– ಕಾಲುವೆಯಲ್ಲಿ ಮುಳುಗಲು ಹೋದ ಬರ್ತ್ ಡೇ ಹುಡುಗಿ
ಚೆನ್ನೈ: ಒಂದೇ ಕುಟುಂಬದ ಮೂವರು ಕಾಲುವೆಯಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರುವ ಘಟನೆ ತಿರುಪ್ಪೂರು ಜಿಲ್ಲೆಯ ಪಲ್ಲಡಂ ಬಳಿ ನಡೆದಿದೆ. ಈ ಕಾಲುವೆಯೂ ಪರಂಬಿಕುಲಂ-ಅಲಿಯಾರ್ ಯೋಜನೆ (ಪಿಎಪಿ) ಅಡಿಯಲ್ಲಿ ನಿರ್ಮಿಸಲಾಗಿದೆ.
ಮಂಗಳವಾರ ಈ ಘಟನೆ ನಡೆದಿದ್ದು, ಮೃತರನ್ನು ದೇವಿ (18), ಈಕೆಯ ಪತಿ ಸೇತುಪತಿ (23) ಮತ್ತು ದೇವಿಯ ಸಹೋದರಿ ಶರಣ್ಯಾ (12) ಎಂದು ಗುರುತಿಸಲಾಗಿದೆ. ಮಂಗಳವಾರ ದೇವಿ ಸಹೋದರಿ ಶರಣ್ಯಾಳ ಹುಟ್ಟುಹಬ್ಬವಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬ ಸಮೇತರಾಗಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ದೇವಾಲಯವು ಪಿಎಪಿ ಕಾಲುವೆಯ ಬಳಿ ಇದ್ದುದರಿಂದ ಶರಣ್ಯಾ ಕಾಲುವೆಯಲ್ಲಿ ನೀರು ಮುಳುಗಲು ಇಷ್ಟಪಟ್ಟಿದ್ದಳು.
ಅದರಂತೆಯೇ ಕುಟುಂಬದವರನ್ನು ದಡದಲ್ಲಿ ಕಾಯುವಂತೆ ಹೇಳಿ ಕಾಲುವೆಗೆ ಹೋಗಿದ್ದಾಳೆ. ಆದರೆ ಶರಣ್ಯಾ ಆಕಸ್ಮಿಕವಾಗಿ ಕಾಲು ಜಾರಿಗೆ ಕಾಲುವೆಗೆ ಬಿದ್ದಿದ್ದು, ತಕ್ಷಣ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ. ಇದನ್ನು ನೋಡಿದ ದೇವಿ ಮತ್ತು ಸೇತುಪತಿ ಕೂಡ ನೀರಿಗೆ ಹಾರಿದ್ದಾರೆ. ಆದರೆ ಅವರು ಕೂಡ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ದಡದಲ್ಲಿದ್ದ ದೇವಿ ತಾಯಿ ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಫೋನ್ ಮಾಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳ, ರಕ್ಷಣಾ ಪಡೆ ಮತ್ತು ಪೊಲೀಸರು ಮಂಗಳವಾರ ಸಂಜೆ ಬಂದಿದ್ದು, ಮೂವರಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಕತ್ತಲಾಗಿದ್ದರಿಂದ ಅಂದೂ ಯಾರ ಮೃತದೇಹವೂ ಪತ್ತೆಯಾಗಿರಲಿಲ್ಲ.
ಏಳು ಜನರ ರಕ್ಷಣಾ ತಂಡವು ಕಾಲುವೆಯಿಂದ ಮೂರು ಶವಗಳನ್ನು ಹೊರತೆಗೆದಿದ್ದಾರೆ. ದೇವಿಯ ಮೃತದೇಹ ಬುಧವಾರ ಪತ್ತೆಯಾಗಿತ್ತು. ಸೇತುಪತಿ ಮತ್ತು ಶರಣ್ಯಾಳ ಮೃತದೇಹ ಗುರುವಾರ ಪತ್ತೆಯಾಗಿವೆ. ಸದ್ಯಕ್ಕೆ ಮೂವರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತಿರುಪ್ಪೂರು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ.ಸಿ.ರಾಮಚಂದ್ರನ್ ತಿಳಿಸಿದ್ದಾರೆ.
ಈ ಘಟನೆ ಕುರಿತು ಕಾಮನೈಕನ್ಪಾಲಯಂ ಪೊಲೀಸರು ಅಸ್ವಾಭಾವಿಕ ಸಾವು ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಫೆಬ್ರವರಿಯಲ್ಲಿ ಕೊಯಮತ್ತೂರು ಜಿಲ್ಲೆಯ ಅಲಿಯಾರ್ ಬಳಿ 8 ವರ್ಷದ ಬಾಲಕ ರೋಹಿತ್ ಪಿಎಪಿ ಕಾಲುವೆಯಲ್ಲಿ ಮುಳುಗಿ ಮೃತಪಟ್ಟಿದ್ದನು.