– ಮದುವೆಯಾಗುವ ಯುವಕರಿಗೂ ಖಡಕ್ ಸೂಚನೆ
ಹಾಸನ: ಕೊರೊನಾ ಬಂದು ಇಡೀ ದೇಶವೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇದರ ನಡುವೆಯೇ ಲಾಕ್ಡೌನ್ ಅವಧಿಯಲ್ಲಿ ಕೆಲವು ಪೋಷಕರು ತಮ್ಮ ಅಪ್ರಾಪ್ತ ಹೆಣ್ಣು ಮಕ್ಕಳ ಮದುವೆ ಮಾಡಿ ಮುಗಿಸಲು ತಯಾರಿ ನಡೆಸಿದ ಪ್ರಕರಣಗಳು ಹಾಸನದಲ್ಲಿ ಹೆಚ್ಚಾಗಿ ವರದಿಯಾಗಿದೆ.
ಅಪ್ರಾಪ್ತ ಯುವತಿಯರ ಮದುವೆಗೆ ಮುಂದಾಗುತ್ತಿರುವ ಯುವಕರಿಗೆ ಖಡಕ್ ಎಚ್ಚರಿಕೆ ರವಾನಿಸಲಾಗಿದೆ. ಲಾಕ್ಡೌನ್ ಆರಂಭವಾದ ನಂತರ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ನಡೆಯುತ್ತಿದ್ದ ಮದುವೆಗಳು ಕಡಿಮೆಯಾಗಿದ್ದು, ಪೋಷಕರು ಮನೆಯ ಸಮೀಪವೇ ಮದುವೆ ಮಾಡಿ ಮುಗಿಸಲು ಮುಂದಾಗುತ್ತಿದ್ದಾರೆ. ಅದರಲ್ಲೂ ಹಾಸನದಲ್ಲಿ ಕೆಲವು ಪೋಷಕರು ಲಾಕ್ಡೌನ್ ಸಮಯದಲ್ಲಿ ತಮ್ಮ ಅಪ್ರಾಪ್ತ ಹೆಣ್ಣುಮಕ್ಕಳನ್ನು ಸದ್ದಿಲ್ಲದೆ ಮದುವೆ ಮಾಡಿ ಮುಗಿಸಲು ಮುಂದಾಗಿದ್ದು ಈಗ ಅಂಕಿ ಅಂಶದಿಂದ ಬಯಲಾಗಿದೆ.
Advertisement
Advertisement
ಕಳೆದ ಏಪ್ರಿಲ್ ತಿಂಗಳಿಂದ ಜುಲೈ ತಿಂಗಳವರೆಗೆ ಇಂತಹ ಸುಮಾರು 51 ಬಾಲ್ಯವಿವಾಹ ಪ್ರಕರಣಗಳನ್ನು ಅಧಿಕಾರಿಗಳು ತಡೆದಿರುವುದು ಅಂಕಿ ಅಂಶದಿಂದ ಗೊತ್ತಾಗಿದೆ. ಲಾಕ್ಡೌನ್ ನಂತರ ಹಾಸನದಲ್ಲಿ ಬಾಲ್ಯ ವಿವಾಹ ಪ್ರಕರಣ ಹೆಚ್ಚಾಗುತ್ತಿರುವುದನ್ನು ಮನಗಂಡ ಅಧಿಕಾರಿಗಳು, ಅಪ್ರಾಪ್ತ ಬಾಲಕಿಯರ ಮದುವೆಗೆ ಮುಂದಾದ ಪೋಷಕರಿಗೆ ಕಾನೂನಿನ ಬಿಸಿ ಮುಟ್ಟಿಸಿದ್ದಾರೆ. ಅಪ್ರಾಪ್ತ ವಯಸ್ಸಿನ ಯುವತಿಯರ ಮದುವೆಗೆ ಮುಂದಾಗುತ್ತಿರುವ ಯುವಕರಿಗೆ ಕೂಡ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿ, ಬುದ್ಧಿವಾದ ಹೇಳಿದ್ದಾರೆ.
Advertisement
Advertisement
ಈ ವರ್ಷ 18 ಬಾಲ್ಯ ವಿವಾಹ ನಡೆದಿದ್ದು ಎಫ್ಐಆರ್ ದಾಖಲಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಅಷ್ಟೇ ಅಲ್ಲದೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರನ್ನು ಮದುವೆಯಾಗಿ, ಲೈಂಗಿಕ ದೌರ್ಜನ್ಯ ನೀಡಿರುವ ಮಾಹಿತಿ ಮೇಲೆ, ಈ ವರ್ಷ ಸುಮಾರು 30 ಪೋಕ್ಸೋ ಪ್ರಕರಣ ಕೂಡ ದಾಖಲಿಸಲಾಗಿದೆ.