– ಸುಕೇಶ್ ಡಿ.ಎಚ್
ಅದು ನನ್ನ ಪತ್ರಿಕೋದ್ಯಮದ ಆರಂಭದ ದಿನಗಳು. ಒಂದಷ್ಟು ದಿನಗಳ ಟ್ರೈನಿಂಗ್ ಮುಗಿಸಿ ವರದಿಗಾರನಾಗಿ ಫೀಲ್ಡಿಗೆ ಇಳಿದಿದ್ದೆ. ಹಿರಿಯರ ಜೊತೆ ಹೋಗಿ ವರದಿಗಾರಿಕೆಯ ಅ ಆ ಇ ಈ ಕಲಿಯುತ್ತಿದ್ದ ನಾನು. ಹಿರಿಯ ವರದಿಗಾರರೊಬ್ಬರ ಜೊತೆ ಹೋಗಿ ಅಂದಿನ ಅಸೈನ್ ಮೆಂಟ್ ಮುಗಿಸಿಕೊಂಡು ಬಂದು ಆಫೀಸ್ನಲ್ಲಿ ಕುಳಿತಿದ್ದೆ. ನನ್ನ ಸೀನಿಯರ್ ಬಂದು ಎಂ.ಜಿ.ರೋಡ್ಗೆ ಹೋಗಿ, ದೊರೆಸ್ವಾಮಿ ಮಾತಾಡ್ತಾರೆ ಅಂದಿದ್ದರು. ಯಾವ ದೊರೆಸ್ವಾಮಿ….? ಏನು ಮಾತು..? ಒಂದೂ ಅರ್ಥವಾಗದೆ ಕ್ಯಾಮರಾಮನ್ ಜೊತೆ ಎಂ.ಜಿ.ರಸ್ತೆ ಗಾಂಧಿ ಪ್ರತಿಮೆ ತಲುಪಿದ್ದೆ. ಕೃಶ ಕಾಯದ ಹಿರಿಯ ಜೀವ ಎಂ.ಜಿ.ರಸ್ತೆಯ ಗಾಂಧಿ ಪ್ರತಿಮೆ ಮುಂದೆ ಕುರ್ಚಿ ಹಾಕಿಕೊಂಡು ಕೂತಿದ್ದರು. ಹೆಗಲ ಮೇಲೆ ಹಸಿರು ಟವೆಲ್, ಸುತ್ತಲು ರೈತರ ಗುಂಪು. 2008ರಲ್ಲಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಸರ್ಕಾರ ಎರಡೇ ದಿನದಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿ ವಿವಾದ ಮಾಡಿಕೊಂಡಿತ್ತು. ಅದರ ಮುಂದುವರಿದ ಭಾಗವಾಗಿ ಎಂಜಿ ರಸ್ತೆಯ ಗಾಂಧಿ ಪ್ರತಿಮೆ ಬಳಿ ರೈತರ ಜೊತೆ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಧರಣಿ ನಡೆಸುತ್ತಿದ್ದರು. ಒಬ್ಬ ವರದಿಗಾರನಾಗಿ ವೈಯುಕ್ತಿಕವಾಗಿ ನನಗೆ ಅದು ಮೊದಲ ಅಸೈನ್ಮೆಂಟ್ ಆಗಿತ್ತು. ಸಹಜವಾದ ಕುತೂಹಲದಲ್ಲಿ ಒಂದಷ್ಟು ಮಾಹಿತಿ ರೈತರಿಂದ ಕೇಳಿ ಪಡೆಯತೊಡಗಿದೆ. ನಾನು ಪ್ರಶ್ನೆ ಕೇಳಿ ಮಾಹಿತಿ ಪಡೆಯುವ ರೀತಿ ನನ್ನ ದಡ್ಡತನ ನೋಡಿ ಕುಳಿತಲ್ಲೇ ನಕ್ಕು ಸುಮ್ಮನಾಗಿದ್ದರು ದೊರೆ ಸ್ವಾಮಿ.
Advertisement
Advertisement
ಅಷ್ಟರಲ್ಲಿ ಬಂದಿತ್ತು ಸಚಿವರ ಗೂಟದ ಕಾರು. ಅಂದಿನ ಸರ್ಕಾರದ ಪವರ್ ಫುಲ್ ಮಿನಿಸ್ಟರ್ ಶೋಭಾ ಕರಂದ್ಲಾಜೆ ಧರಣಿ ನಿರತರನ್ನ ಸಮಾಧಾನ ಪಡಿಸಿ ಸರ್ಕಾರದ ಪರವಾಗಿ ಮನವೊಲಿಸಲು ಅಲ್ಲಿಗೆ ಬಂದಿದ್ದರು. ಅವರ ಮನವೊಲಿಕೆಯ ಪ್ರಯತ್ನಕ್ಕೆ ರೈತರು ಒಪ್ಪಿಕೊಳ್ಳುವ ಲಕ್ಷಣ ಕಾಣಿಸತೊಡಗಿತ್ತು. ಅಷ್ಟರಲ್ಲಿ ಕೈಗೆ ಮೈಕು ತಗೆದುಕೊಂಡ ಶೋಭಾ ಕರಂದ್ಲಾಜೆ ಸರ್ಕಾರದ 2 ತಿಂಗಳ ಸಾಧನೆಯ ರಾಜಕೀಯ ಭಾಷಣ ಆರಂಭಿಸಿದರು. ಮಧ್ಯದಲ್ಲಿ ನಮ್ಮ ಸರ್ಕಾರ ಬೆದರಿಕೆಗೆಲ್ಲಾ ಬಗ್ಗಲ್ಲ, ಯಾರು ಸಹಾ ರೈತರ ಹೆಸರಲ್ಲಿ ರಾಜಕಾರಣ ಮಾಡಬಾರದು ಅಂತ ರಾಜಕೀಯ ಡೈಲಾಗ್ ಹೊಡೆದೇಬಿಟ್ಟರು. ಆಗ ಕೇಳಿ ಬಂತು ನೋಡಿ ನಿಲ್ಲಿಸಮ್ಮ ನಿನ್ನ ಭಾಷಣ ಅನ್ನೋ ಧ್ವನಿ. ಅದುವರೆಗೆ ಸಚಿವರ ಮಾತಿಗೆ ತಲೆ ಆಡಿಸುತ್ತ ಸುಮ್ಮನೆ ಕುಳಿತಿದ್ದ ಹಿರಿಯ ಜೀವಿ ದೊರೆಸ್ವಾಮಿ ಸಿಟ್ಟಿನಿಂದ ಗುಡುಗತೊಡಗಿದರು. ರೈತರ ಹೆಸರಲ್ಲಿ ಯಾರು ರಾಜಕಾರಣ ಮಾಡ್ತಿದಾರೆ..? ಮೊದಲು ಆ ಮಾತು ವಾಪಾಸ್ ತಗೋಳಿ, ಕ್ಷಮೆ ಕೇಳಬೇಕು ನೀವು ಅಂತ ಗುಡುಗಿದ್ದರು. ಸ್ವತಂತ್ರ ಸೇನಾನಿಯ ಕೋಪ ಕಂಡು ಸಚಿವೆ ಶೋಭಾ ಕರಂದ್ಲಾಜೆ ಅಕ್ಷರಶಃ ಬೆಚ್ಚಿ ಬಿದ್ದರು. ಸಮಜಾಯಿಷಿ ಕೊಡಲು ಮುಂದಾದ ಶೋಭಾ ಕರಂದ್ಲಾಜೆಗೆ ಮಾತನಾಡಲು ಬಿಡದೆ ಕ್ಷಮೆ ಕೇಳಿ ಅಂತ ಪಟ್ಟು ಹಿಡಿದು ಬಿಟ್ಟರು. ಮುಂದಿನ 5 ನಿಮಿಷ ನಡೆದ ಅಷ್ಟು ಘಟನೆ ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ನಾನು ಸಚಿವೆ ಇವರ ಮುಂದೆ ಕ್ಷಮೆ ಕೇಳೋದ..? ಅನ್ನೋ ರೀತಿ ವರ್ತಿಸಿದ್ದರು ಶೋಭಾ ಕರಂದ್ಲಾಜೆ. ಕ್ಷಮೆ ಕೇಳಿ ಮಾತು ವಾಪಸ್ ತೆಗೆದುಕೊಳ್ಳುವವರೆಗೆ ನೀವು ಮಾತನಾಡುವುದು ಬೇಡ ಇಲ್ಲಿಂದ ಹೊರಡಲು ನಾವು ಬಿಡಲ್ಲ ಅಂತ ದೊರೆಸ್ವಾಮಿ ಪಟ್ಟು ಹಿಡಿದು ಬಿಟ್ಟರು. ಮನವೊಲಿಸಲು ಮುಂದಾದ ಶೋಭಾ ಕರಂದ್ಲಾಜೆ ಪರಿಪರಿಯಾಗಿ ಕೇಳಿಕೊಂಡರು. ದೊರೆ ಸ್ವಾಮಿ ಹಾಗೂ ರೈತರ ಮುಂದೆ ಪೇಚಿಗೆ ಸಿಲುಕಿದ್ದ ಸಚಿವೆ ಅಸಾಹಯಕತೆಯಿಂದ ಕಣ್ಣೀರು ಹಾಕತೊಡಗಿದರು. ಕೊನೆಗೂ ಕ್ಷಮೆ ಕೇಳಿ ಕಣ್ಣೀರು ಒರೆಸಿಕೊಂಡು ಹೊರಟು ಹೋಗಿದ್ದರು. ಅಷ್ಟೊತ್ತು ಬೆಕ್ಕಸ ಬೆರಗಾಗಿ ಅಷ್ಟು ಘಟನೆಯನ್ನ ಕಣ್ಣು ತುಂಬಿಕೊಂಡಿದ್ದ ನನಗೆ ಒಳಗಿದ್ದ ವರದಿಗಾರ ಜಾಗೃತನಾಗಿದ್ದ. ನನ್ನ ಮೊದಲ ಅಸೈನ್ಮೆಂಟ್ನಲ್ಲಿ ಸಚಿವೆ ಕಣ್ಣೀರಿಟ್ಟ ಎಕ್ಸ್ಕ್ಲೂಸಿವ್ ಸುದ್ದಿ. ಆಗಿನ್ನು ವಾಟ್ಸಪ್ ಬಂದಿರಲಿಲ್ಲ ನಡೆದ ಅಷ್ಟು ಘಟನೆ ಟೆಕ್ಸ್ಟ್ ಮೆಸೆಜನನ್ನ ಕಚೇರಿಗೆ ಟೈಪ್ ಮಾಡತೊಡಗಿದ್ದೆ. ಅದೇ ಜೋಶ್ ನಲ್ಲಿ ಹಿಂದೆ ತಿರುಗಿ ನೋಡ್ತೋನಿ ನನ್ನ ಜೊತೆಗೆ ಬಂದಿದ್ದ ಕ್ಯಾಮರಾಮೆನ್ ನಾಪತ್ತೆ. ಗಾಬರಿಯಲ್ಲಿ ಕರೆ ಮಾಡಿದರೆ ಕಾಲ್ ವೈಟಿಂಗ್. 3-4 ನಿಮಿಷ ಬಿಟ್ಟು ಬಂದ ಆ ಸೀನಿಯರ್ ಕ್ಯಾಮರಾಮೆನ್ ಏನ್ರಿ ಅಂದಿದ್ದರು. ಏನಾ..? ಕಳೆದ 8-10 ನಿಮಿಷದ ಆ ಘಟನೆ ದೊಡ್ಡ ಸುದ್ದಿ ಅಲ್ವಾ ನಮ್ಮದೊಂದೇ ಕ್ಯಾಮರಾ ಇದ್ದಿದ್ದು. ಎಕ್ಸ್ ಕ್ಲೂಸಿವ್ ಸುದ್ದಿ ದೊರೆಸ್ವಾಮಿ ಬೈದಿದ್ದು, ಶೋಭಾ ಕರಂದ್ಲಾಜೆ ಅತ್ತಿದ್ದು…. ಅಂದೆ.
Advertisement
Advertisement
ಹೌದಾ ಶೋಭಾ ಕರಂದ್ಲಾಜೆ ಬಂದಿದ್ದರಾ…? ಸೀನಿಯರ್ ಕ್ಯಾಮರಾಮೆನ್ ಮಾತು ಕೇಳಿ ನಾನು ಗಾಬರಿ. ನನಗೆ ಅವಾಗಲೇ ಯಾವುದೋ ಕಾಲ್ ಬಂತು ನಾನು ಮಾತನಾಡಿಕೊಂಡು ಚಿನ್ನಸ್ವಾಮಿ ಸ್ಟೇಡಿಯಂ ಕಡೆ ಹೋಗಿದ್ದೆ ಅಂದು ಬಿಡಬೇಕಾ ಪಾರ್ಟಿ. ನನ್ನ ಪತ್ರಿಕೋದ್ಯಮದ ಮೊದಲ ವರದಿಯ ಮೊದಲ ಎಕ್ಸ್ ಕ್ಲೂಸಿವ್ ಸುದ್ದಿ ಅಲ್ಲೇ ಮುಗಿದು ಹೋಗಿತ್ತು. ಯಾರಿಗೂ ಹೇಳಬೇಡಿ ಆಫೀಸಲ್ಲಿ ಗೊತ್ತಾದರೆ ಇಬ್ಬರಿಗೆ ಸಮಸ್ಯೆ ಅಂತ ಸೀನಿಯರ್ ಕ್ಯಾಮರಾಮೆನ್ ಮಾತಿಗೆ ನಾನು ಸೈಲೆಂಟಾಗಲೇಬೇಕಾಯ್ತು. ದೊರೆಸ್ವಾಮಿ ಆ ಕ್ಷಣಕ್ಕೆ ನನಗೆ ಹೀರೋ ಆಗಿ ಕಂಡಿದ್ದರು. ಸರ್ಕಾರದ ಪವರ್ಫುಲ್ ಸಚಿವೆ ಅತ್ತುಕರೆದು ಕ್ಷಮೆ ಕೇಳುವಂತೆ ಮಾಡಿದ್ದ ಅವರ ಮಾತು, ವರ್ತನೆ ಸಹಜವಾಗಿಯೇ ದೊರೆಸ್ವಾಮಿ ನನಗೆ ಹೀರೊ ಆಗಿ ಕಾಣತೊಡಗಿದ್ದರು. ಆ ನಂತರ ಸಾಕಷ್ಟು ಬಾರಿ ಬೇರೆ ಬೇರೆ ಕಾರ್ಯಕ್ರಮದಲ್ಲಿ ಅವರನ್ನ ಭೇಟಿಯಾಗಿದ್ದೆ ಮಾತನಾಡಿಸಿದ್ದೆ. ಎಲ್ಲ ಸಂದರ್ಭದಲ್ಲೂ ಒಂದೇ ರೀತಿಯ ನಗು. ತೆಳ್ಳನೆಯ ಕೈಗಳನ್ನ ಮುಂದಕ್ಕೆ ಚಾಚಿ ಶೇಕ್ ಹ್ಯಾಂಡ್ ಮಾಡಿದರೆ ಏನೋ ಒಂದು ರೀತಿಯ ವಾತ್ಸಲ್ಯವಿರುತ್ತಿತ್ತು.
ಹೋರಾಟದ ಪ್ರವೃತ್ತಿಯ ದೊರೆಸ್ವಾಮಿ ತಮ್ಮ 100ನೇ ವಯಸ್ಸಿನಲ್ಲೂ ವ್ಯವಸ್ಥೆಯ ವಿರುದ್ದ ಧ್ವನಿ ಎತ್ತುವ ತಮ್ಮ ನಿಲುವನ್ನ ಬದಲಿಸಲಿಲ್ಲ. ಆದರೆ ಅವರ ಸಾವಿನ ಸುದ್ದಿ ಕೇಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ಯುವಕ ಯುವತಿಯರ ವಿಕೃತಿ ಮುಗಿಲು ಮುಟ್ಟಿತ್ತು. ಹೋದೆಯಾ ಮತ್ತೆ ಯಾವತ್ತು ಈ ದೇಶದಲ್ಲಿ ಹುಟ್ಟಿ ಬರಬೇಡ ದೇಶದ್ರೋಹಿ ಅಂತ ತಲೆ ಬುಡವಿಲ್ಲದೆ ತಮ್ಮ ವಿಕೃತಿಯನ್ನ ಕಾರಿಕೊಂಡಿದ್ದಾರೆ. ಹಿರಿಯ ಮರ ಎಡಕ್ಕೆ ಬಿತ್ತಾ…? ಬಲಕ್ಕೆ ಬೀಳೋ ಚಾನ್ಸೆ ಇಲ್ಲ. ಪಾಪಿ, ದೇಶದ್ರೋಹಿ, ಧರ್ಮ ದ್ರೋಹಿ ಒಂದಾ..? ಎರಡಾ…?ಯುವಕ ಯುವತಿಯರ ಫೇಸ್ಬುಕ್ ಹಾಗೂ ವಾಟ್ಸಪ್ ಯುನಿವರ್ಸಿಟಿಯ ಅಷ್ಟು ಅಜ್ಞಾನ ಹಾಗೂ ವಿಕೃತಿ ಎಲ್ಲವು ಸಾಮಾಜಿಕ ಜಾಲತಾಣದಲ್ಲಿ ಇನ್ನಿಲ್ಲದಂತೆ ತನ್ನ ವಿಕೃತಿಯನ್ನು ಮೆರೆದಿತ್ತು.
104 ವರ್ಷಗಳ ತುಂಬು ಜೀವನ ನಡೆಸಿದ ಹೆಚ್.ಎಸ್.ದೊರೆಸ್ವಾಮಿ. ಈಗಿನ ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನವರು. ಹಾರೋಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿ ಶುದ್ಧ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರು. ತಮ್ಮ 5ನೇ ವಯಸ್ಸಿನೊಳಗೆ ತಂದೆ ತಾಯಿ ಇಬ್ಬರನ್ನು ಕಳೆದುಕೊಂಡಿದ್ದರು. ಅಜ್ಜ ಶಾನುಭೋಗ ಶಾಮಣ್ಣರ ಗರಡಿಯಲ್ಲಿ ಬೆಳೆದ ದೊರೆಸ್ವಾಮಿವರಿಗೆ ಶಾನುಭೋಗಿಕೆಯ ಗತ್ತು ಇರಲಿಲ್ಲ, ಬ್ರಾಹ್ಮಣ್ಯದ ಮಡಿವಂತಿಕೆಯು ಇರಲಿಲ್ಲ. ಎಲ್ಲರೊಳಗೊಂದಾಗು ಮಂಕುತಿಮ್ಮ ಎಂಬಂತೆ ಬೆರೆತು ಬೆಳೆದವರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಹಿರಿಯರ ಬಗ್ಗೆ ಮಾತನಾಡುವ ಅರ್ಹತೆ ನಮ್ಮಂತವರಿಗೆ ಖಂಡಿತ ಇಲ್ಲ. ಅವರ ಪರಿಶ್ರಮ, ತ್ಯಾಗ, ಬಲಿದಾನದ ಫಲವೇ ಇವತ್ತಿನ ನಮ್ಮ ಸ್ವೇಚ್ಛೆ ದೊರೆಸ್ವಾಮಿ ಅಂದಿನ ಬ್ರಿಟಿಷ್ ಸರ್ಕಾರದ ದಾಖಲೆಗಳಿದ್ದ ರೆಕಾರ್ಡ್ ರೂಂಗೆ ಟೈಂ ಬಾಂಬ್ ಇಟ್ಟು ಸ್ಫೋಟಿಸಿದ್ದರಂತೆ. ಇಲಿಯ ಬಾಲಕ್ಕೆ ಬಾಂಬು ಕಟ್ಟಿ ಸ್ಫೋಟಿಸಿದ್ದರಂತೆ. ರಾಗಿ ಚೆಲ್ಲಿ ಚಳುವಳಿಯಲ್ಲಿ ಭಾಗವಹಿಸಿದ್ದರಂತೆ ಅನ್ನೋ ವಾದ ಪ್ರತಿವಾದ ಕಳೆದ 2 ವರ್ಷದಲ್ಲಿ ಬಾರಿ ಸದ್ದು ಮಾಡಿತ್ತು. ಸಿಎಎ, ಎನ್.ಆರ್.ಸಿ ಹೋರಾಟದ ಪರವಹಿಸಿ ಹೆಚ್.ಎಸ್.ದೊರೆಸ್ವಾಮಿ ಮಾತನಾಡಿದ್ದರು ಅನ್ನೋದೆ ವಿವಾದದ ಮೂಲ. ಆಗಲೇ ನೋಡಿ ಶುರುವಾಗಿದ್ದು ದೊರೆಸ್ವಾಮಿ ಸ್ವತಂತ್ರ ಹೋರಾಟಗಾರರಲ್ಲ, ನಕಲಿ ಹೋರಾಟಗಾರ, ಅವರಿಗೆ 100 ವರ್ಷ ಆಗಿದೆ ಅನ್ನೋ ದಾಖಲೆ ಎಲ್ಲಿದೆ..? ಸ್ವತಂತ್ರ ಹೋರಾಟಗಾರ ಅನ್ನೋಕೆ ಏನು ಪ್ರೂಫಿದೆ…? ಒಂದಾ..? ಎರಡಾ..? ಅವರ ವಿರುದ್ಧದ ಅಪಪ್ರಚಾರ. ಒಂದಂತೂ ಸ್ಪಷ್ಟ ಹೆಚ್.ಎಸ್.ದೊರೆಸ್ವಾಮಿ 104 ವರ್ಷ ಬದುಕಿದ್ದರು. ಸೋಶಿಯಲ್ ಮೀಡಿಯಾ ಯುನಿವರ್ಸಿಟಿಯ ದಡ್ಡರು ಹೆಚ್ಚೆಂದರೆ 10 ವರ್ಷದ ಎಳಸುಗಳು. ಇವರಿಗೆ ಈಗ ದೊರೆಸ್ವಾಮಿ ಬಗ್ಗೆ ಅನುಮಾನ ಬಂದರೆ ಅದು ಇವರ ಅವಿವೇಕಿತನ ಹೊರತು ದೊರೆಸ್ವಾಮಿಯವರ ತಪ್ಪಲ್ಲ. 90 ವರ್ಷ ಕಾಲ ಸ್ವತಂತ್ರ ಹೋರಾಟಗಾರರಾಗಿದ್ದ ಯಾರು ಪ್ರಶ್ನಿಸದ ದೊರೆಸ್ವಾಮಿಯವರ ಬಗ್ಗೆ 10 ವರ್ಷದ ಎಳಸುಗಳು ಬಾಯಿಗೆ ಬಂದಂತೆ ಕಾಮೆಂಟ್ ಮಾಡಿದ್ದು ನಿಜಕ್ಕೂ ದುರಂತ.
ಸ್ವತಂತ್ರ ಸೇನಾನಿ ತಮ್ಮ ಸ್ವತಂತ್ರ ಹೋರಾಟದ ಸಾಕ್ಷ್ಯವನ್ನ ಈ ಇಳಿವಯಸ್ಸಿನಲ್ಲಿ ಯಾರಿಗೂ ತೋರಿಸಬೇಕಿರಲಿಲ್ಲ. ಅವರ ಜೀವನ ಅವರು ಬದುಕಿದ ರೀತಿಯೆ ಅವರ ಬಗ್ಗೆ ಟೀಕೆ ಮಾಡಿದವರಿಗೆ ಉತ್ತರ. ನಾನೊಬ್ಬ ಸ್ವತಂತ್ರ ಹೋರಾಟಗಾರ ಅಂತ ಎಲ್ಲೂ ಲಾಬಿ ಮಾಡಲಿಲ್ಲ. ಬಿಡಿಎ ಸೈಟಿಗೆ ಅರ್ಜಿ ಹಾಕಲಿಲ್ಲ. ಸಾಯುವವರೆಗೆ ಬಾಡಿಗೆ ಮನೆಯಲ್ಲೆ ಬದುಕಿದ ಬಡಜೀವ ಅದು. ಸ್ವಂತದ್ದೊಂದು ಕಾರು ಇಲ್ಲದೆ ಬಿಎಂಟಿಸಿ ಬಸ್ಸಿನಲ್ಲಿ ತಮ್ಮ 100 ನೇ ವಯಸ್ಸಿನಲ್ಲೂ ಓಡಾಡುತ್ತಿದ್ದ ಆದರ್ಶ ಪುರುಷ ಹೆಚ್.ಎಸ್.ದೊರೆಸ್ವಾಮಿ. 1947ಕ್ಕೂ ಮೊದಲೇ ಸ್ವತಂತ್ರ ಹೋರಾಟ ನಡೆಸಿದ ಪುಣ್ಯಾತ್ಮನಿಂದ 2021ರಲ್ಲಿ ನೈತಿಕತೆ ಮೀರಿ ಇನ್ನೇನು ನಿರೀಕ್ಷಿಸಲು ಸಾಧ್ಯ…?
ಅವರು ಯಾವುದೇ ತತ್ವ ಸಿದ್ಧಾಂತಕ್ಕೆ ಕಟ್ಟು ಬಿದ್ದವರಲ್ಲ. ನ್ಯಾಯ, ನೀತಿ, ಸತ್ಯ, ಧರ್ಮ, ಪ್ರಾಮಾಣಿಕತೆ ಎಂದು ಕಡೆಯವರೆಗೆ ಬದುಕಿದ ಪ್ರಾಮಾಣಿಕ ವ್ಯಕ್ತಿತ್ವ ದೊರೆಸ್ವಾಮಿಯವರದು. ಮುಲಾಜಿಲ್ಲದೆ ಸರ್ಕಾರವನ್ನು ಮುಖ್ಯಮಂತ್ರಿಗಳನ್ನು, ಸಚಿವರನ್ನು ಬಹಿರಂಗವಾಗಿ ಟೀಕಿಸಿದವರು ದೊರೆಸ್ವಾಮಿ. ರಾಜ್ಯದ ಸಾಕ್ಷಿ ಪ್ರಜ್ಞೆಯಂತೆ ಬಾಳಿ ಬದುಕಿದವರು ದೊರೆಸ್ವಾಮಿ. ಕನಕಪುರದವರಾದರೂ ಮುಲಾಜಿಲ್ಲದೆ ಡಿ.ಕೆ.ಶಿವಕುಮಾರ್ ಅವರನ್ನು ಹಿಗ್ಗಾಮುಗ್ಗಾ ಟೀಕಿಸಿದ್ದರು. ಸಿದ್ದರಾಮಯ್ಯ ಆಪ್ತರಾಗಿದ್ದರೂ ಮುಖ್ಯಮಂತ್ರಿಯಾಗಿದ್ದಾಗಲೇ ಅವರ ಸರ್ಕಾರದ ಕೆಲವು ತೀರ್ಮಾನಗಳ ವಿರುದ್ಧ ಮುಲಾಜಿಲ್ಲದೇ ಜಾಡಿಸಿದ್ದರು. ಇದನ್ನೂ ಓದಿ: ನನಗೆ 104 ವಯಸ್ಸು, ಹಾಸಿಗೆ ವೇಸ್ಟ್ ಮಾಡ್ಬೇಡಿ, ಯುವಕರಿಗೆ ನೀಡಿ ಅಂತಿದ್ರು- ದೊರೆಸ್ವಾಮಿ ಬಗ್ಗೆ ಡಾ.ಮಂಜುನಾಥ್ ಮಾತು
ದೊರೆಸ್ವಾಮಿಯವರ ಬಗ್ಗೆ ತಿಳಿಯಬೇಕಾದ್ದು ಸಾಕಷ್ಟಿದೆ. ಸ್ವತಂತ್ರ ಹೋರಾಟಗಾರ ಅನ್ನೋ ಕಾರಣಕ್ಕೆ ಚುನಾವಣೆಗೆ ನಿಂತು ಗೆದ್ದು ಅಧಿಕಾರ ಅನುಭವಿಸಿದವರು ಸಾಕಷ್ಟು ಜನರಿದ್ದಾರೆ. ನಮ್ಮ ಅಪ್ಪ ಫ್ರೀಡಂ ಫೈಟರ್, ನಮ್ಮ ಅಜ್ಜ ಫ್ರೀಡಂ ಫೈಟರ್ ಎಂದುಕೊಂಡೇ ರಾಜಕೀಯ ಬೇಳೆ ಬೇಯಿಸಿಕೊಂಡ ಸಾಕಷ್ಟು ಜನರು ಈಗಲೂ ಇದ್ದಾರೆ. ಆದರೆ ತಮ್ಮ ಸ್ವತಂತ್ರ ಹೋರಾಟದ ನೇಮ್ ಪ್ಲೇಟ್ ಎಲ್ಲೂ ಬಳಸದ ಸಾತ್ವಿಕ ಮನುಷ್ಯ ದೊರೆಸ್ವಾಮಿ.
ಸ್ವತಂತ್ರ ಪೂರ್ವದ ಕನ್ನಡದ ಜನಪ್ರಿಯ ಪತ್ರಿಕೆ ಪೌರವಾಣಿ ವರದಿಗಾರರಾಗಿ ಜನಪ್ರಿಯರಾಗಿದ್ದರು. 1942ರಲ್ಲಿ ಬೆಂಗಳೂರಿನ ಪ್ರೌಢಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ದೊರಸ್ವಾಮಿಯವರು ಅದೇ ವರ್ಷ ಆಗಸ್ಟ್ ನಲ್ಲಿ ಆರಂಭವಾದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಕಾರ್ಮಿಕ ಹೋರಾಟದಲ್ಲೂ ಸಕ್ರಿಯವಾಗಿದ್ದರು. ಆದರೆ ಎಂದೂ ತಮ್ಮ ಸ್ವತಂತ್ರ ಹೋರಾಟದ ಬ್ಯಾಡ್ಜನ್ನು ಸ್ವಾರ್ಥಕ್ಕೆ ಬಳಸಲಿಲ್ಲ. ಸಹೋದರ ಸೀತಾರಾಂ ಬೆಂಗಳೂರು ಮೇಯರ್ ಆದರೂ ದೊರೆಸ್ವಾಮಿಯವರು ಎಂದೂ ರಾಜಕೀಯ ರಾಡಿಯಲ್ಲಿ ಕಾಲಿಟ್ಟವರಲ್ಲ. ದೊರೆಸ್ವಾಮಿವರನ್ನ ಏನಾದರೂ ಮಾಡಿ ಶಾಸನಸಭೆಗೆ ತರಬೇಕು ಅಂತ ಒಬ್ಬರಲ್ಲ ನಾಲ್ಕು ಜನ ಮುಖ್ಯಮಂತ್ರಿಗಳು ಪ್ರಯತ್ನಿಸಿ ಸೋತಿದ್ದರು. ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಶತಾಯಗತಾಯ ದೊರೆಸ್ವಾಮಿಯವರನ್ನ ಎಂಎಲ್ಸಿ ಮಾಡುವ ಮಾತನಾಡಿದ್ದರು. ಆದರೆ ಒಂದು ಕಂಡೀಷನ್ ಹಾಕಿ ಎಂಥದ್ದೇ ಸಂದರ್ಭ ಬಂದರೂ ನನ್ನ ಪರವಾದ ಧ್ವನಿಯಾಗಿರಬೇಕು ಎಂದಿದ್ದರಂತೆ. ಒಂದು ಹಂತದಲ್ಲಿ ಮುಖ್ಯಮಂತ್ರಿಗಳ ಮಾತಿಗೆ ಒಪ್ಪಿದ್ದ ದೊರೆಸ್ವಾಮಿಯವರು ಯಾವಾಗ ವ್ಯಕ್ತಿಗತವಾಗಿ ನನ್ನ ಪರ ಇರಬೇಕು ಎಂದರೋ ಆಗಲೆ ಬಿಲ್ಕುಲ್ ನನಗೆ ಎಂಎಲ್ಸಿ ಸ್ಥಾನ ಬೇಡವೇ ಬೇಡ ಎಂದು ಕಡ್ಡಿ ಮುರಿದಂತೆ ಹೇಳಿದ್ದರು. ಆನಂತರ ನಿಜಲಿಂಗಪ್ಪ, ರಾಮಕೃಷ್ಣ ಹೆಗ್ಗಡೆ, ದೇವೇಗೌಡರು ಎಲ್ಲರೂ ದೊರೆಸ್ವಾಮಿಯವರನ್ನ ಶಾಸನ ಸಭೆಗೆ ಕರೆತರುವ ಪ್ರಯತ್ನ ಮಾಡಿ ಸೋತಿದ್ದರು.
ದೊರೆಸ್ವಾಮಿಯವರ ಪರ ವಿರೋಧ ವಾದ ಏನೇ ಇರಲಿ ಆದರೆ 100 ವರ್ಷದ ತುಂಬು ಜೀವನ ನಡೆಸಿದ ಸ್ವತಂತ್ರ ಸೇನಾನಿಯನ್ನ ಇಂದಿನ ರಾಜಕೀಯ ಲೆಕ್ಕಾಚಾರದ ತಕ್ಕಡಿಯಲ್ಲಿಟ್ಟು ತೂಗುವುದು ಮೂರ್ಖತನ. ಅವರ ಸ್ವಾಭಿಮಾನದ ಬದುಕಿಗೊಂದು ಚಿಕ್ಕ ಸ್ಯಾಂಪಲ್. ತಮ್ಮ 100 ನೇ ವಯಸ್ಸಿನಲ್ಲು ಬಾಡಿಗೆ ಮನೆಯಲ್ಲಿಯೇ ಬದುಕುತ್ತಿದ್ದ ದೊರೆಸ್ವಾಮಿ ಯವರಿಗೆ ಒಂದು ನಿವೇಶನ ಕೊಡುವ, ಸ್ವಂತದ್ದೊಂದು ಸೂರು ಮಾಡಿಕೊಳ್ಳಿ ಅನ್ನುವ ಧೈರ್ಯ ಯಾವ ಮುಖ್ಯಮಂತ್ರಿಗಳಿಗೂ ಬರಲಿಲ್ಲ. ಸಿದ್ದರಾಮಯ್ಯ ಒಂದು ಹಂತದಲ್ಲಿ ತಮ್ಮ ವಿಜಯನಗರ ನಿವಾಸದ ಪಕ್ಕದ ಮನೆಯೊಂದನ್ನ ದೊರೆಸ್ವಾಮಿಯವರಿಗೆ ಕೊಡಿಸಲು ಮುಂದಾಗಿದ್ದರು. ಅವರು ಇರುವಷ್ಟು ದಿನ ಆ ಮನೆಯಲ್ಲಿ ಇರಲಿ ಯಾಕೆ ಬಾಡಿಗೆ ಮನೆಯಲ್ಲಿ ಇರಬೇಕು ಎಂದು ತಮ್ಮ ಆಪ್ತರ ಮೂಲಕ ದೊರೆಸ್ವಾಮಿಯವರ ಪತ್ನಿಗೆ ಹೇಳಿಸಿದ್ದರು. ದೊರೆಸ್ವಾಮಿಯವರ ಪತ್ನಿ ಈ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಕೋಪಗೊಂಡ ದೊರೆಸ್ವಾಮಿಯವರು ನೀನು ಬೇಕಾದರೆ ಹೋಗು, ಅಂತಹ ಪರಿಸ್ಥಿತಿ ಬಂದರೆ ನಾನು ಗಾಂಧಿ ಭವನದಲ್ಲಿ ಇರುತ್ತೇನೆ ಎಂದಿದ್ದರು. ಹೀಗೆ ಸ್ವಾಭಿಮಾನದ ಬದಕು ಸವೆಸಿದ ದೊರೆಸ್ವಾಮಿ ಹೊರಟು ಹೋಗಿದ್ದಾರೆ. ಅಂತವರ ಸಾವನ್ನು ಸಂಭ್ರಮಿಸುವ ಸಣ್ಣತನ ನಿಜಕ್ಕೂ ದುರಂತ. ಇದ್ದಷ್ಟು ದಿನ ನ್ಯಾಯ, ನೀತಿ, ಪ್ರಾಮಾಣಿಕತೆ ಎಂದೇ ಬದುಕಿದ ಕಿರಿಯರನ್ನು ಹರಸಿದ ಹಿರಿಯ ಜೀವ ನಮ್ಮನ್ನ ಅಗಲಿದೆ. ಹರಸಿ ಹೋದ ಹಿರಿಯರೇ ಕ್ಷಮಿಸಿ ಬಿಡಿ.
[ಈ ಬರಹದಲ್ಲಿ ಪ್ರಕಟವಾಗಿರುವ ಅಭಿಪ್ರಾಯಗಳು ಲೇಖಕರದ್ದು.]