ಬೆಂಗಳೂರು: ಬೆಂಗಳೂರು ಫೆಬ್ರವರಿ ಅಂತ್ಯದಲ್ಲಿ ಹಾವೇರಿಯಲ್ಲಿ ನಡೆಯಬೇಕಿದ್ದ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾತ್ಕಾಲಿಕವಾಗಿ ರಾಜ್ಯ ಸರ್ಕಾರ ಮುಂದೂಡಿದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕøತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
Advertisement
ಇಂದು ಈ ಸಂಬಂಧ ವಿಧಾನಸೌಧ ಸಮಿತಿ ಕೊಠಡಿಯಲ್ಲಿ ನಡೆದ ಸಭೆಯ ನಂತರ ಅವರು ಈ ವಿಚಾರ ಪ್ರಕಟಿಸಿದ್ದಾರೆ. ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ನಡೆದ ಸಿದ್ದತೆಗಳು ಇನ್ನೂ ಅಪೂರ್ಣವಾಗಿದೆ ಜೊತೆಗೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವುದರಿಂದ ಕೋವಿಡ್ ನಿಯಮಗಳ ಪಾಲನೆಯು ಕಷ್ಟ ಕರವಾಗುತ್ತದೆ. ಫೆಬ್ರವರಿ ಅಂತ್ಯಕ್ಕೆ ಹೊಸ ಕೋವಿಡ್ ಮಾರ್ಗಸೂಚಿ ಪ್ರಕಟವಾಗುವ ನಿರೀಕ್ಷೆಯಿರುವುದರಿಂದ ಅನಂತರ ಮಾರ್ಚ್ 9ಕ್ಕೆ ಮತ್ತೊಂದು ಸಭೆ ನಡೆಸಿ ಸಮ್ಮೇಳನ ನಡೆಸುವ ದಿನಾಂಕ ನಿರ್ಧರಿಸಲಾಗುವುದು ಎಂದು ಹೇಳಿದರು.
Advertisement
Advertisement
ಸಭೆಯಲ್ಲಿ ಗೃಹ ಹಾಗೂ ಸಂಸದೀಯ ಸಚಿವ ಬಸವರಾಜ್ ಬೊಮ್ಮಾಯಿ, ಕೃಷಿ ಸಚಿವ ಬಿ.ಸಿ.ಪಾಟೀಲ್ ಹಾಗೂ ತೋಟಗಾರಿಕಾ ಸಚಿವ ಆರ್.ಶಂಕರ್, ಶಾಸಕ ನೆಹರು ಓಲೇಕಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮನು ಬಾಳಿಗಾರ್ ಹಾಗೂ ಹಾವೇರಿ ಜಿಲ್ಲಾಡಳಿತದ ಅಧಿಕಾರಿಗಳು ಭಾಗವಹಿಸಿದರು.