– ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಸಮಿತಿಯಲ್ಲಿ ಹೈ ಡ್ರಾಮಾ
– ಒಂದು ಗಂಟೆ ಬಳಿಕ ಯುವಕರಿಂದ ರಕ್ಷಣೆ
ಚಿಕ್ಕಮಗಳೂರು: ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಸಮಿತಿಯಲ್ಲಿ 30 ಲಕ್ಷ ರೂ. ದುರುಪಯೋಗ ಆರೋಪ ಕೇಳಿ ಬಂದ ಹಿನ್ನೆಲೆ ಸಹಕಾರ ಮಾರಾಟ ಸಮಿತಿಯ ಮಾಜಿ ಅಧ್ಯಕ್ಷ ಕಟ್ಟಡದ ಮೇಲೆ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಘಟನೆ ನಡೆದಿದ್ದು, ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಮೂಡಿಗೆರೆ ತಾಲೂಕಿನ ಮಗ್ಗಲಮಕ್ಕಿ ಲಕ್ಷ್ಮಣ ಗೌಡ ಎಂದು ಗುರುತಿಸಲಾಗಿದೆ. ಮೂಡಿಗೆರೆ ತಾಲೂಕಿನ ಮಗ್ಗಲಮಕ್ಕಿ ಗ್ರಾಮದ ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಸಮಿತಿ ಮಾಜಿ ಅಧ್ಯಕ್ಷ ಲಕ್ಷ್ಮಣ ಗೌಡ ಮೇಲೆ 30 ಲಕ್ಷ ರೂ. ದುರುಪಯೋಗದ ಆರೋಪ ಕೇಳಿ ಬಂದಿತ್ತು.
Advertisement
Advertisement
ಈ ಹಿನ್ನೆಲೆ ಇಂದು ಎಪಿಎಂಸಿಯ ರೈತ ಭವನದಲ್ಲಿ ನಡೆಯುತ್ತಿದ್ದ ಸಹಕಾರ ಸಮಿತಿಯ ಸಭೆಯಲ್ಲಿ ಲಕ್ಷ್ಮಣ ಗೌಡರಿಗೆ ಮಾತನಾಡಲು ಅವಕಾಶ ಕೊಟ್ಟಿಲ್ಲ. ಇದರಿಂದ ಮನನೊಂದ ಲಕ್ಷ್ಮಣ ಗೌಡ, ನಾನು ಹಣ ದುರುಪಯೋಗ ಮಾಡಿಕೊಂಡಿಲ್ಲ, ನೀವೆಲ್ಲ ನನ್ನ ಮೇಲೆ ಆರೋಪ ಮಾಡುತ್ತಿದ್ದೀರಿ, ನಾನು ಸಾಯುತ್ತೇನೆ ಎಂದು ಏಕಾಏಕಿ ರೈತ ಭವನದ ಕಟ್ಟಡ ಏರಿದ್ದಾರೆ. ಈ ವೇಳೆ ಲಕ್ಷ್ಮಣ ಗೌಡರನ್ನ ಕೆಳಗಿಳಿಸಲು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ.
Advertisement
Advertisement
ಸ್ಥಳಕ್ಕೆ ಆಗಮಿಸಿದ ಮೂಡಿಗೆರೆ ಪೊಲೀಸರು ಕೂಡ ಬಿಲ್ಡಿಂಗ್ ಏರಿದ್ದ ಲಕ್ಷ್ಮಣ ಅವರನ್ನು ಕೆಳಗಿಳಿಸಲು ಹರಸಾಹಸ ಪಟ್ಟಿದ್ದಾರೆ. ಸುಮಾರು ಒಂದು ಗಂಟೆಯ ಬಳಿಕ ಗಮನ ಬೇರೆಡೆ ಸೆಳೆದು, ಹಿಂದೆಯಿಂದ ಇಬ್ಬರು ಯುವಕರು ಹೋಗಿ ವ್ಯಕ್ತಿಯನ್ನು ಹಿಡಿದು ಲಾಕ್ ಮಾಡಿ ರಕ್ಷಿಸಿದ್ದಾರೆ. ನಂತರ ಸಭೆಯಲ್ಲಿ ಭಾಗಿಯಾದ ಲಕ್ಷ್ಮಣ ಗೌಡ, ಎಲ್ಲರೂ ಸೇರಿ ನನ್ನನ್ನು ಸಾಯಿಸೋಕೆ ಹೊರಟಿದ್ದೀರಾ ಎಂದು ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತಿನ ಚಕಮಕಿ, ನೂಕಾಟ-ತಳ್ಳಾಟ ಕೂಡ ನಡೆಯಿತು. ಸ್ಥಳೀಯರು ಹಾಗೂ ಸಭೆಯಲ್ಲಿ ನೆರೆದಿದ್ದ ಸದಸ್ಯರು ನೀವು ಹಿರಿಯರು, ಬುದ್ಧಿ ಹೇಳಬೇಕಾದವರು. ನೀವೇ ಹೀಗೆ ಮಾಡಿದ್ದು ಸರಿಯಲ್ಲ ಎಂದು ಲಕ್ಷ್ಮಣ ಗೌಡರನ್ನ ತರಾಟೆಗೆ ತೆಗೆದುಕೊಂಡರು.