– ದಕ್ಷಿಣಪಂಥಿ ಸಂಘಟನೆಯ ಹಿಂದೂ ಯುವ ವಾಹಿನಿಯಿಂದ ಅಳವಡಿಕೆ
ಡೆಹರಾಡೂನ್: ಹಿಂದೂಯೇತರರು ದೇವಸ್ಥಾನದೊಳಗೆ ಪ್ರವೇಶಿಸುವಂತಿಲ್ಲ ಎಂದು ಹೇಳುವ ಬ್ಯಾನರ್ ಗಳನ್ನು ಉತ್ತರಾಖಂಡ್ ನಲ್ಲಿ ಹಾಕಲಾಗಿದೆ. ಡೆಹರಾಡೂನ್ ನಗರದ 150ಕ್ಕೂ ಅಧಿಕ ದೇವಸ್ಥಾನಗಳ ಮುಂದೆ ಈ ರೀತಿಯ ಫಲಕಗಳನ್ನ ಹಾಕಲಾಗಿದ್ದು, ಸಾರ್ವಜನಿಕದಲ್ಲಿ ಪರ-ವಿರೋಧದ ಚರ್ಚೆಗಳು ಆರಂಭಗೊಂಡಿವೆ.
ದಕ್ಷಿಣಪಂಥಿ ಸಂಘಟನೆ ಹಿಂದೂ ಯುವ ವಾಹಿನಿ ಈ ರೀತಿಯ ಬ್ಯಾನರ್ ಗಳನ್ನು ಹಾಕಿರೋದಾಗಿ ಒಪ್ಪಿಕೊಂಡಿದೆ. ಹಿಂದೂ ದೇವಸ್ಥಾನ ಅಥವಾ ಹಿಂದೂಗಳ ಧಾರ್ಮಿಕ ಕ್ಷೇತ್ರದ ಪರಿಸರಕ್ಕೆ ಅನ್ಯ ಧರ್ಮದವರು ಪ್ರವೇಶಿಸುವಂತಿಲ್ಲ ಎಂದು ಬ್ಯಾನರ್ ನಲ್ಲಿ ಬರೆಯಲಾಗಿದೆ. ಚಕರಾತಾ ರಸ್ತೆ, ಸುದೋವಾಲಾ ಮತ್ತು ಪ್ರೇಮನಗರದ ವ್ಯಾಪ್ತಿಯಲ್ಲಿ ಬ್ಯಾನರ್ ಅಳವಡಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿಯಾಗಿವೆ.
Advertisement
Advertisement
ಈ ಕುರಿತು ಪ್ರತಿಕ್ರಿಯಿಸಿರುವ ಹಿಂದೂ ಯುವ ವಾಹಿನಿಯ ಪ್ರದೇಶ ಅಧ್ಯಕ್ಷ ಗೋವಿಂದ್ ವಾದವಾ, ಅನ್ಯ ಕೋಮಿನವರು ಹಿಂದೂ ದೇವಾಲಯದೊಳಗೆ ಬಂದವರನ್ನ ಥಳಿಸಲಾಗುವುದು. ಥಳಿಸಿದ ಬಳಿಕ ಪೊಲೀಸರ ವಶಕ್ಕೆ ನೀಡಲಾಗುವುದು ಎಂದು ಹೇಳಿದ್ದಾರೆ. ಇತ್ತ ಸಾರ್ವಜನಿಕರು ಮತ್ತು ಚಿಂತಕರು, ಈ ಘಟನೆ ಹಿಂಸೆ ರೂಪ ಪಡೆದುಕೊಳ್ಳುವ ಮುನ್ನ ಪೊಲೀಸರೇ ಈ ಬ್ಯಾನರ್ ಗಳನ್ನು ತೆಗೆಯಬೇಕೆಂದು ಆಗ್ರಹಿಸಿದ್ದಾರೆ.
Advertisement
Advertisement
ದೇವಸ್ಥಾನ ಅನ್ನೋದು ಹಿಂದೂ ಧರ್ಮದ ನಂಬಿಕೆ ಮತ್ತು ಆಸ್ಮಿತೆ. ದೇವಾಲಯವನ್ನ ಧ್ಯಾನದ ಕೇಂದ್ರ ಅಂದ್ರೆ ಶಾಂತಿ ಸಿಗುವ ಸ್ಥಳ. ಹಾಗಾಗಿ ಅನ್ಯ ಧರ್ಮದವರಿಗೆ ದೇವಾಲಯದ ಪರಿಸರದಲ್ಲಿ ಏನು ಕೆಲಸ? ಧರ್ಮ ರಕ್ಷಣೆಗಾಗಿ ಈ ಕೆಲಸಕ್ಕೆ ಮುಂದಾಗಿದ್ದೇವೆ ಎಂದು ಬ್ಯಾನರ್ ಅಳವಡಿಕೆಯನ್ನ ಗೋವಿಂದ್ ವಾದವಾ ಸಮರ್ಥಿಸಿಕೊಂಡಿದ್ದಾರೆ.
ಇದು ಬಿಜೆಪಿ ಸರ್ಕಾರದ ಆಡಳಿತಕ್ಕೆ ಹಿಡಿದ ಕನ್ನಡಿ. ನಾಲ್ಕು ವರ್ಷಗಳಲ್ಲಿ ಏನು ಮಾಡದ ಕಮಲ ಸರ್ಕಾರ, ತನ್ನ ಹುಳುಕುಗಳನ್ನ ಮುಚ್ಚಿಕೊಳ್ಳಲು ಸಂಸ್ಕೃತಿಗೆ ಸಂಬಂಧಿಸಿದ ವಿವಾದಿತ ವಿಷಯಗಳನ್ನ ಮುನ್ನಲೆಗೆ ತಂದಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.