– ಇದು ಅಪರೂಪ್ ನ್ಯಾಚುರಲ್ ಹಾರರ್ ಥ್ರಿಲ್ಲರ್ ಚಿತ್ರ!
ಕನ್ನಡ ಚಿತ್ರರಂಗದೊಳಗೆ ಪ್ಯಾನಿಂಡಿಯಾ ಕನಸು ಗಿರಕಿ ಹೊಡೆಯಲಾರಂಭಿಸಿ ವರ್ಷಗಳೇ ಕಳೆದಿವೆ. ಆ ನಿಟ್ಟಿನಲ್ಲಿ ನಡೆಯುತ್ತಾ ಬಂದಿದ್ದ ಸೃಜನಾತ್ಮಕ ಪ್ರಯತ್ನಗಳಿಗೆ ಲಾಕ್ಡೌನ್ ಕೂಡಾ ಬ್ರೇಕ್ ಹಾಕಿಲ್ಲ. ಆದರೆ, ಇಂಥ ಪ್ರಯತ್ನಗಳೆಲ್ಲವೂ ನಿರ್ಮಾಪಕರ ಧೀಶಕ್ತಿ ಬೇಡುತ್ತವೆ. ವ್ಯಾಪಾರ, ವ್ಯವಹಾರದ ಮನಸ್ಥಿತಿ ಮೀರಿಕೊಂಡು ಸಿನಿಮಾಸಕ್ತಿ ಹೊಂದಿರೋ, ಚೆಂದದ ಕಥೆಯನ್ನು ಹೆಕ್ಕಿ ತೆಗೆಯುವ ಛಾತಿಯಿರೋ ನಿರ್ಮಾಪಕರಿದ್ದಾಗ ಮಾತ್ರವೇ ಇಂಥ ಕನಸುಗಳು ಕೈಗೂಡುತ್ತವೆ. ಅಂಥಾ ಸಕಾರಾತ್ಮಕ ಮನಸ್ಥಿತಿ ಹೊಂದಿರೋ ನಿರ್ಮಾಪಕರ ಪೈಕಿ ಉದಯ್ ಕೆ ಮೆಹ್ತಾ ಮೊದಲಿಗರಾಗಿ ಗೋಚರಿಸುತ್ತಾರೆ. ಅವರೀಗ ಭಾರತೀಯ ಚಿತ್ರರಂಗದಲ್ಲಿಯೇ ದಾಖಲೆಯಂಥಾ ಸಿನಿಮಾವೊಂದಕ್ಕೆ ಸದ್ದಿಲ್ಲದೆ ತಯಾರಾಗುತ್ತಿದ್ದಾರೆ.
ಇದುವರೆಗೂ ಉದಯ್ ಮೆಹ್ತಾ ನಿರ್ಮಾಣ ಮಾಡಿರೋ ಸಿನಿಮಾಗಳೇ ಅವರ ಸಿನಿಮಾ ಪ್ರೇಮ ಎಂಥಾದ್ದೆಂಬುದಕ್ಕೆ ಉದಾಹರಣೆಯಂತಿವೆ. ಈ ಬಾರಿ ಅವರು ಅತ್ಯಂತ ಅಪರೂಪದ ಕಥಾ ಎಳೆಯೊಂದನ್ನು ಸ್ವತಃ ಸಿದ್ಧಪಡಿಸಿದ್ದಾರೆ. ಸಾಮಾನ್ಯ ಪಥದಾಚೆಗೆ ಹುಲಿಯ ಹೆಜ್ಜೆ ಜಾಡು ಹಿಡಿದು ಹೊರಟಿರೋ ಮೆಹ್ತಾರಿಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಂ ಗಿರಿರಾಜ್ ಜೊತೆಯಾಗಿದ್ದಾರೆ. ಈ ಸಮಾಗಮದಿಂದ ಹುಲಿಯನ್ನು ಕೇಂದ್ರವಾಗಿಟ್ಟುಕೊಂಡ ಅದ್ಭುತ ಸಿನಿಮಾ ಸೃಷ್ಟಿ ಕಾರ್ಯವೀಗ ಭರದಿಂದ ಸಾಗುತ್ತಿದೆ.
Advertisement
Advertisement
ಇದು ನ್ಯಾಚುರಲ್ ಹಾರರ್ ಥ್ರಿಲ್ಲರ್ ಜಾನರಿನ ಚಿತ್ರ. ಕೇವಲ ಕನ್ನಡಕ್ಕೆ ಮಾತ್ರವಲ್ಲ; ಭಾರತೀಯ ಚಿತ್ರರಂಗದಲ್ಲಿಯೇ ಅಪರೂಪದ ಚಿತ್ರವಾಗಿ ದಾಖಲಾಗುವಂಥಾ ಕಥಾಹಂದರ ಇದರಲ್ಲಿರಲಿದೆಯಂತೆ. ವಿಶೇಷವೆಂದರೆ ಈ ಕಥಾ ಎಳೆಯನ್ನು ನಿರ್ಮಾಪಕ ಉದಯ್ ಮೆಹ್ತಾ ಅವರೇ ಸೃಷ್ಟಿಸಿದ್ದಾರೆ. ಈ ಹಿಂದೆ ಬ್ರಹ್ಮಚಾರಿ ಚಿತ್ರದ ಮೂಲಕ ಕಥೆಗಾರರಾಗಿ ಹೊರಹೊಮ್ಮಿದ್ದ ಅವರು ಈ ಮೂಲಕ ಮತ್ತೊಂದು ಮೈಲಿಗಲ್ಲು ನೆಡಲು ಮುಂದಾಗಿದ್ದಾರೆ. ಅದಕ್ಕೆ ಬಿ.ಎಂ ಗಿರಿರಾಜ್ ಸಾಥ್ ಕೊಟ್ಟಿದ್ದಾರೆ. ಕಥೆ ಚಿತ್ರಕಥೆಯೊಂದಿಗೆ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ.
Advertisement
ಪ್ರಾಣಿಗಳ ಇರುವಿಕೆ ಇರುವಂಥ ಒಂದಷ್ಟು ಸಿನಿಮಾಗಳು ಕನ್ನಡದಲ್ಲಿಯೂ ಬಂದಿವೆ. ಆದರೆ ಹುಲಿಯಂಥ ಪ್ರಾಣಿಗಳನ್ನೇ ಕೇಂದ್ರವಾಗಿಟ್ಟುಕೊಂಡ, ಅದರ ಬಿಂದುವಿನಿಂದ ಕಥೆ ಕದಲುವ ಚಿತ್ರಗಳ ಈವರೆಗೂ ಬಂದಿಲ್ಲ. ಅನಕೊಂಡದಂತೆ ಸಂಚಲನ ಸೃಷ್ಟಿಸಬಲ್ಲ ಈ ಚಿತ್ರವನ್ನು ಪ್ಯಾನಿಂಡಿಯಾ ಲೆವೆಲ್ಲಿನಲ್ಲಿ ನಿರ್ಮಾಣ ಮಾಡಲು ಉದಯ್ ಮೆಹ್ತಾ ಮುಂದಾಗಿದ್ದಾರೆ. ಈ ಹಿಂದೆ ಕೃಷ್ಣನ್ ಲವ್ ಸ್ಟೋರಿ ಚಿತ್ರದಲ್ಲಿ ಗಿರಿರಾಜ್ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದರಲ್ಲಾ? ಆ ದಿನಗಳಿಂದಲೇ ನಿರ್ಮಾಪಕರಾಗಿದ್ದ ಮೆಹ್ತಾರಿಗೆ ಗಿರಿರಾಜ್ ನಂಟು ಬೆಸೆದುಕೊಂಡಿತ್ತು. ಅಲ್ಲಿಂದೀಚೆಗೆ ಗಿರಿರಾಜ್ ಜೊತೆಗೊಂದು ಸಿನಿಮಾ ಮಾಡಬೇಕೆಂಬ ಆಸೆ ಉದಯ್ ಮೆಹ್ತಾರಿಗಿತ್ತಂತೆ. ಇದೀಗ ಅದಕ್ಕೆ ಕಾಲ ಕೂಡಿ ಬಂದಿದೆ.
Advertisement
ನವಿಲಾದವರು, ಜಟ್ಟದಂಥಾ ಭಿನ್ನ ಬಗೆಯ ಚಿತ್ರಗಳ ಮೂಲಕ ಹೆಸರಾಗಿರುವವರು ಬಿ.ಎಂ ಗಿರಿರಾಜ್. ಸದಾ ಹೊಸ ಬಗೆಯ ಸಿನಿಮಾಗಳತ್ತ ದೃಷ್ಟಿ ನೆಟ್ಟಿರುವ ಅವರು ಸದರಿ ಚಿತ್ರದ ಬಗ್ಗೆ ಮಹತ್ವಾಕಾಂಕ್ಷೆಯಿಟ್ಟುಕೊಂಡಿದ್ದಾರೆ. ಇದೀಗ ಸ್ಕ್ರಿಫ್ಟ್ ಹಾಗೂ ಸ್ಕ್ರೀನ್ ಪ್ಲೇ ರಚನೆಯಲ್ಲವರು ಮಗ್ನರಾಗಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆಯನ್ನೂ ಬರೆಯಲಿದ್ದಾರಂತೆ. ಇನ್ನೂ ವಿಶೇಷವೆಂದರೆ ಈ ಸಿನಿಮಾದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದ ಆರು ಮಂದಿ ಸ್ಟಾರ್ ಗಳು ನಟಿಸಲಿದ್ದಾರಂತೆ. ಇನ್ನೆರಡು ತಿಂಗಳಲ್ಲಿ ಆ ಬಗೆಗಿನ ಮಾಹಿತಿಗಳು ಹೊರ ಬೀಳಲಿವೆ.