ ವಿತರಣೆ ಮಾಡಿದ್ದರಿಂದ ವಿವಿಧ ತಾಲೂಕುಗಳ ರೈತರು ಮೋಸಹೋಗಿದ್ದಾರೆ.
ಮಸ್ಕಿ ತಾಲೂಕಿನ ಕುಣಿಕಲ್ ಗ್ರಾಮದ ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಕಡಲೇಬೀಜ ಖರೀದಿ ಮಾಡಿ ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ಈ ವರ್ಷ ಉತ್ತಮ ಮಳೆಯಾಗಿದ್ದರೂ ರೈತರ ಕಷ್ಟಕ್ಕೆ ಮಾತ್ರ ಕೊನೆಯಿಲ್ಲ. ಒಂದೆಡೆ ಭಾರೀ ಮಳೆಯಿಂದ ಜಿಲ್ಲೆಯ ರೈತರು ಹಲವು ತೊಂದರೆಗೆ ಒಳಗಾಗಿದ್ದಾರೆ. ಇನ್ನೊಂದೆಡೆ ರೈತರು ಮಳೆ ಚೆನ್ನಾಗಿ ಆಗಿದ್ದರಿಂದ ಖುಷಿಯಾಗಿ ಬೀಜ ಬಿತ್ತನೆ ಮಾಡಿದ್ದಾರೆ. ಆದರೆ ಕಳಪೆ ಹಾಗೂ ಹುಳು ಹತ್ತಿದ ಬೀಜಗಳನ್ನು ರೈತರಿಗೆ ಮಾರಾಟ ಮಾಡಲಾಗಿದೆ. ಅದೇ ಬೀಜ ಬಿತ್ತನೆ ಮಾಡಿ ರೈತರು ದಿಕ್ಕೆಟ್ಟಿದ್ದಾರೆ.
Advertisement
Advertisement
4,500 ರೂಪಾಯಿ ನೀಡಿ ಖರೀದಿ ಮಾಡಿದ ಕಡಲೆ ಬೀಜದಲ್ಲಿ ಬರೀ ಹುಳುಗಳು ತುಂಬಿ ಹೋಗಿವೆ. ಬಿತ್ತನೆಗಾಗಿ ರೈತ ಸಂಪರ್ಕ ಕೇಂದ್ರದಿಂದ ತಂದಿರುವ ಬೀಜದಲ್ಲಿ ಹುಳುಗಳನ್ನು ನೋಡಿದ ಕೆಲ ರೈತರು ಕಂಗಾಲಾಗಿದ್ದರು. ಆದರೆ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಬಿತ್ತನೆ ಮಾಡಿ ಏನೂ ಆಗುವುದಿಲ್ಲ ಎಂದು ಹೇಳಿದ್ದರಿಂದ ರೈತರು ಹುಳು ತಿಂದಿರುವ ಕಡಲೆ ಬೀಜಗಳನ್ನೇ ಬಿತ್ತನೆ ಮಾಡಿ ಮೋಸಹೋಗಿದ್ದಾರೆ. ಈಗ ಬೀಜಗಳು ಮೊಳಕೆ ಬಾರದೇ ರೈತರು ಸಂಕಷ್ಟಕ್ಕೀಡಾಗಿದ್ದಾರೆ.
Advertisement
Advertisement
ಜಮೀನಿಗೆ ಖರ್ಚುಮಾಡಿದ ಹಣವೂ ಹೋಯಿತು, ಇತ್ತ ಬೆಳೆಯೂ ಇಲ್ಲದ ಪರಸ್ಥಿತಿ ಎದುರಿಸುತ್ತಿದ್ದಾರೆ. ಹೀಗಾಗಿ ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ರೈತರು ಆಗ್ರಹಿಸಿದ್ದಾರೆ.